More

    ರೈತ ಸಂಘದಿಂದ 14ರಂದು ಬೃಹತ್ ಪ್ರತಿಭಟನೆ

    ಶಿವಮೊಗ್ಗ: ಭೂತಾನ್‌ನಿಂದ ಅಡಕೆ ಆಮದು ಮಾಡಿಕೊಳ್ಳಲು ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಅಡಕೆ ಮಾರಾಟ ಸಹಕಾರ ಸಂಘಗಳ ಒಕ್ಕೂಟ, ಅಡಕೆ ವರ್ತಕರ ಸಂಘದ ಸಹಯೋಗದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಅ.14ರಂದು ಬೆಳಗ್ಗೆ 10ಕ್ಕೆ ನಗರದಲ್ಲಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಂಡಿದೆ ಎಂದು ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು.
    ಖಾಸಗಿ ಬಸ್ ನಿಲ್ದಾಣದಿಂದ ಪ್ರತಿಭಟನಾ ಮೆರವಣಿಗೆ ಹೊರಡಲಿದ್ದು ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡು ಪ್ರತಿಭಟನಾ ಸಭೆ ನಡೆಸಲಾಗುವುದು. ಅಲ್ಲಿ ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಭೂತಾನ್‌ನಿಂದ 17 ಸಾವಿರ ಮೆಟ್ರಿಕ್ ಟನ್ ಹಸಿ ಅಡಕೆಯನ್ನು ಪ್ರತಿವರ್ಷ ಕನಿಷ್ಠ ಆಮದು ಸುಂಕ (ಎಂಐಪಿ)ದ ಷರತ್ತು ಇಲ್ಲದೇ ಆಮದು ಮಾಡಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದೆ. ಇದರಿಂದ ಮುಂದಿನ ದಿನಗಳಲ್ಲಿ 50 ಸಾವಿರ ಮೆಟ್ರಿಕ್ ಟನ್‌ಗಿಂತಲೂ ಆಮದನ್ನು ಹೆಚ್ಚಿಸಬಹುದು. ಆಗ ಸ್ವದೇಶಿ ಅಡಕೆ ಬೆಲೆ ಕಡಿಮೆ ಆಗಲಿದೆ. ಇದು ಅಡಕೆ ಬೆಳೆಗಾರರ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಈಗಾಗಲೇ ರೈತ ಸಂಘಟನೆ ಮತ್ತು ಅಡಕೆ ಸಹಕಾರಿ ಸಂಸ್ಥೆಗಳು ಪರಿಷ್ಕರಣಾ ಕೆಜಿ ಅಡಕೆಗೆ ಆಮದು ಸುಂಕವನ್ನು 260ರಿಂದ 360 ರೂ.ಗೆ ಹೆಚ್ಚಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಹೀಗಿರುವಾಗ ಆಮದು ಸುಂಕವಿಲ್ಲದೆ ಅಡಕೆ ಆಮದು ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
    ತೀರ್ಥಹಳ್ಳಿ ಸಹ್ಯಾದ್ರಿ ಅಡಕೆ ಸಹಕಾರ ಸಂಘದ ಅಧ್ಯಕ್ಷ ಎಚ್.ಎನ್.ವಿಜಯದೇವ್, ರೈತ ಸಂಘದ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಡಿ.ಮಂಜಪ್ಪ, ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts