More

    ಕಿಚ್ಚು ಹೊತ್ತಿಸಿತೇ ಹುಚ್ಚು ಅಭಿಮಾನ?

    ಪರಶುರಾಮ ಭಾಸಗಿ ವಿಜಯಪುರ

    ಭೀಮಾತೀರದಲ್ಲಿ ಯುವ ಜನತೆ ಹಾದಿ ತಪ್ಪುತ್ತಿದೆ ಎಂಬುದಕ್ಕೆ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿಯೇ ಸಾಕ್ಷಿ !
    ಹೌದು, ಅ. 2 ರಂದು ವಿಜಯಪುರ ತಾಲೂಕಿನ ಅರಕೇರಿ ಬಳಿಯ ಕನ್ನಾಳ ಕ್ರಾಸ್ ಬಳಿ ಮಧ್ಯಾಹ್ನ 3.30ಕ್ಕೆ ನಡೆದ ಭೀಕರ ದಾಳಿ ಹಿನ್ನೆಲೆ ಗಮನಿಸಿದರೆ ಎಂಥವರಿಗೂ ಅಚ್ಚರಿಯಾಗುವುದು.
    ಮೇಲ್ನೋಟಕ್ಕೆ ದಾಳಿ ಹಿಂದೆ ಹಳೇ ವೈಷಮ್ಯ ಎದ್ದು ಕಾಣುತ್ತಿದ್ದರೂ ಅಸಲಿಯತ್ತು ಬೇರೆಯೇ ಇದೆ. ತಮಗೆ ಯಾವುದೇ ಅನ್ಯಾಯ ಮಾಡದ ಸಾಹುಕಾರನ ಮೇಲೆ ಯುವ ಪಡೆ ದಾಳಿ ಮಾಡಿದೆ ಎಂದರೆ ಖಂಡಿತ ಅವರಿಗೆ ಸುಪಾರಿ ಕೊಟ್ಟಿರಬೇಕೆಂಬ ಗುಮಾನಿ ಕಾಡದೇ ಇರದು. ಆದರೆ, ವಾಸ್ತವದಲ್ಲಿ ಈ ದ್ವೇಷ, ಸುಪಾರಿ, ಕುಮ್ಮಕ್ಕು ಇವೆಲ್ಲದಕ್ಕಿಂತ ಹೆಚ್ಚಿನ ಅಂಶವೊಂದು ಕೆಲಸ ಮಾಡಿದೆ ಎಂದರೆ ನೀವು ನಂಬಲೇಬೇಕು.

    ಏನು ದಾಳಿ ಉದ್ದೇಶ?

    ಕುಖ್ಯಾತ ರೌಡಿ ಧರ್ಮರಾಜ ಚಡಚಣನ ಹತ್ಯೆಗೆ ಪ್ರತಿಕಾರವಾಗಿ ಸಾಹುಕಾರನ ಮೇಲೆ ದಾಳಿ ಮಾಡಿದ್ದು ಕೇವಲ ಒಂದಂಶದಷ್ಟು ಮಾತ್ರ ಸತ್ಯ. ಧರ್ಮರಾಜನ ಮೇಲಿನ ಹುಚ್ಚು ಅಭಿಮಾನವೇ ಈ ಕಿಚ್ಚು ಹೊತ್ತಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಅದೆಲ್ಲದಕ್ಕಿಂತ ಹೆಚ್ಚಾಗಿ ತಾವೂ ರೌಡಿಯಾಗಬೇಕು, ಭೀಮಾತೀರದ ಹಂತಕರ ಪಟ್ಟಿಯಲ್ಲಿ ಹೆಸರು ಮಾಡಬೇಕು, ಧರ್ಮರಾಜನಂತೆ ನಾವೂ ಬೆಳೆಯಬೇಕೆಂಬುದೇ ದಾಳಿ ಹಿಂದಿರುವ ಮಹತ್ತರ ಉದ್ದೇಶ. ಅದಕ್ಕಾಗಿ ಎಂಥದ್ದೇ ಕೃತ್ಯಕ್ಕೂ ನಾವು ಸಿದ್ಧ ಎಂಬುದನ್ನು ಸಾಬೀತು ಪಡಿಸುವ ಚೊಚ್ಚಲ ಪ್ರಯತ್ನವೇ ಸಾಹುಕಾರ ಮೇಲಿನ ದಾಳಿ ಎಂಬುದು ವಿಚಾರಣೆ ವೇಳೆ ಬಯಲಾಗಿದೆ.

    ಡಿಎಂಸಿ ಗ್ರುಪ್ ರಚನೆ

    ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಕೇವಲ 20-30 ವರ್ಷದೊಳಗಿನ ಸುಮಾರು 15 ಯುವಕರ ತಂಡ ನಡೆಸಿದ ಭೀಕರ ದಾಳಿ ನಿಜಕ್ಕೂ ನಿಬ್ಬೆರಗಾಗಿಸುವಂಥದ್ದು. ಧರ್ಮರಾಜನ ಕೊಲೆಗೆ ಪ್ರತಿಕಾರವಾಗಿ ಅವನ ಪುಣ್ಯತಿಥಿಯಂದೆ ಯೋಜನೆ ರೂಪಿಸಿದ ಈ ಯುವಕರ ತಂಡದ ಹೆಸರೇ ಡಿಎಂಸಿ (ಧರ್ಮರಾಜ ಮಲ್ಲಿಕಾರ್ಜುನ ಚಡಚಣ) ಗ್ರುಪ್. ಸಾಮಾಜಿಕ ಜಾಲತಾಣದ ಮೂಲಕವೇ ತಂಡ ಕಟ್ಟಿ ಪುಣೆಯ ರೌಡಿಗಳೊಂದಿಗೆ ಸಂಪರ್ಕ ಸಾಧಿಸಿ ಪಿಸ್ತೂಲ್, ಪೆಟ್ರೋಲ್ ಬಾಂಬ್ ತಯಾರಿಸಿ, ಟಿಪ್ಪರ್ ಗುದ್ದಿ, ಮಚ್ಚು- ಲಾಂಗ್‌ಗಳಿಂದ ದಾಳಿ ಮಾಡುವ ಯೋಜನೆ ರೂಪಿಸಿದ್ದು ಯಾವುದೋ ಭೂಗತ ಲೋಕದ ದೊರೆಗಳಲ್ಲ. ಬದಲಾಗಿ ಇದೇ ನವ ಯುವಕರು ಎಂದರೆ ಅಚ್ಚರಿಯಲ್ಲವೇ? ಟಂಟಂ, ಆಟೋ ಚಾಲಕನಾಗಿ, ಮೆಕ್ಯಾನಿಸಂ, ಫೈನಾನ್ಸರ್, ಟಿಪ್ಪರ್ ಚಾಲಕ ಹೀಗೆ ಸಣ್ಣಪುಟ್ಟ ಕೂಲಿ ಮಾಡಿಕೊಂಡಿದ್ದವರೇ ಇಂಥದ್ದೊಂದು ಹೊಂಚು ಹಾಕಿರುವುದು ನಿಜಕ್ಕೂ ನಿಬ್ಬೆರಗಾಗಿಸುವಂಥದ್ದೆ.
    ಒಟ್ಟಿನಲ್ಲಿ ವಿದ್ಯಾವಂತನಾಗಬೇಕು, ನೌಕರಿ ಹಿಡಿಯಬೇಕು, ಐಎಎಸ್, ಐಪಿಎಸ್‌ನಂಥ ಉನ್ನತ ಹುದ್ದೆ ಅಲಂಕರಿಸಬೇಕು, ಹಣಗಳಿಸಬೇಕು, ಹೆಸರು ಮಾಡಬೇಕೆಂದೆಲ್ಲಾ ಕನಸು ಕಾಣಬೇಕಿದ್ದ ಯುವ ಪಡೆ ರೌಡಿಯಾಗಬೇಕೆಂದು ಕನಸು ಕಾಣುತ್ತಿರುವುದು ಜಿಲ್ಲೆಯ ದುರಂತವೇ ಸರಿ.

    ಸದರಿ ದಾಳಿ ಹಿಂದೆ ಹುಚ್ಚು ಅಭಿಮಾನವೇ ಸಾಕಷ್ಟು ಕೆಲಸ ಮಾಡಿದೆ. ಧರ್ಮರಾಜನ ಮೇಲಿನ ಅಭಿಮಾನದಿಂದ ಡಿಎಂಸಿ ತಂಡ ಕಟ್ಟಿಕೊಂಡು ಏಳು ತಿಂಗಳಿಂದ ದಾಳಿಗೆ ಸಂಚು ರೂಪಿಸಿದ್ದಾರೆ. ಬಂಧಿತ ಆರೋಪಿಗಳ ಹಿನ್ನೆಲೆ ಗಮನಿಸಿದಾಗ ಯಾವುದೇ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿಲ್ಲ. ಇದು ಇವರ ಮೊದಲ ದಾಳಿ ಎಂಬುದು ತಿಳಿದು ಬಂದಿದೆ. ಎಲ್ಲರೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡ ತರುಣರೇ ಆಗಿದ್ದಾರೆ. ತನಿಖೆ ಮುಂದುವರಿದಿದ್ದು ಹೆಚ್ಚಿನ ಮಾಹಿತಿ ನಿರೀಕ್ಷೆಯಲ್ಲಿದ್ದೇವೆ.
    ಅನುಪಮ್ ಅಗರವಾಲ್, ಎಸ್‌ಪಿ

    ಭೀಮಾತೀರದಲ್ಲಿ ಯುವಕರ ಕೈಗೆ ಸುಲಭವಾಗಿ ಮಾರಕಾಸ್ತ್ರಗಳು ಸಿಗುತ್ತಿವೆ. ಕಂಟ್ರಿ ಪಿಸ್ತೂಲ್‌ಗಳ ಹಾವಳಿ ಹೆಚ್ಚಿದೆ. ಹೀಗಾಗಿ ಗಡಿಭಾಗವಾದ್ದರಿಂದ ಗಾಂಜಾ- ಅಫೀಮು ಹಾವಳಿ ಸಹ ಹೆಚ್ಚಿದೆ. ಯುವ ಪಡೆ ದಾರಿ ತಪ್ಪಲು ಇದೇ ಪ್ರಮುಖ ಕಾರಣ. ಬೆಳೆಯುವ ಹಂತದಲ್ಲೇ ಅಪರಾಧಿಗಳನ್ನು ಚಿವುಟುವ ಅವಶ್ಯಕತೆ ಇದೆ.
    ಶರಣು ಸಬರದ, ಯುವ ಪರಿಷತ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts