More

    ಭಾರತ ಬಂದ್​ಗೆ ನೀರಸ ಪ್ರತಿಕ್ರಿಯೆ

    ಗದಗ: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್​ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

    ಗದಗ-ಬೆಟಗೇರಿ ಸೇರಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಭಾರತ್ ಬಂದ್ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರೂ ಸಾರ್ವಜನಿಕರು ನಿರೀಕ್ಷಿತ ಮಟ್ಟದಲ್ಲಿ ಬೆಂಬಲಿಸಲಿಲ್ಲ. ಪ್ರತಿಭಟನಾ ಸ್ಥಳದ ಬಳಿ ಕೆಲ ಅಂಗಡಿಗಳು ಬಂದ್ ಆಗಿದ್ದು ಬಿಟ್ಟರೆ ಉಳಿದೆಡೆ ಯಥಾ ಪ್ರಕಾರ ವ್ಯಾಪಾರ ವಹಿವಾಟು ನಡೆಯಿತು. ಜನಜೀವನಕ್ಕೆ ಯಾವುದೇ ತೊಂದರೆ ಉಂಟಾಗಲಿಲ್ಲ. ಅಂಗಡಿ ಮುಂಗಟ್ಟು ತೆರೆದಿದ್ದವು. ಬಸ್ ಸಂಚಾರಕ್ಕೆ ಅಡೆತಡೆ ಇರಲಿಲ್ಲ. ಸರ್ಕಾರಿ ಕಚೇರಿ, ಬ್ಯಾಂಕ್, ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಿದವು. ಭಾರತ್ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

    ಗದಗ ನಗರದ ಮಹಾತ್ಮಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಹೋರಾಟಗಾರರು ಮಹೇಂದ್ರಕರ ವೃತ್ತ, ಹುಯಿಲಗೋಳ ನಾರಾಯಣರಾವ್ ವೃತ್ತದ ಮೂಲಕ ಡಂಬಳ ನಾಕಾ ವೃತ್ತದಿಂದ ಮುಳಗುಂದ ನಾಕಾ ವೃತ್ತದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ನಂತರ ಹುಬ್ಬಳ್ಳಿ ರಸ್ತೆಯ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮಾನವ ಸರಪಳಿ ನಿರ್ವಿುಸಿ ಪ್ರತಿಭಟನೆ ಮಾಡಲಾಯಿತು. ಇದರಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಕೊಂಚ ಅಡಚಣೆಯೂ ಉಂಟಾಯಿತು.

    ರೈತ ಮುಖಂಡರಾದ ಬಸವರಾಜ ಸಾಬಳೆ, ಕೆ.ಜಿ. ಶಾಂತಸ್ವಾಮಿಮಠ, ಮಂಜುನಾಥ ಪರ್ವತಗೌಡ್ರ, ಬಸವರಾಜ ದೇಸಾಯಿ ಮತ್ತಿತರರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಪೋರೇಟ್ ಕಂಪನಿಯ ಸಿಇಒನಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. 15 ದಿನಗಳಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಸುಂದರೇಶಬಾಬು ಅವರಿಗೆ ರೈತ ಮುಖಂಡರು ಮನವಿ ಸಲ್ಲಿಸಿದರು.

    ವಿಜಯಕುಮಾರ ಸುಂಕದ, ಬಸವರಾಜ ಸಜ್ಜನರ, ಚಂದ್ರಪ್ಪ ಹೊಸಮನಿ, ರಮೇಶ ಕೋಳಿವಾಡ, ಶಿವಪ್ಪ ಸಜ್ಜನರ, ಹಸನ್​ಸಾಬ ಅಸುಂಡಿ, ಮಹೇಶ ಕೆಂಚನಗೌಡ್ರ, ಬಸನಗೌಡ ಕರಿಬಸನಗೌಡ್ರ, ರಮೇಶ ವಾಲಿ, ರಾಜು ಹಂಗರಜಿ, ಎಂ.ಎಸ್.ಪರ್ವತಗೌಡ್ರ, ಹುಚ್ಚೀರಪ್ಪ ಬಡಿಗೇರ, ಯುಸೂಫ್ ಮಾಗಿ, ಈರಯ್ಯ ವಿಭೂತಿ. ನಬೀಸಾಬ ಹಂಚಿನಾಳ, ಬಸವರಾಜ ಬ್ಯಾಹಟ್ಟಿ, ಅಡಿವೆಪ್ಪ ಲಕ್ಕುಂಡಿ, ಅರುಣಯ್ಯ ಹಿರೇಮಠ, ಕೆ.ಆರ್.ಹೆಬಸೂರ, ಗೋವಿಂದಪ್ಪ ರಾಗಿ ಇತರರಿದ್ದರು.

    ಡಿ.ಆರ್. ಪಾಟೀಲ ವಿರುದ್ಧ ರೈತರ ಆಕ್ರೋಶ: ಭಾರತ್ ಬಂದ್ ಯುವ ಕಾಂಗ್ರೆಸ್ ಕಾರ್ಯಕರ್ತರು ವತಿಯಿಂದ ನಡೆಸಲಾದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಶಾಸಕ ಡಿ.ಆರ್. ಪಾಟೀಲರು ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯವೈಖರಿ, ಬಿಹಾರ ಚುನಾವಣೆ, ಹೈದರಾಬಾದ್ ಚುನಾವಣೆ ಪ್ರಸ್ತಾಪಿಸಿ ಬಿಜೆಪಿ ಮುಖಂಡರನ್ನು ಟೀಕಿಸಿದರು. ಆಗ ಅವರ ಭಾಷಣಕ್ಕೆ ಅಡ್ಡಿ ಪಡಿಸಿದ ರೈತರು, ‘ನಮ್ಮ ಪರವಾಗಿ ಮಾತನಾಡುವುದು ಬಿಟ್ಟು ರಾಜಕೀಯ ಮಾಡುತ್ತಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts