More

    ಭೀಮಾ ಕೋರೆಗಾಂವ್ ಚರಿತ್ರೆ ಆತ್ಮಾಭಿಮಾನದ ಸಂಕೇತ

    ಕೆ.ಆರ್.ನಗರ: ಭೀಮಾ ಕೋರೆಗಾಂವ್ ಚರಿತ್ರೆ ಶೋಷಿತರು ಮತ್ತು ದಲಿತರ ಆತ್ಮಾಭಿಮಾನದ ಸಂಕೇತವಾಗಿದೆ ಎಂದು ಅಖಿಲ ಭಾರತ ಜೈ ಭೀಮ್ ದಲಿತ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಹೇಳಿದರು.

    ಪಟ್ಟಣದ ಮಧುವನಹಳ್ಳಿ ಬಡಾವಣೆಯಲ್ಲಿ ಸೋಮವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭೂಮಿಗಾಗಿ, ಅಸ್ತಿತ್ವ ಉಳಿವಿಗಾಗಿ ಅನೇಕ ಯುದ್ಧಗಳು, ಹೋರಾಟಗಳು ನಡೆದಿವೆ. ಆದರೆ, ಸಾಮಾಜಿಕ ಅಸ್ಮಿತೆಗಾಗಿ, ಸ್ವಾಭಿಮಾನಕ್ಕಾಗಿ ನಡೆದ ಏಕೈಕ ಯುದ್ಧ ಭೀಮಾ ಕೋರೆಗಾಂವ್ ಯುದ್ಧವಾಗಿದೆ ಎಂದರು.

    ಈ ಭೀಮಾ ಕೋರೆಗಾಂವ್ ಚರಿತ್ರೆ ಇತಿಹಾಸದಲ್ಲಿ ಮುಚ್ಚಿ ಹೋಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಅವರು ಈ ಚರಿತ್ರೆಯನ್ನು ಮರು ಶೋಧಿಸಿ, 1926ನೇ ಇಸವಿಯಲ್ಲಿ ಮತ್ತೆ ಜೀವ ತಂದುಕೊಟ್ಟರು. ಅದರ ಬಗ್ಗೆ ಸಂಶೋಧನೆಗಳು ನಡೆದು ಪುಸ್ತಕಗಳನ್ನು ಬರೆದು ಹೊರತಂದು ಜಗತ್ತಿಗೆ ಇತಿಹಾಸಲ್ಲಿ ಹುದುಗಿ ಹೋಗಿದ್ದ ರೋಚಕ ಘಟನೆಯನ್ನು ತಿಳಿಸಲಾಯಿತು ಎಂದರು.

    ದೇಶದಲ್ಲಿ ನಡೆದಿರುವ ಯಾವುದೇ ಯುದ್ಧಕ್ಕೂ ಭೀಮಾ ಕೋರೆಗಾಂವ್‌ಯುದ್ಧವನ್ನು ಹೋಲಿಸಲು ಸಾಧ್ಯವಿಲ್ಲ. ಭೂಮಿಯ ಮೇಲೆ ನಡೆಯುವ ವಿಸ್ಮಯಗಳಂತೆ ಈ ಯುದ್ಧವೂ ಒಂದು ವಿಸ್ಮಯವಾಗಿದೆ. ಸತತ 12 ಗಂಟೆಗಳ ಕಾಲ ನಡೆದ ಕದನದಲ್ಲಿ ಪೇಶ್ವೆಯ 30 ಸಾವಿರ ಸೈನಿಕರ ವಿರುದ್ಧ ಮಹಾರ್ ಸಮುದಾಯದ 500 ವೀರರು ನಾಗನಾಕನ ನೇತೃತ್ವದಲ್ಲಿ ಹೋರಾಡಿ ಗೆದ್ದರು. ಯುದ್ಧದ ಗೆಲುವಿನ ಸ್ಮರಣೆಗಾಗಿ ಭೀಮಾ ನದಿ ತೀರದ ದಡೆಯಲ್ಲಿ ವಿಜಯಸ್ತಂಭ ಸ್ಥಾಪಿಸಲಾಗಿದೆ ಎಂದು ವಿವರಿಸಿದರು.

    ಆ ಕಾರಣದಿಂದಲೇ ಬಾಬಾ ಸಾಹೇಬರು ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ ಎಂದು ಹೇಳಿರುವುದು ಎಂದ ಚಂದ್ರಶೇಖರ್, ನಾವುಗಳು ಸ್ವಾಭಿಮಾನ ಮತ್ತು ವೀರ ಸಮುದಾಯದವರಾಗಿದ್ದು, ಅದನ್ನು ಅರಿತು ನಡೆಯುವ ಮೂಲಕ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಸ್ಥಾನಕ್ಕೆ ಕಳುಹಿಸುವ ಮೂಲಕ ಸಮಾಜದಲ್ಲಿ ಉತ್ತಮರೆನಿಸಿಕೊಳ್ಳೋಣ ಎಂದರು.

    ಈ ಸಂದರ್ಭ ಪ್ರಮುಖರಾದ ನೇಗಿಲಯೋಗಿ ಬೀರಪ್ಪ, ಪುಟ್ಟಣ್ಣ, ಗಾರೆಗೋವಿಂದ, ಚಲುವರಾಜು, ಮದುವನಹಳ್ಳಿ ರವಿಕುಮಾರ್, ಎಸ್.ಜಗದೀಶ್, ಕೆ.ಎಸ್.ವಿನೋದ್ ರಾಜ್, ಕಣ್ಣಕುಮಾರ್, ಜಗದೀಶ್, ಬಸವರಾಜು, ಅಜಯ್, ಲಿಖಿತ್ ಮೋದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts