More

    ನಿಷೇಧಾಜ್ಞೆ, ಕರ್ಫ್ಯೂ ಮುಂದುವರಿಕೆ

    ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣದ ಬೆನ್ನಲ್ಲೇ ಶುಕ್ರವಾರ ರಾತ್ರಿ ಬಿ.ಬಿ.ಸ್ಟ್ರೀಟ್​ನಲ್ಲಿ ಕಿಡಿಗೇಡಿಗಳು ಮತ್ತೆರಡು ಬೈಕ್​ಗಳಿಗೆ ಬೆಂಕಿ ಹಚ್ಚಿದ್ದಾರೆ. ಇಡೀ ಶಿವಮೊಗ್ಗದಲ್ಲಿ ವಾತಾವರಣ ಬೂದಿಮುಚ್ಚಿದ ಕೆಂಡದಂತಿದ್ದು, ಡಿ.7ರ ಬೆಳಗ್ಗೆ 10ರವರೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹಾಗೂ ದೊಡ್ಡಪೇಟೆ, ಕೋಟೆ ಮತ್ತು ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಮುಂದುವರಿಯಲಿದೆ.

    ಈಗಾಗಲೇ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 81 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಜರಂಗ ದಳದ ನಗರ ಸಹ ಸಂಚಾಲಕ ನಾಗೇಶ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪತ್ತೆಗೂ ಪೊಲೀಸರು ಬಲೆ ಬೀಸಿದ್ದಾರೆ. ಪರಿಸ್ಥಿತಿ ಶಾಂತಗೊಳಿಸಲು ಎಲ್ಲೆಡೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಇದರಿಂದ ಇನ್ನೆರಡು ದಿನ ನಗರಾದ್ಯಂತ ವ್ಯಾಪಾರ-ವಹಿವಾಟು ಬಹುತೇಕ ಸ್ತಬ್ಧಗೊಳ್ಳಲಿದೆ.

    ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ಸಭೆ, ಸಮಾರಂಭ ನಡೆಸದಂತೆ ತಾಲೂಕು ಆಡಳಿತ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ ಕೂಡ ನಗರ ವ್ಯಾಪ್ತಿಯೊಳಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಕಲ್ಪಿಸಿದೆ. ಬಿ.ಎಚ್.ರಸ್ತೆ, ನೆಹರು ರಸ್ತೆ, ಗಾಂಧಿಬಜಾರ್ ಒಳಗೊಂಡಂತೆ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್​ಗಳನ್ನು ಅಳವಡಿಸಲಾಗಿದೆ. ಹೊರ ಭಾಗಗಳಿಂದ ಬಂದ ವಾಹನಗಳನ್ನು ಬೈಪಾಸ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

    ಕಿಡಿಗೇಡಿಗಳಿಂದ ಎರಡು ಬೈಕ್​ಗೆ ಬೆಂಕಿ: ಶುಕ್ರವಾರ ರಾತ್ರಿ ಬಿ.ಬಿ.ಸ್ಟ್ರೀಟ್​ನ ಲಾಲ್ ಬಂದ್ ಕೇರಿ ಹಾಗೂ ರಾಮಣ್ಣ ಶ್ರೇಷ್ಠಿ ಪಾರ್ಕ್ ರಸ್ತೆಯಲ್ಲಿ ಎರಡು ಬೈಕ್​ಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಲಾಲ್ ಬಂದ್ ಕೇರಿಯ ಮನೆ ಮುಂದೆ ನಿಲ್ಲಿಸಿದ್ದ ಬೈಕ್​ನ್ನು ದುಷ್ಕರ್ವಿುಗಳು ಸುಟ್ಟುಹಾಕಿದ್ದಾರೆ. ರಾಮಣ್ಣ ಶ್ರೇಷ್ಠಿ ಪಾರ್ಕ್ ರಸ್ತೆಯಲ್ಲಿ ಮೆಕ್ಯಾನಿಕ್​ಗೆ ಸೇರಿದ ಬೈಕ್​ಗೆ ಬೆಂಕಿ ಹಚ್ಚಿದ್ದಾರೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ತಕ್ಷಣವೇ ಅಕ್ಕಪಕ್ಕದವರು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಈ ಘಟನೆಗಳಿಂದ ಜನರಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts