More

    ಯಾತ್ರೆಯ ಯಶಸ್ಸಿನಿಂದ ಬಿಜೆಪಿ ವಿಚಲಿತ: ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

    ಮಂಡ್ಯ: ಕಾಂಗ್ರೆಸ್ ಯುವನಾಯಕ ರಾಹುಲ್‌ಗಾಂಧಿ ನೇತೃತ್ವದಲ್ಲಿ ಮೂರು ದಿನಗಳು ಜಿಲ್ಲೆಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಯಾತ್ರೆಗೆ ಸಿಗುತ್ತಿರುವ ಬೆಂಬಲ ಕಂಡು ಬಿಜೆಪಿ ವಿಚಲಿತಗೊಂಡು ಇಲ್ಲಸಲ್ಲದ ವಿಷಯಗಳನ್ನು ಹರಿಬಿಟ್ಟು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರೂ ಆದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.
    ರಾಹುಲ್‌ಗಾಂಧಿ ದೇಶ, ಪ್ರಜಾಪ್ರಭುತ್ವ, ಸಂವಿಧಾನ ಬದಲಾವಣೆಯಾಗದಂತೆ ಗಟ್ಟಿಗೊಳಿಸುವ ಮೂಲಕ ದೇಶದಲ್ಲಿ ಸುಧಾರಣೆ ತರಲು ಪಾದಯಾತ್ರೆ ನಡೆಸುತ್ತಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ, ಅಧಿಕಾರದ ಆಸೆ ಇಲ್ಲ. ಇದಕ್ಕೆ ಜನರಿಂದ ಬೆಂಬಲ ಸಿಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಇದೊಂದು ಐತಿಹಾಸಿಕ ಯಾತ್ರೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಯಾತ್ರೆಗೆ ಪ್ರಗತಿಪರ ಸಂಘಟನೆಗಳಿಂದ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಸಾಹಿತಿಗಳು, ಹೋರಾಟಗಾರರು ಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಯಶಸ್ಸು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಹಿನ್ನೆಲೆಯಲ್ಲಿ ಜನರ ದಿಕ್ಕು ತಪ್ಪಿಸಲು ಬಿಜೆಪಿ ಇನ್ನಿಲ್ಲದ ವಿಷಯಗಳನ್ನು ಪ್ರಸ್ತಾಪಿಸುತ್ತಿದೆ. ಜತೆಗೆ ರಾಜ್ಯ ಸರ್ಕಾರದ ಹಗರಣಗಳು ಹೆಚ್ಚಾಗಿ ಹೊರಗೆ ಬರುತ್ತಿರುವುದರಿಂದ ಕಾಂಗ್ರೆಸ್ ವಿರುದ್ಧ ಮಾತನಾಡುತ್ತಿದೆ. ಇದರಿಂದ ನಮಗೇನೂ ತೊಂದರೆಯಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಏನಾದರೂ ಅವ್ಯವಹಾರ ನಡೆದಿದ್ದರೆ ತನಿಖೆಗೊಪ್ಪಿಸಿ. ಆದರೆ ಸರ್ಕಾರ ಬಂದು ಮೂರುವರೆ ವರ್ಷವಾದರೂ ಈವರೆಗೂ ಇಲ್ಲದ ಆಸಕ್ತಿ ಈಗ ಏಕೆ ಎನ್ನುವುದಷ್ಟೇ ಎಂದರು.
    ಇನ್ನು ಹೊರಗಿನಿಂದ ಜನರನ್ನು ಕರೆಸಿಕೊಂಡಿದ್ದಾರೆಂದು ಕೆಲವರು ಟೀಕೆ ಮಾಡಿದ್ದಾರೆ. ಆದರೆ ಇದು ಜಿಲ್ಲೆಗೆ ಸೀಮಿತವಾಗಿರುವ ಕಾರ್ಯಕ್ರಮವಲ್ಲ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರಮಟ್ಟದ ನಾಯಕರು ಬಂದಿದ್ದಾರೆ, ಈ ಕಾರಣಕ್ಕೆ ಪಾದಯಾತ್ರೆ ಹೋಗದ ಜಿಲ್ಲೆಯ ಜನರು ಆಗಮಿಸಿದ್ದಾರೆ. ಆದ್ದರಿಂದ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
    ರಾಹುಲ್‌ಗಾಂಧಿ ದೇಶದ ಬಗ್ಗೆ ಗೌರವ, ಅಭಿಮಾನ, ಪ್ರೀತಿ, ವಿಶ್ವಾಸವಿಟ್ಟುಕೊಂಡಿದ್ದಾರೆ. ಅವರ ಯಾತ್ರೆಯ ಉದ್ದೇಶ ಎಲ್ಲರಿಗೂ ಇಷ್ಟವಾಗಿದೆ. ಬಡವರು, ದಲಿತರು, ರೈತರು, ಹಿಂದುಳಿದ ವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರ ಬಗ್ಗೆ ಕಾಳಜಿ ಹೊಂದಿದ್ದಾರೆ. ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ಹೇಗಿದೆ?. ರೈತರ ಸಮಸ್ಯೆ, ಎನ್‌ಇಪಿ ಶಿಕ್ಷಣ ನೀತಿಯಲ್ಲಿ ಆಗಿರುವ ಸಮಸ್ಯೆ, ಪ್ರವಾಸೋದ್ಯಮ, ಸೇರಿದಂತೆ ಜಿಲ್ಲೆಯ ಸಮಸ್ಯೆಗಳನ್ನು ತಿಳಿದುಕೊಂಡಿದ್ದಾರೆ. ಸಂವಾದ ನಡೆಸುವ ಮೂಲಕ ಎಲ್ಲ ಮಾಹಿತಿಗಳನ್ನು ಪಡೆದಿದ್ದಾರೆ. ಅಲ್ಲದೆ, ಪಾದಯಾತ್ರೆಯಿಂದ ಸಾಕಷ್ಟು ಕಲಿತಿದ್ದೇನೆಂದು ಅವರೇ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವಿವರಿಸಿದರು.
    ಹುರುಪು ಬಂದಿದೆ: ಈ ಹಿಂದೆ ಸಾಕಷ್ಟು ನಾಯಕರು ಪಾದಯಾತ್ರೆ ನಡೆಸಿದ್ದಾರೆ. ಆದರೆ ಈ ಪಾದಯಾತ್ರೆಯು ಐತಿಹಾಸಿಕ. ಪ್ರಧಾನಿಯಾಗುವ ಅವಕಾಶವಿದ್ದರೂ ಅದನ್ನು ಬೇರೆಯವರಿಗೆ ನೀಡುವ ಮೂಲಕ ಅಧಿಕಾರ ತ್ಯಾಗ ಮಾಡಿದ್ದಾರೆ. ಇದು ಮತ್ತೊಬ್ಬ ನಾಯಕರಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು ಸೋನಿಯಾ ಅವರು ಪಾದಯಾತ್ರೆಗೆ ಬೆಂಬಲ ಸೂಚಿಸಿದ್ದರಿಂದ ಮತ್ತಷ್ಟು ಹುರುಪು ಬಂದಿದೆ. ನಮ್ಮ ಪಕ್ಷದ ಹಿರಿಯ ನಾಯಕರಾಗಿರುವುದರಿಂದ ಅವರ ಮಾರ್ಗದರ್ಶನ, ಬೆಂಬಲ, ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
    ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ, ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ, ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಭಾರತ್ ಜೋಡೋ ಜಿಲ್ಲಾ ಸಮಿತಿ ಸದಸ್ಯರಾದ ವಿಜಯ್ ರಾಮೇಗೌಡ, ಸಿದ್ಧಾರೂಢ ಸತೀಶ್, ಎಂ.ಎಸ್.ಚಿದಂಬರ್, ಅಮರಾವತಿ ಚಂದ್ರಶೇಖರ್, ವಿಜಯಕುಮಾರ್, ಕಿರಣ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts