More

    ಶೇ. 53 ಮತದಾನ ದಾಖಲು: ಬಿಹಾರದ 2ನೇ ಹಂತದ ಚುನಾವಾಣೆ, ಕಣದಲ್ಲಿ ಪ್ರತಿಷ್ಠಿತರು

    ಪಟನಾ: ಬಿಹಾರ ವಿಧಾನಸಭೆಗೆ ಮಂಗಳವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇಕಡ 53.51ಕ್ಕಿಂತ ಹೆಚ್ಚು ಮತದಾನವಾಗಿದೆ. 17 ಜಿಲ್ಲೆಗಳ 94 ಕ್ಷೇತ್ರಗಳ 2.85 ಕೋಟಿ ಮತದಾರರ ಪೈಕಿ ಅರ್ಧಕ್ಕಿಂತ ಹೆಚ್ಚು ಜನರು ಮತದಾನದಲ್ಲಿ ಪಾಲ್ಗೊಂಡರು ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಒಟ್ಟು 1463 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಿತು. ಈ ಪ್ರಕ್ರಿಯೆ ಬಹುತೇಕ ಶಾಂತಿಯುತವಾಗಿತ್ತು ಎಂದು ಚುನಾವಣೆ ಆಯೋಗ ತಿಳಿಸಿದೆ. ಅ. 28ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇಕಡ 55.69 ಮತದಾನವಾಗಿತ್ತು. ಕರೊನಾ ರೋಗಿಗಳು, ರೋಗ ಲಕ್ಷಣ ಇರುವವರಿಗಾಗಿ ಮತದಾನ ಮಾಡಲು ಒಂದು ಗಂಟೆ ಹೆಚ್ಚುವರಿ ಸಮಯ ನೀಡಲಾಗಿತ್ತು. ಆದರೆ, ಮಾವೋಉಗ್ರರ ಕಾಟ ಹೆಚ್ಚಿರುವ ಪ್ರದೇಶಗಳಲ್ಲಿ ಮತದಾನವನ್ನು ಬೇಗನೆ ಪೂರ್ಣ ಗೊಳಿಸಲಾಯಿತು ಎಂದು ಆಯೋಗ ತಿಳಿಸಿದೆ.

    ಸಂಸತ್​ನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ ನೂರೂ ಇಲ್ಲ

    ಫೋರ್ಬಸ್​ಗಂಜ್​ನಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಸಂಸತ್​ನ ಉಭಯ ಸದನಗಳಲ್ಲಿ ಈ ಪಕ್ಷ ನೂರು ಸದಸ್ಯರನ್ನೂ ಹೊಂದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದ್ದರೆ, ಅದು ಬೇರೆ ಪಕ್ಷದ ಸೆರಗನ್ನು (ಆಸರೆ) ಹಿಡಿಯುತ್ತದೆ ಎಂದು ವ್ಯಂಗ್ಯವಾಡಿದರು. ಬಿಜೆಪಿಯ ಒಂಬತ್ತು ಅಭ್ಯರ್ಥಿಗಳು ಸೋಮವಾರ ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸದಸ್ಯರ ಸಂಖ್ಯೆ ನೂರನ್ನು ದಾಟಿದೆ. ಆದರೆ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಕಾಂಗ್ರೆಸ್​ನ ಒಟ್ಟು ಸದಸ್ಯರ ಬಲ ಕೇವಲ 89 ಆಗಿದ್ದು ಪಕ್ಷ ದಯನೀಯ ಸ್ಥಿತಿಯಲ್ಲಿದೆ.

    ಮೋದಿಗೆ ಭರವಸೆ ನೆನಪಿಸಿದ ತೇಜಸ್ವಿ

    ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್, ರಾಜ್ಯದ ಅಭಿವೃದ್ಧಿ ಕುರಿತು ಈ ಹಿಂದೆ ನೀಡಿದ್ದ ಆಶ್ವಾಸನೆಗಳನ್ನು ನೆನಪಿಸಿದ್ದಾರೆ. ಹಿಂದಿಯಲ್ಲಿ ಬರೆದಿರುವ ಪತ್ರವನ್ನು ಮಂಗಳವಾರ ಟ್ವಿಟರ್​ನಲ್ಲಿ ಪ್ರಕಟಿಸಿರುವ ಅವರು, ‘ಕಳೆದ ಆರು ವರ್ಷಗಳಲ್ಲಿ ಬಿಹಾರದ ಜನರಿಗೆ ನೀವು ನೀಡಿದ್ದ ಆಶ್ವಾಸನೆಗಳನ್ನು ಮರೆತಿಲ್ಲವೆಂದು ಆಶಿಸುತ್ತೇನೆ’ ಎಂದಿದ್ದಾರೆ. 2015ರ ಚುನಾವಣೆ ವೇಳೆ, ಬಿಹಾರಕ್ಕೆ ವಿಶೇಷ ಸ್ಥಾನಮಾನ ಹಾಗೂ 1.25 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ನೀಡುವುದಾಗಿ ಮೋದಿ ಘೋಷಿಸಿದ್ದರು.

    ಪಶ್ಚಿಮ ಬಂಗಾಳದತ್ತ ಬಿಜೆಪಿ ಚಿತ್ತ

    ಮುಂದಿನ ವರ್ಷ ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದ ಮೇಲೆ ಬಿಜೆಪಿ ಕಣ್ಣಿರಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಗುರುವಾರ ಮತ್ತು ಶುಕ್ರವಾರ ಬಂಗಾಳ ಪ್ರವಾಸ ಕೈಗೊಳ್ಳಲಿದ್ದಾರೆ. ಪಕ್ಷ ಸಂಘಟನೆ ಬಲಪಡಿಸಿ ಚುನಾವಣೆ ತಂತ್ರ ಹೆಣೆಯುವುದು ಷಾ ಭೇಟಿಯ ಉದ್ದೇಶವಾಗಿದೆ. ಮುಕುಲ್ ರಾಯ್ ಮತ್ತು ಅನುಪಮ್ ಹಜ್ರಾ ಮೊದಲಾದ ತೃಣ ಮೂಲ ಕಾಂಗ್ರೆಸ್ ಮಾಜಿ ನಾಯಕರಿಗೆ ರಾಜ್ಯ ಬಿಜೆಪಿ ಘಟಕದಲ್ಲಿ ಪ್ರಮುಖ ಹುದ್ದೆಗಳನ್ನು ನೀಡಿದೆ.

    ಮತದಾನದ ವೇಳೆ ಕಿರಿಕಿರಿ

    • ಮಧುಬನಿ ಜಿಲ್ಲೆಯ ಹರ್ಲಖಿಯಲ್ಲಿ ಸಿಎಂ ನಿತೀಶ್ ಕುಮಾರ್ ಭಾಗವಹಿಸಿದ್ದ ರ‍್ಯಾಲಿ ಮೇಲೆ ಕಲ್ಲು ಹಾಗೂ ಈರುಳ್ಳಿ ತೂರಾಟ ನಡೆದಿದೆ. ಯಾರಿಗೂ ಅಪಾಯ ಆಗಿಲ್ಲ
    • ಮಧ್ಯಪ್ರದೇಶದ ಮತದಾನ ಕೇಂದ್ರವೊಂದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಧ್ಯೆ ಘರ್ಷಣೆ ನಡೆದಿದೆ.
    • ಮಧ್ಯಪ್ರದೇಶದ ಮೊರೆನಾ ಸುಮಾವಳಿ ಕ್ಷೇತ್ರದ ಎರಡು ಕಡೆ ಗುಂಡು ಹಾರಿಸಿದ ಪ್ರತ್ಯೇಕ ಪ್ರಕರಣಗಳು ನಡೆದು ಮತದಾನಕ್ಕೆ ಸ್ವಲ್ಪ ಸಮಯ ಅಡ್ಡಿಯಾಯಿತು.
    • ಉತ್ತರ ಪ್ರದೇಶದ ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್ ಶಿಕ್ಷೆಗೆ ಒಳಗಾಗಿ ಶಾಸಕಸ್ಥಾನದಿಂದ ಅನರ್ಹಗೊಂಡ ಕಾರಣ ಉನ್ನಾವೋ ಜಿಲ್ಲೆಯ ಬಂಗಾರ್​ವೌ ಕ್ಷೇತ್ರದ ಉಪಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

    ಮಧ್ಯಪ್ರದೇಶದ 28 ಸೇರಿ 54 ಕ್ಷೇತ್ರದಲ್ಲಿ ಬೈಎಲೆಕ್ಷನ್

    ಮಧ್ಯಪ್ರದೇಶದ 28 ಸೇರಿ ಹತ್ತು ರಾಜ್ಯಗಳ 54 ಅಸೆಂಬ್ಲಿ ಸ್ಥಾನಗಳಿಗೆ ಉಪಚುನಾವಣೆ ನಡೆದಿದೆ. ಗುಜರಾತ್ (8), ಉತ್ತರ ಪ್ರದೇಶ (7), ಒಡಿಶಾ, ನಾಗಾಲ್ಯಾಂಡ್, ಕರ್ನಾಟಕ, ಜಾರ್ಖಂಡ್ (ತಲಾ 2), ಛತ್ತೀಸ್​ಗಢ, ತೆಲಂಗಾಣ ಮತ್ತು ಹರಿಯಾಣ (ತಲಾ 1) ಮತದಾನ ನಡೆದಿದೆ. ಜ್ಯೋತಿರಾದಿತ್ಯ ಸಿಂಧಿಯಾ ಜತೆಗೆ ಬಿಜೆಪಿ ಸೇರಿದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ದ್ದರಿಂದ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರ ಸೂತ್ರ ಹಿಡಿದಿದೆ. ಹೀಗಾಗಿ ಸಿಂಧಿಯಾಗೆ ಉಪಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts