More

    ಕುಡುಕರ ತಾಣ ಭೀಮಾಕನಹಳ್ಳಿಗೇಟ್ ತಂಗುದಾಣ: ಅಧಿಕಾರಿಗಳಿಗಿಲ್ಲ ಕಾಳಜಿ

    ಎಂ.ರಾಮೇಗೌಡ ನಂದಗುಡಿ
    ನಂದಗುಡಿ ಹೋಬಳಿಯ ಭೀಮಾಕನಹಳ್ಳಿ ಗೇಟ್‌ನಲ್ಲಿರುವ ತಂಗುದಾಣ ಮದ್ಯವ್ಯಸನಿಗಳ ಅಡ್ಡೆಯಾಗಿದೆ. ಇಲ್ಲಿನ ಅವ್ಯವಸ್ಥೆಯಿಂದಾಗಿ ಪ್ರಯಾಣಿಕರು ತಂಗುದಾಣದತ್ತ ಮುಖಮಾಡುತ್ತಿಲ್ಲ. ಅನೈರ್ಮಲ್ಯದಿಂದಾಗಿ ತಂಗುದಾಣವಿದ್ದರೂ ಪ್ರಯಾಣಿಕರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್‌ಗಾಗಿ ರಸ್ತೆಯಲ್ಲೇ ನಿಂತು ಕಾಯುವಂತಾಗಿದೆ.


    ರಾಜ್ಯ ಹೆದ್ದಾರಿ ಎನ್.ಎಚ್.207ರ ಭೀಮಾಕನಹಳ್ಳಿ ಗೇಟ್‌ನಲ್ಲಿ ನಿರ್ಮಾಣವಾದ ಬಸ್ ತಂಗುದಾಣ ಉದ್ಘಾಟನೆ ಬಳಿಕ ನಿರ್ವಹಣೆ ಇಲ್ಲದೆ ಸೊರಗಿದೆ, ಹೆದ್ದಾರಿಯಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರು ತಂಗುದಾಣ ಆಶ್ರಯಿಸುವಂತೆಯೇ ಇಲ್ಲ ಎನ್ನುವಷ್ಟು ಅವ್ಯವಸ್ಥೆ ನಿರ್ಮಾಣವಾಗಿದೆ.

    ವಾಹನ ಸಂಚಾರ ಹೆಚ್ಚು: ಬೆಂಗಳೂರು-ಚಿಂತಾಮಣಿ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳ ಸಂಚಾರವಿದೆ, ಈ ಭಾಗದ ರಸ್ತೆ ಇಳಿಜಾರಾಗಿದ್ದು, ಅತಿವೇಗದಲ್ಲಿ ವಾಹನ ಸಂಚಾರ ಕಂಡುಬರುತ್ತದೆ, ತಂಗುದಾಣ ಬಿಟ್ಟು ರಸ್ತೆಯಲ್ಲಿಯೇ ಬಸ್‌ಗಳಿಗೆ ಕಾಯುವ ಜನ ಅಪಘಾತಗಳಿಗೆ ಬಲಿಯಾಗುವ ಆತಂಕ ಎದುರಾಗಿದೆ. ಹೊಸಕೋಟೆ-ಚಿಂತಾಮಣಿ ಬಸ್‌ಗಳಿಗಾಗಿ ಬಿಸಿಲು ಮಳೆಯಲ್ಲಿಯೇ ಜನ ಕಾಯುವ ಪರಿಸ್ಥಿತಿ ಇದೆ.


    ತಂಗುದಾಣದಲ್ಲಿ ಬಾಟಲಿ ಸದ್ದು: ನಿರ್ವಹಣೆ ಕೊರತೆಯಿಂದಾಗಿ ಪ್ರಯಾಣಿಕರು ತಂಗುದಾಣ ಬಿಟ್ಟು ಮಾರುದ್ದ ದೂರ ನಿಲ್ಲುತ್ತಿದ್ದಾರೆ. ಪರಿಸ್ಥಿತಿ ಲಾಭ ಪಡೆದ ಕೆಲಪುಂಡರು ತಂಗುದಾಣವನ್ನು ಮದ್ಯಸೇವನೆ ತಾಣವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಸ್ಸಂಜೆಯಾಗುತ್ತಿದ್ದಂತೆ ಬಾಟಲಿಗಳನಿಟ್ಟುಕೊಂಡು ಇಲ್ಲಿಗೆ ಬರುವ ಮದ್ಯವ್ಯಸನಿಗಳು ಇಲ್ಲಿಯೇ ಬಾರ್ ರೀತಿಯಲ್ಲಿ ಕುಳಿತುಕೊಳ್ಳುತ್ತಾರೆ, ರಸ್ತೆ ಬದಿ ಓಡಾಡುವ ಸಾರ್ವಜನಿರಿಗೆ ಕಿಟಲೆ ಮಾಡಿ ತೊಂದರೆ ಕೊಡುವುದು ಸಾಮಾನ್ಯವಾಗಿದೆ. ಬಸ್ ತಂಗುದಾಣದಲ್ಲಿ ಎಲ್ಲಿ ನೋಡಿದರೂ ಬಾಟಲಿಗಳ ರಾಶಿಯೇ ಕಂಡುಬರುತ್ತದೆ. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜವಾಗಿಲ್ಲ.

    ತಂಗುದಾಣ ನಿರ್ಮಿಸಿದ್ದರೂ ಪ್ರಯಾಣಿಕರಿಗೆ ಪ್ರಯೋಜನವಿಲ್ಲದಂತಾಗಿದೆ. ಬಿಸಿಲು ಮಳೆ ಎನ್ನದೆ ಪ್ರಯಾಣಿಕರು ರಸ್ತೆಯಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ತಂಗುದಾಣ ಕುಡುಕರ ತಾಣವಾಗಿದ್ದು, ವಿದ್ಯಾರ್ಥಿಗಳು ಇದರ ಹತ್ತಿರ ಬರಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.

    | ಕಿರ್ತಿರಾಜ್ ಭೀಮಾಕನಹಳ್ಳಿ

    ರಾಜ್ಯಹೆದ್ದಾರಿ-207ರ ಮಾರ್ಗವಾಗಿ ಅನೇಕ ವಾಹನಗಳು ಸಂಚರಿಸುತ್ತವೆ. ಅದರಲ್ಲೂ ಭೀಮಾಕನಹಳ್ಳಿ ಗೇಟ್ ಬಳಿ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ, ರಸ್ತೆ ಪಕ್ಕದಲ್ಲಿ ಖಾಸಗಿ ಶಾಲೆ ಇರುವುದರಿಂದ ವಿದ್ಯಾರ್ಥಿಗಳು ರಸ್ತೆ ಬದಿ ನಿಂತು ಬಸ್‌ಗಳಿಗೆ ಕಾಯುವ ಪರಿಸ್ಥಿತಿ ಇದೆ. ಬಸ್ ತಂಗುದಾಣ ಪ್ರಯಾಣಿಕರ ಪಾಲಿಗೆ ದೂರವಾಗಿದೆ.

    | ನರಸಿಂಹ ಭೀಮಾಕನಹಳ್ಳಿ ಗೇಟ್

    ಹಲವು ತಿಂಗಳಿಂದ ತಂಗುದಾಣ ಮದ್ಯವ್ಯಸನಿಗಳ ತಾಣವಾಗಿ ಬಳಕೆಯಾಗುತ್ತಿದೆ, ಮದ್ಯವ್ಯಸನಿಗಳು ಬೆಳಗ್ಗೆಯೇ ಸ್ಥಳದಲ್ಲಿ ಜಮಾವಣೆಯಾಗಿ ಸಾರ್ವಜನಿಕರಿಗೆ ಕೀಟಲೆ ಮಾಡುತ್ತಾರೆ. ಇದರಿಂದ ನಿಲುಗಡೆಗೆ ಬದಲು ಮುಂದೆ ಹೋಗಿ ಬಸ್ ಹತ್ತುವ ಪರಿಸ್ಥಿತಿ ಎದುರಾಗಿದೆ.
    | ಕಾರ್ತಿಕ್ ವಿದ್ಯಾರ್ಥಿ

    ತಂಗುದಾಣದ ಅವ್ಯವಸ್ಥೆ ನಮ್ಮ ಗಮನಕ್ಕೆ ಬಂದಿಲ್ಲ, ಕರ್ತವ್ಯಕ್ಕೆ ಸೇರಿ ಕೆಲವೇ ದಿನಗಳಾಗಿದ್ದು, ಈ ಬಗ್ಗೆ ಗಮನ ಹರಿಸಲಾಗುವುದು, ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

    | ದಿಲೀಪ್ ಕಂಬಳೀಪುರ ಗ್ರಾಪಂ ಪಿಡಿಒ

    ನಮ್ಮ ಇಲಾಖೆಯಿಂದ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಗ್ರಾಮಗಳ ಗೇಟ್ ಬಳಿ ತಂಗುದಾಣ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುತ್ತದೆ, ಆದರೆ ಅದರ ನಿವರ್ರ್ಹಣೆ ಸ್ಥಳೀಯ ಗ್ರಾಪಂಗಳಿಗೆ ಸೇರಿದೆ. ಅವರೇ ಅದರ ಹೊಣೆಗಾರಿಕೆ ಹೊರಬೇಕು.

    | ಪ್ರಕಾಶ್ ಪಿಡಬ್ಲ್ಯುಡಿ ಎಇಇ ಹೊಸಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts