More

    ಬಾಷ್ ಫೌಂಡೇಷನ್‌ನಿಂದ ಹೈಟೆಕ್ ಅಂಗನವಾಡಿ ಕೇಂದ್ರ: ಬಿಡದಿಯ 15 ಕಡೆ ನಿರ್ಮಾಣ

    ರಾಮನಗರ: ಅಂಗನವಾಡಿಗಳು ಎಂದರೆ ಸಾಮಾನ್ಯವಾಗಿ ಕತ್ತಲೆ ಕೋಣೆಗಳು, ಅನೈರ್ಮಲ್ಯ ತಾಣ, ಮಕ್ಕಳು ಮಲಗಲೂ ಜಾಗ ಇರುವುದಿಲ್ಲ ಎನ್ನುವ ಭಾವನೆ ಸಾಮಾನ್ಯವಾಗಿದೆ. ಆದರೆ, ಬಿಡದಿ ಹೋಬಳಿಯ ವಿವಿಧ ಗ್ರಾಮಗಳ ಅಂಗನವಾಡಿಗಳು ಇದಕ್ಕೆ ಅಪವಾದ ಎನ್ನುವಂತಿವೆ.

    ಬಿಡದಿ ಕೈಗಾರಿಕೆ ಪ್ರದೇಶದಲ್ಲಿರುವ ಕಾರ್ಖಾನೆಗಳು ಈ ಭಾಗದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಇದರ ಭಾಗವಾಗಿ ನಿರ್ಮಾಣಗೊಂಡಿರುವ ಅಂಗನವಾಡಿಗಳು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಿ ಬದಲಾಗಿವೆ.

    ನೈರ್ಮಲ್ಯ ತಾಣ: ಸಾಮಾನ್ಯವಾಗಿ ಅಂಗವಾಡಿಗಳು ಸರ್ಕಾರದ ತಳಮಟ್ಟದ ಯೋಜನೆಗಳನ್ನು ತಲುಪಿಸುವ ಪ್ರಮುಖ ಕೇಂದ್ರಗಳು. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆರೋಗ್ಯ ಇಲಾಖೆ ಯೋಜನೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಲಾನುಭವಿಗಳಿಗೆ ತಲುಪಿಸುತ್ತಾರೆ. ಇಲ್ಲಿಗೆ ಗರ್ಭಿಣಿಯರು, ಬಾಣಂತಿಯರು ಬರುತ್ತಾರೆ. ಆದರೆ ಅಂಗನವಾಡಿಯಲ್ಲಿ ಕಲಿಯಲು ಬರುವ ಮಕ್ಕಳು ಹಾಗೂ ಬಾಣಂತಿಯರು ಬಳಸಲು ಇರುವುದು ಒಂದೇ ಶೌಚಗೃಹ. ಇದರಿಂದ ಸಣ್ಣ ಮಕ್ಕಳು ಸುಲಭವಾಗಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.
    ಇದನ್ನು ಮನಗಂಡ ಬಾಷ್ ಫೌಂಡೇಷನ್ ಮಕ್ಕಳಿಗಾಗಿಯೇ ಪ್ರತ್ಯೇಕ ಶೌಚಗೃಹ ನಿರ್ಮಿಸುವ ಮೂಲಕ, ಬಾಲ್ಯದಿಂದಲೇ ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ತಿಳಿಸಿಕೊಡುವ ವಾತಾವರಣ ನಿರ್ಮಿಸಿದೆ.

    ಕಲಿಕೆಗೆ ಆಕರ್ಷಣೆ ಕೇಂದ್ರ: ಮಕ್ಕಳನ್ನು ಮನೆಯಿಂದ ಶಾಲೆಗೆ ಕಳುಹಿಸುವುದೇ ಪಾಲಕರ ಪಾಲಿಗೆ ತ್ರಾಸದಾಯಕ ಕೆಲಸ. ಅಂಗನವಾಡಿಗೆ ಕಳುಹಿಸಿದರೂ ಮಕ್ಕಳು ಅಲ್ಲಿ ಕಲಿಯುವ ವಾತಾವರಣವಿಲ್ಲದೆ ಸಣ್ಣ ವಯಸ್ಸಿನಲ್ಲಿಯೇ ಶಿಕ್ಷಣದ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತವೆ. ಇದನ್ನು ಮನಗಂಡ ಬಾಷ್ ಪ್ರತಿಷ್ಠಾನ ಅಂಗನವಾಡಿ ವಾತಾವರಣನ್ನೇ ಬದಲಿಸಿ ಬಿಟ್ಟಿದೆ. ಪ್ರತಿ ಗೋಡೆ ಮೇಲೆ ಮಕ್ಕಳನ್ನು ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುವ ಸುಂದರ ಆಕರ್ಷಣೀಯ ಚಿತ್ರಗಳನ್ನು ಬಿಡಿಸಲಾಗಿದೆ.

    ಇದರ ಜತೆಗೆ, ಕನ್ನಡ ಮತ್ತು ಇಂಗ್ಲಿಷ್ ವರ್ಣ ಮಾಲೆಗಳು-ಪದಗಳು, ಹಣ್ಣು, ಪ್ರಾಣಿ ಪಕ್ಷಿಗಳು, ಕಾರ್ಟೂನ್‌ಗಳು ಹೀಗೆ ಹತ್ತು ಹಲವು ಬಗೆಯ ಚಿತ್ರಗಳನ್ನು ಬಿಡಿಸುವ ಮೂಲಕ ಮಕ್ಕಳು ಅಂಗವಾಡಿಯ ಬಗ್ಗೆ ಪ್ರೀತಿ ಬೆಳೆಸಿಕೊಳ್ಳುವಂತೆ ಮಾಡಲಾಗಿದೆ. ಇದರ ಜತೆಗೆ, ಅಡುಗೆ ಕೋಣೆ, ಸಾಮಗ್ರಿಗಳ ದಾಸ್ತಾನು ಕೇಂದ್ರ, ಶುದ್ಧ ಕುಡಿಯುವ ನೀರಿನ ಯಂತ್ರ, ಮಕ್ಕಳು ಹಾಗೂ ಅಂಗನವಾಡಿಗೆ ಬರುವ ಮಹಿಳೆಯರಿಗಾಗಿ ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗಿದೆ.

    15 ಅಂಗನವಾಡಿಗಳು: ಪ್ರಸ್ತುತ ಬಾಷ್ ಇಂಟರ್‌ನ್ಯಾಷನಲ್ ಫೌಂಡೇಷನ್ ಬಿಡದಿಯ ಚೌಕಹಳ್ಳಿ, ಬಿ.ಹೊಸೂರು, ಬಿಲ್ಲೆಕೆಂಪನಹಳ್ಳಿ, ಬೈಚೋಹಳ್ಳಿ, ಹೆಗ್ಗಡೆಗೆರೆ, ಮುತ್ತುರಾಯನಗುಡಿ, ಜೋಡಿ ಕರೇನಹಳ್ಳಿ, ತಾಳಕುಪ್ಪೆ, ಹೆಜ್ಜಾಲ ಸೇರಿ 15 ಕಡೆಗಳಲ್ಲಿ ಹೈಟೆಕ್ ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡಿದೆ. ಕೆಲವು ಕಡೆಗಳಲ್ಲಿ ಇರುವ ಕಟ್ಟಡವನ್ನೇ ನವೀಕರಿಸಿದ್ದರೆ, ಮತ್ತೆ ಕೆಲವು ಕಡೆಗಳಲ್ಲಿ ಹೊಸ ಕಟ್ಟಡವನ್ನೇ ಕಟ್ಟಿದ್ದಾರೆ. ಒಟ್ಟಾರೆ ಇದಕ್ಕೆ ತಗುಲಿರುವ ವೆಚ್ಚ ಸುಮಾರು 3 ಕೋಟಿ ರೂಪಾಯಿಗಳು ಎನ್ನುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಮಾಹಿತಿ.

    ಬಾಷ್ ಇಂಟರ್ ನ್ಯಾಷನಲ್ ಫೌಂಡೇಷನ್‌ನಿಂದ ಬಿಡದಿ ಭಾಗದಲ್ಲಿ 15 ಅಂಗನವಾಡಿಗಳು ನಿರ್ಮಾಣವಾಗಿದ್ದು, ಸ್ವಚ್ಛ ಪರಿಸರದ ಜತೆಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿಯಾಗಿದೆ.
    -ಸಿ.ವಿ.ರಾಮನ್, ಉಪನಿರ್ದೇಶಕರು (ಪ್ರಭಾರ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಮನಗರ

    ಬಾಷ್ ಸಂಸ್ಥೆ ನಿರ್ಮಿಸಿರುವ ಅಂಗನವಾಡಿ ಕೇಂದ್ರಗಳು ಹೈಟೆಕ್ ಆಗಿದ್ದು, ಜಿಲ್ಲೆಗೆ ವಿಸ್ತರಣೆ ಮಾಡಿದರೆ ಉತ್ತಮ. ಇದರಿಂದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಆಗುತ್ತದೆ.
    -ಗಾಣಕಲ್ ನಟರಾಜ್, ತಾಪಂ ಅಧ್ಯಕ್ಷ ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts