More

    ಬೈಕಲ್ಲಿ ಸುತ್ತಾಡಿ ಪಾಠ ಮಾಡಿದೆ

    ಬೆಳಗಾವಿ: ಬಸ್ ಸೌಲಭ್ಯ ಹೊಂದಿರದ ಹಳ್ಳಿಯ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ ನಾನು. ಇದೇ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಕೆಲ ಶಿಕ್ಷಕರು ಕೂಡಿಕೊಂಡು, ಬೈಲಹೊಂಗಲದಿಂದ ಖಾಸಗಿ ವಾಹನದಲ್ಲಿ ನಿತ್ಯವೂ ಶ್ರೀರಂಗಪುರಕ್ಕೆ ತೆರಳುತ್ತಿದ್ದೆವು. ಅಲ್ಲಿನ ಮಕ್ಕಳಿಗೆ ಪಾಠ ಬೋಧನೆ ಮಾಡುವುದರಲ್ಲೇ ಖುಷಿ ಕಾಣುತ್ತಿದ್ದೆವು… ಹೀಗೆಂದು, ಹಳ್ಳಿಯೊಂದರ ಶೈಕ್ಷಣಿಕ ವ್ಯವಸ್ಥೆಯ ಕುರಿತು ಮಾಹಿತಿ ತೆರೆದಿಟ್ಟರು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶ್ರೀರಂಗಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವಿನೋದ ರಾ.ಪಾಟೀಲ. ಏಕಾಏಕಿ ಕರೊನಾ ವೈರಸ್ ವಕ್ಕರಿಸಿದ್ದರಿಂದ ಶಿಕ್ಷಣ ವ್ಯವಸ್ಥೆಯೇ ಹಳಿ ತಪ್ಪಿತು. ಸುದೀರ್ಘ ಕಾಲ ಮಕ್ಕಳ ಒಡನಾಟದಿಂದ ದೂರವಾದೆವು. ಆದರೆ, ಮಕ್ಕಳ ಕಲಿಕೆಗೆ ತೊಂದರೆಯಾಗದಿರಲಿ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ‘ವಿದ್ಯಾಗಮ’ ಎಂಬ ಶೈಕ್ಷಣಿಕ ಕಾರ್ಯಕ್ರಮ ರೂಪಿಸಿತು. ವಿದ್ಯಾರ್ಥಿಗಳ ಮನೆಗೆ ತೆರಳಿ ಬೋಧನೆ ಮಾಡಲು ಸೂಚಿಸಿತು.

    ತೋಟದ ಮನೆಗಳಲ್ಲಿ ಮಕ್ಕಳ ವಾಸ: ನಾನು ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ತೋಟದ ಮನೆಗಳಲ್ಲೇ ವಾಸಿಸುತ್ತಾರೆ. ಅಲ್ಲೊಂದು, ಇಲ್ಲೊಂದು ಮನೆಗಳಿವೆ. ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಖಾಸಗಿ ವಾಹನ ಅವಲಂಬಿಸದೆ, ನನ್ನ ಬೈಕ್‌ನಲ್ಲೇ ಪ್ರತಿ ವಿದ್ಯಾರ್ಥಿ ಮನೆಗೆ ತೆರಳಿದೆ. ಕೆಲವೆಡೆ ನಿರ್ದಿಷ್ಟ ಸ್ಥಳದಲ್ಲಿ ದೈಹಿಕ ಅಂತರದೊಂದಿಗೆ ನಾಲ್ಕೈದು ವಿದ್ಯಾರ್ಥಿಗಳನ್ನು ಮಾತ್ರ ಕೂಡ್ರಿಸಿ ಪಾಠ ಮಾಡಿದೆ. ಕಲಿಕಾ ಸಾಮಗ್ರಿಗಳನ್ನೂ ವಿತರಿಸಿದೆ. ಕರೊನಾ ವೈರಸ್ ಘಟನೆ ಬಳಿಕ ವಿದ್ಯಾರ್ಥಿಗಳ ಜತೆಗೆ, ನಾನು ಒಂದಿಷ್ಟು ಹೊಸ ಪಾಠಗಳನ್ನು ಕಲಿತೆ ಎನ್ನುತ್ತಾರೆ ಶಿಕ್ಷಕ ವಿನೋದ.

    ನನ್ನ ಪಾಲಿಗೆ ಇದೊಂದು ಹೊಸ ಅನುಭವ. ಉತ್ಸಾಹದಿಂದಲೇ ಕೆಲಸ ಮಾಡಿದ್ದರಿಂದಾಗಿ ಮನಸ್ಸಿಗೆ ಸಂತೃಪ್ತಿ ಸಿಕ್ಕಿತು. ಇನ್ನೂ ಅನೇಕ ವಿದ್ಯಾರ್ಥಿಗಳ ಮನೆಗೆ ತೆರಳಿದಾಗ, ಕುಟುಂಬಸ್ಥರು ನೀಡಿದ ಪ್ರೀತಿಯ ಆತಿಥ್ಯ ಶಿಕ್ಷಕ ವೃತ್ತಿ ಮೇಲಿನ ಗೌರವವನ್ನು ಇನ್ನಷ್ಟು ಹೆಚ್ಚಿಸಿತು.
    | ವಿನೋದ ರಾ. ಪಾಟೀಲ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀರಂಗಪುರ, ತಾ.ಸವದತ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts