More

    ಸಂಭ್ರಮದ ಬಸವೇಶ್ವರ ರಥೋತ್ಸವ

    ಭರಮಸಾಗರ: ಹೋಬಳಿಯ ಪ್ರಸಿದ್ಧ ಕೋಗುಂಡೆ ಬಸವೇಶ್ವರ ಸ್ವಾಮಿಯ ದೊಡ್ಡ ರಥೋತ್ಸವವು ಸಾವಿರಾರು ಭಕ್ತರ ಹರ್ಷೋದ್ಘಾರದೊಂದಿಗೆ ಶನಿವಾರ ಸಂಜೆ ಸಂಭ್ರಮ ಸಡಗರದಿಂದ ನೆರವೇರಿತು.

    ಗ್ರಾಮಾಂತರ ಪ್ರದೇಶದಲ್ಲಿ ನಡೆಯುವ ಜನಪ್ರಿಯ ರಥೋತ್ಸವಗಳಲ್ಲಿ ಕೋಗುಂಡೆ ಬಸವೇಶ್ವರನ ರಥೋತ್ಸವ ಪ್ರಮುಖ. ಆನೆಗುಂದಿ ರಾಜವಂಶಸ್ತರಿಂದ ಪ್ರತಿಷ್ಟಾಪಿಸಲ್ಪಟ್ಟ ಈ ಬಸವೇಶ್ವರ ಸ್ವಾಮಿ ಜಾತ್ರೆ ಉತ್ಸವದಲ್ಲಿ ಚಿತ್ರದುರ್ಗ-ದಾವಣಗೆರೆ ಅವಳಿ ಜಿಲ್ಲೆಗಳು ಸೇರಿ ಬಳ್ಳಾರಿ ಹಾಗೂ ದೂರದ ಸ್ಥಳಗಳಿಂದಲೂ ಭಕ್ತರು ಆಗಮಿಸಿ ಪಾಲ್ಗೊಂಡಿದ್ದರು.

    ತೇರಿಗೆ ಹೂ ಹಾರಗಳೊಂದಿಗೆ ಬಾಳೆ ಗೊನೆ, ತೆಂಗಿನ ಕಾಯಿ ಹಾಗೂ ರೈತ ಸಮುದಾಯ ಬೆಳೆದ ಫಸಲಿನ ವಿಧಗಳನ್ನು ಸಾಂಕೇತಿಕವಾಗಿ ಕಟ್ಟಿದ್ದರು. ವಿಭಿನ್ನ ಬಣ್ಣದ ಬಾವುಟಗಳಿಂದ ರಥವನ್ನು ಅಲಂಕರಿಸಲಾಗಿತ್ತು.

    ಬಸವೇಶ್ವರ ಸ್ವಾಮಿಯ ಗದ್ದಿಗೆಯಿಂದ ಮೂರ್ತಿಯ ಪಲ್ಲಕ್ಕಿ ಉತ್ಸವ ಜರುಗಿತು. ಬಳಿಕ ದೇವರನ್ನು ರಥದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು. ನಂತರ ಹೂವಿನ ಹಾರಗಳು ಮತ್ತು ಮುಕ್ತಿ ಬಾವುಟದ ಹರಾಜು ನಡೆದು, ದೇವರಿಗೆ ಮಹಾಮಂಗಳಾರತಿ ನಡೆಸಿದ ಬಳಿಕ ರಥೋತ್ಸವ ಜರುಗಿತು.

    ನಂದಿ ಕೋಲು, ಡೊಳ್ಳು, ಭಜನೆ, ವೀರಾಗಾಸೆ ಇತರೆ ಕಲಾ ತಂಡಗಳು ಮೆರುಗು ನೀಡಿದವು.

    ಭಾನುವಾರ ಹರಕೆ, ಜವಳ, ಅಡ್ಡಪಲ್ಲಕ್ಕಿ ಉತ್ಸವ, ಸೋಮವಾರ ಓಕುಳಿ, ಗಂಗಾ ಪೂಜೆ ಮತ್ತು ಕಂಕಣ ವಿಸರ್ಜನೆ ಕಾರ್ಯಕ್ರಮದೊಂದಿಗೆ ಜಾತ್ರಾ ಮಹೋತ್ಸವ ತೆರೆ ಕಾಣಲಿದೆ.

    ಜಾತ್ರೆಯಲ್ಲಿ ಕರೊನಾ ವೈರಸ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಅಲ್ಲಲ್ಲಿ ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿತ್ತು.

    ಸಂಚಾಲಕ ಎಚ್.ಎಂ.ಮಂಜುನಾಥ್, ಕೆ.ಜಿ.ವಿರುಜಪಾಕ್ಷಪ್ಪ, ಎಂ.ಜಿ.ಲೋಕೇಶ್ವರಪ್ಪ, ಎಚ್.ಎಂ.ನಾಗರಾಜಯ್ಯ, ಎ.ಕೆ.ಹನುಮಂತಪ್ಪ, ಯು.ಅಂಜಿನಪ್ಪ, ತಳವಾರ ಬಸವರಾಜಪ್ಪ, ಎ.ಡಿ.ಚನ್ನಬಸಪ್ಪ, ಅರ್ಚಕ ಮುರುಡಪ್ಪ, ಓ.ದೇವೇಂದ್ರಪ್ಪ, ಎ.ಎಸ್.ಶಂಬಣ್ಣ, ಸಿ.ಬಸವರಾಜ, ಕೆ.ಜೆ.ಶಿವಕುಮಾರ, ಮಡಿವಾಳರ ತಿಪ್ಪೇಶಿ, ಗ್ರಾಪಂ ಅಧ್ಯಕ್ಷೆ ನೇತ್ರಾವತಿ, ಇಂದ್ರಮ್ಮ, ಕೆ.ಜಗದೀಶ್, ಶೈಲಜಾ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts