More

    ಚಿನ್ನೇನಹಳ್ಳಿಯಲ್ಲಿ ವಿಗ್ರಹಗಳ ಸ್ಥಾಪನೆ ವಿವಾದ

    ಕೊಟ್ಟೂರು: ತಾಲೂಕಿನ ಚಿನ್ನೇನಹಳ್ಳಿಯಲ್ಲಿ ವಿಗ್ರಹಗಳ ಸ್ಥಾಪನೆ ವಿಚಾರ ಎರಡು ಸಮುದಾಯಗಳ ನಡುವಿನ ವಿವಾದಕ್ಕೆ ಕಾರಣವಾಗಿದ್ದು, ವಾತಾವರಣ ಬೂದಿ ಮುಚ್ಚಿದ ಕೆಂಡದಂತಿದೆ.

    ವಾಲ್ಮೀಕಿ ಸಮುದಾಯ ಮದಕರಿ ನಾಯಕನ ವಿಗ್ರಹ ಹಾಗೂ ಭೋವಿ ಸಮುದಾಯದ ಸಿದ್ಧರಾಮೇಶ್ವರ ಸ್ವಾಮಿ ವಿಗ್ರಹ ಸ್ಥಾಪನೆ ಕುರಿತು ಬಹುದಿನಗಳಿಂದ ಜಟಾಪಟಿ ನಡೆಯುತ್ತ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿ, ಗ್ರಾಮಸ್ಥರು ಭಯದ ಜೀವನ ನಡೆಸುವಂತಾಗಿದೆ.

    ಘಟನೆ ವಿವರ: ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಅನತಿ ದೂರದಲ್ಲಿ ಈಗಾಗಲೇ ಮದಕರಿ ನಾಯಕನ ವಿಗ್ರಹ ಸ್ಥಾಪನೆಗೆ ವೃತ್ತಕಾರದ ಕಟ್ಟೆಯನ್ನು ನಿರ್ಮಿಸಿದ್ದು, ಅಶ್ವರೂಢ ಮದಕರಿ ನಾಯಕನ ವಿಗ್ರಹ ನಿರ್ಮಾಣ ಕೊನೇ ಹಂತಕ್ಕೆ ತಲುಪಿದೆ. ಇದಕ್ಕಾಗಿ ವಾಲ್ಮೀಕಿ ಸಮಾಜ ಅಂದಾಜು 6ರಿಂದ 8 ಲಕ್ಷ ರೂ. ವೆಚ್ಚ ಮಾಡಿದೆ.
    ಆದರೆ, ಮದಕರಿ ನಾಯಕನ ವಿಗ್ರಹ ಸ್ಥಾಪಿಸುತ್ತಿರುವ ಸ್ಥಳ ಸೂಕ್ತವಾಗಿಲ್ಲ. ವಿಗ್ರಹ ಸ್ಥಾಪನೆಯಿಂದ ಆಂಜನೇಯ ಸ್ವಾಮಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಕ್ಕೆ ಅಡ್ಡಿಯಾಗಲಿದೆ ಎಂಬುದು ಬೋವಿ ಸಮಾಜದವರ ವಾದ.

    ಅದೇರೀತಿ ಬೋವಿ ಸಮಾಜದವರು ಸಾರ್ವಜನಿಕ ನಾಟಕ ಪ್ರದರ್ಶಿಸುವ ಸ್ಥಳದಲ್ಲಿ ಸಿದ್ದರಾಮೇಶ್ವರ ಸ್ವಾಮಿ ವಿಗ್ರಹ ಸ್ಥಾಪಿಸಲು ಮುಂದಾಗಿದ್ದು, ಇದಕ್ಕೆ ವಾಲ್ಮೀಕಿ ಸಮಾಜದವರ ವಿರೋಧವಿದೆ. ಈ ಸ್ಥಳದಲ್ಲಿ ಮೂರ್ತಿ ಸ್ಥಾಪಿಸಿದರೆ ನಾಟಕ ಪ್ರದರ್ಶನಗಳಿಗೆ ಅಡ್ಡಿಯಾಗುತ್ತದೆ ಎಂಬುದು ಅವರ ವಾದ.

    ಈ ಎರಡು ಸಮುದಾಯದವರು ತಮ್ಮ ವಾದಗಳನ್ನು ಮುಂದಿಟ್ಟುಕೊಂಡು ಗ್ರಾಪಂ, ತಾಪಂ, ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ಮದಕರಿನಾಯಕನ ವಿಗ್ರಹ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದಲ್ಲದೆ, ವಿಗ್ರಹದ ಸುತ್ತ ಬಟ್ಟೆ ಕಟ್ಟಲಾಗಿದೆ. ಸಿದ್ದರಾಮೇಶ್ವರ ಸ್ವಾಮಿ ವಿಗ್ರಹ ಸ್ಥಾಪನೆ ಸಿದ್ಧತೆಯೂ ನಿಂತಿದೆ. ಈ ವಿವಾದ ಫೆಬ್ರವರಿ ತಿಂಗಳಿಂದಲೂ ಹೊಗೆಯಾಡುತ್ತಿದ್ದು, ಡಿಸಿ, ಎಸ್ಪಿ ಸಮ್ಮುಖದಲ್ಲಿ ಚರ್ಚೆಗಳು ನಡೆದಿದ್ದರೂ ತಾರ್ಕಿಕ ಅಂತ್ಯ ಸಿಕ್ಕಿಲ್ಲ.

    ಗ್ರಾಮದ ಇತಿಹಾಸ: ಚಿನ್ನೇನಹಳ್ಳಿ ವಿಜಯನಗರ ಸಾಮ್ರಾಜ್ಯಕ್ಕೆ ಒಳಪಟ್ಟಿದ್ದ ಗ್ರಾಮ. ಅಂದು ನೂರಾರು ಬ್ರಾಹ್ಮಣರ ಕುಟುಂಬಗಳಿದ್ದ ದೊಡ್ಡ ಅಗ್ರಹಾರವಾಗಿತ್ತು. ಈ ಊರಿನ ಮೂಲ ಹೆಸರು ಶೇಷಮ್ಮನಹಳ್ಳಿ. 1705ರಲ್ಲಿ ಈ ಗ್ರಾಮವನ್ನು ಚೆನ್ನೆಯ್ಯನೆಂಬ ಬ್ರಾಹ್ಮಣನಿಗೆ ದತ್ತಿರೂಪದಲ್ಲಿ ಕೊಟ್ಟಿದ್ದರಿಂದ ಚೆನ್ನೆಯ್ಯನಹಳ್ಳಿ ಜನರ ಆಡುಭಾಷೆಯಲ್ಲಿ ಚಿನ್ನೇನಹಳ್ಳಿಯಾಗಿದೆ. ಸುಮಾರು ಒಂದು ಸಾವಿರ ಜನ ಸಂಖ್ಯೆ ಹೊಂದಿದ್ದು, 250 ಮನೆಗಳಿವೆ. ಈ ಗ್ರಾಮ ಕಾಳಾಪುರ ಗ್ರಾಮಪಂಚಾಯಿತಿಗೆ ಸೇರಿದೆ. ಇದು ಕೊಟ್ಟೂರು ತಾಲೂಕಿಗೆ ಒಳಪಟ್ಟಿದೆ. ಆದರೆ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಗ್ರಾಮದಲ್ಲಿ ವಾಲ್ಮೀಕಿ, ಬೋವಿ, ಸಾಧು ಲಿಂಗಾಯಿತರು, ಜಂಗಮರು, ಹರಿಜನರು ಇದ್ದಾರೆ.

    ನಮ್ಮೂರಿನಲ್ಲಿ ವಾಲ್ಮೀಕಿ, ಬೋವಿ ಎಂಬ ಬೇಧ-ಭಾವವಿಲ್ಲ. ನಮ್ಮ ಸ್ನೇಹ ಸಂಬಂಧ ನೋಡಿದವರು ಗ್ರಾಮದಲ್ಲಿ ಯಾರು ಬೋವಿಗಳು, ಯಾರು ವಾಲ್ಮೀಕಿ ಎಂಬುದೇ ಗೊತ್ತಾಗದಂತೆ ಅಷ್ಟೊಂದು ಪ್ರೀತಿ, ವಿಶ್ವಾಸ, ಅನ್ಯೋನತೆಯಲ್ಲಿದ್ದೆವು. ಮದಕರಿ ನಾಯಕನ ವಿಗ್ರಹ ಸ್ಥಾಪನೆಗೆ ಬೋವಿ ಸಮಾಜದವರು ಬಂದು ಶುಭಕೋರಿದ್ದರು. ಈಗ ವಿಗ್ರಹ ಸ್ಥಾಪನೆಗೆ ವೃತ್ತಕಾರದ ಕಟ್ಟೆ, ವಿಗ್ರಹ ನಿರ್ಮಾಣ ಕೆಲಸ ಶೇ.80 ಮುಗಿದಿದೆ. ಈಗ ವಿವಾದ ಆರಂಭವಾಗಿ ವಿಗ್ರಹ ನಿರ್ಮಾಣ ಸ್ಥಗಿತಗೊಂಡಿದೆ.
    ಅಕ್ಕಪ್ಪ, ವಾಲ್ಮೀಕಿ ಸಮಾಜದ ಮುಖಂಡ, ಚಿನ್ನೇನಹಳ್ಳಿ

    ವಾಲ್ಮೀಕಿ ಸಮಾಜದವರು ನಾವು ಸಹೋದರರಂತೆ ಇದ್ದೇವೆ. ಮುಂದೆಯೂ ಹಾಗೆಯೇ ಇರಬೇಕೆಂಬುದು ನಮ್ಮ ಆಸೆ. ಆದರೆ, ಮದಕರಿನಾಯಕನ ಮೇಲಾಗಲಿ, ವಾಲ್ಮೀಕಿ ಸಮಾಜದ ಮೇಲಾಗಲಿ ನಮ್ಮ ದ್ವೇಷವೇನು ಇಲ್ಲ. ಈ ವಿಗ್ರಹಗಳ ಸಮಸ್ಯೆ ಉಂಟಾದರೂ ನಾವು ಪರಸ್ಪರ ವಾದ-ವಿವಾದ ಮಾಡಿಕೊಂಡಿಲ್ಲ. ಈಗ ಒಬ್ಬರಿಗೊಬ್ಬರು ಮಾತನಾಡದಂತಾಗಿದ್ದೇವೆ. ಊರಲ್ಲಿ ಪೊಲೀಸರ ಕಾವಲಿದೆ. ಇದು ಸೌಹಾರ್ದಯುತವಾಗಿ ಬಗೆಹರಿದು ಊರಲ್ಲಿ ಶಾಂತಿ ನೆಮ್ಮದಿ ನೆಲೆಸಿದರೆ ಸಾಕು.
    ಬಸವರಾಜಪ್ಪ, ಬೋವಿ ಸಮಾಜದ ಮುಖಂಡ. ಚಿನ್ನೇನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts