More

    ಭೂಸ್ವಾಧೀನ ಇತ್ಯರ್ಥಕ್ಕೆ ಪ್ರಮುಖರ ಸಭೆ ನಡೆಸಿ: ಡಿಸಿಎಂಗೆ ಮಾಜಿ ಶಾಸಕ ಬಾಲಕೃಷ್ಣ ನೇತೃತ್ವದ ನಿಯೋಗ ಮನವಿ

    ಬಿಡದಿ: ಕಂಚುಗಾರನಹಳ್ಳಿ ಮತ್ತು ಹಾರೋಹಳ್ಳಿ ಬಳಿ ಉದ್ದೇಶಿತ 5ನೇ ಹಂತದ ಕೈಗಾರಿಕಾ ಪ್ರದೇಶದ ವಿಚಾರವಾಗಿ ಭೂ ಮಾಲೀಕರು, ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳ ಸಭೆ ಕರೆಯುವಂತೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಅಶ್ವತ್ಥನಾರಾಯಣ ಅವರಿಗೆ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಮನವಿ ಮಾಡಿದ್ದಾರೆ.

    ಬೆಂಗಳೂರಿನ ವಿಕಾಸಸೌಧದಲ್ಲಿರುವ ಡಿಸಿಎಂ ಕಚೇರಿಯಲ್ಲಿ ಬಾಲಕೃಷ್ಣ, ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ, ಮಾಜಿ ಸದಸ್ಯ ಹೊಸೂರು ಎಚ್.ಸಿ.ರಾಜಣ್ಣ ಮತ್ತಿತರ ಮುಖಂಡರ ನಿಯೋಗ ಸೋಮವಾರ ಸಚಿವರನ್ನು ಭೇಟಿ ಮಾಡಿತಲ್ಲದೆ ರೈತರಿಗೆ ಭೂಮಿಯ ಒಡೆತನ ಮತ್ತು ಭೂ ಸ್ವಾಧೀನ ಸಮಸ್ಯೆ ಬಗ್ಗೆ ತಿಳಿಸಿದ್ದು, ಕೂಡಲೇ ಸಭೆ ನಡೆಸಿ ಬಡ, ಮಧ್ಯಮ ವರ್ಗದ ಭೂ ಮಾಲೀಕರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ, ಸೂಕ್ತ ಬೆಲೆ ನಿರ್ಧಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತು.

    ಕೈಗಾರಿಕಾ ಪ್ರದೇಶ ಸ್ಥಾಪನೆಗೆ ಬಿಡದಿ ಹೋಬಳಿಯ ಕಂಚುಗಾರನಹಳ್ಳಿ ಕಾವಲ್, ಯರೇಹಳ್ಳಿ ಮತ್ತು ಮುಡೇನಹಳ್ಳಿ ಬಳಿ 9,178 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಆದರೆ ಈ ಭೂಮಿಯನ್ನು ರೆಡ್ ಜೋನ್ ಎಂದು ವರ್ಗೀಕರಿಸಲಾಗಿದೆ. ಇದರಿಂದ ಭೂ ಮಾಲೀಕರು ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆಯಲು, ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ಎಡವಟ್ಟಿನಿಂದ ಪ್ರಭಾವಿಯೊಬ್ಬರ 734 ಎಕರೆ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ಬಳಕೆಯಾಗಬಾರದು ಎಂಬ ಅಂಶವನ್ನು ಕಡೆಗಣಿಸಿ ಸರ್ಕಾರ, ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿರುವುದರ ಬಗ್ಗೆ ಆ ಭಾಗದ ಜನತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಗುರುತಿಸಿರುವ ಎಲ್ಲ ಭೂಮಿಯನ್ನು ಕೆಎಐಡಿಬಿ ಸ್ವಾಧೀನಕ್ಕೆ ತೆಗೆದಕೊಳ್ಳಬೇಕು, ಇಲ್ಲವೇ ಹಸಿರು ವಲಯವನ್ನಾಗಿ ಪರಿವರ್ತಿಸಿ ರೈತರೇ ಬಳಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸಚಿವರಿಗೆ ಬಾಲಕೃಷ್ಣ ವಿವರಣೆ ನೀಡಿದರು.

    ಇತ್ತೀಚೆಗೆ ಕೆ.ಐ.ಎ.ಡಿ.ಬಿ ಅಧಿಕಾರಿಗಳು ಭೂ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಬೆಲೆ ನಿರ್ಧರಿಸಲು ರಾಮನಗರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಿದ್ದರು. ಆದರೆ ಟೌನ್‌ಶಿಪ್‌ಗೆ ಗುರುತಿಸಲಾಗಿರುವ ಎಲ್ಲ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಿ, ನಂತರ ಬೆಲೆ ನಿರ್ಧಾರಕ್ಕೆ ಬನ್ನಿ ಎಂದು ಭೂಮಾಲೀಕ ರೈತರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ ಬಗ್ಗೆಯೂ ಡಿಸಿಎಂ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿರುವ ಅಶ್ವತ್ಥನಾರಾಯಣ ಎಲ್ಲರಿಗೂ ಒಪ್ಪಿತವಾಗುವ ಕ್ರಮ ಕೈಗೊಳ್ಳುವುದಾಗಿ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
    ಕಂಚುಗಾರನಹಳ್ಳಿ ಗ್ರಾಪಂ ಮಾಜಿ ಸದಸ್ಯ ಬೈರಾರೆಡ್ಡಿ, ರೈತ ಮುಖಂಡರಾದ ಲಕ್ಷ್ಮೀನಾರಾಯಣ್, ಕೋಡಿಹಳ್ಳಿ ಕೃಷ್ಣಪ್ಪ ಮತ್ತಿತರರು ಕೂಡ ನಿಯೋಗದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts