More

    ಖಾಕಿ ಕಾವಲಲ್ಲಿ ಹೆದ್ದಾರಿ ಕಾಮಗಾರಿ

    ಭರಮಸಾಗರ: ರೈತರು ಹಾಗೂ ಗ್ರಾಮಸ್ಥರ ವಿರೋಧದ ನಡುವೆಯೂ ಪೊಲೀಸರ ಸರ್ಪಗಾವಲಿನಲ್ಲಿ ಸಮೀಪದ ವಿಜಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 4ರ ನಿರ್ಮಾಣ ಕಾಮಗಾರಿ ಶುಕ್ರವಾರ ಮುಂದುವರಿಸಿತು. ಕೆಳ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ರೈತ ಸಂಘ ಕಾರ್ಯಕರ್ತರು ಈಚೆಗೆ ಕಾಮಗಾರಿಗೆ ತಡೆಯೊಡ್ಡಿದ್ದರು. ಈ ಕಾರಣಕ್ಕೆ ಪೊಲೀಸ್ ಭದ್ರತೆಯೊಂದಿಗೆ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದರು.

    ಹೆದ್ದಾರಿಯಲ್ಲಿ ಹಾಕಿದ್ದ ಮೆಕ್ಕೆಜೋಳ ರಾಶಿಯನ್ನು ತೆರವುಗೊಳಿಸಲು ರೈತರಿಗೆ ಹೆದ್ದಾರಿ ಪ್ರಾಧಿಕಾರದವರೇ ವಾಹನದ ವ್ಯವಸ್ಥೆ ಮಾಡಿಕೊಟ್ಟು ಸಾಗಿಸಲು ತಿಳಿಸಿದರು. ಕಾಮಗಾರಿ ತಡೆಯಲು ಬಂದ ರೈತ ಮುಖಂಡರಿಗೆ ಇಲ್ಲಿನ ಸಮಸ್ಯೆ ಹಾಗೂ ಪರ್ಯಾಯ ವ್ಯವಸ್ಥೆಗೆ ಜನಪ್ರತಿನಿಧಿಗಳ ಬಳಿ ಚರ್ಚಿಸಿ ಮುಂದುವರಿಯುವಂತೆ ಪೊಲೀಸರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು.

    ಮುನ್ನೆಚ್ಚರಿಕೆ ಕ್ರಮವಾಗಿ ನಾಲ್ಕು ಕೆಎಸ್‌ಆರ್‌ಟಿಸಿ ಬಸ್, ಆರು ಸಿಆರ್‌ಪಿಎಫ್ ತುಕಡಿ, 207 ವಜ್ರ, ಇತರ ವಾಹನಗಳಲ್ಲಿ 300ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಉಪವಿಭಾಗಾಧಿಕಾರಿ ಪ್ರಸನ್ನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹಾಲಿಂಗ ಎನ್.ನಂದಗಾವಿ, ತಹಸೀಲ್ದಾರ್ ವೆಂಕಟೇಶಯ್ಯ, ಡಿವೈಎಸ್‌ಪಿ ಪಾಂಡುರಂಗಪ್ಪ, ಸಿಪಿಐ ಬಾಲಚಂದ್ರ ನಾಯಕ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಮಲ್ಲಿಕಾರ್ಜುನ್, ಚಿತ್ರದುರ್ಗ, ಭರಮಸಾಗರದ ಪಿಎಸ್‌ಐಗಳು ಇದ್ದರು.

    ಪ್ರತಿಭಟನೆ ಪರಿಣಾಮ ಸ್ಥಗಿತಗೊಂಡಿತ್ತು: ವಿಜಾಪುರ ಹಾಗೂ ಕಿಟ್ಟದಹಟ್ಟಿ ಗ್ರಾಮಸ್ಥರಿಗೆ ಓಡಾಡಲು ಅನುಕೂಲವಾಗುವಂತೆ ಅಂಡರ್ ಪಾಸ್ ನಿರ್ಮಿಸಿಕೊಡುವ ವರೆಗೂ ರಸ್ತೆ ಕಾಮಗಾರಿ ಮುಂದುವರಿಸಲು ಬಿಡುವುದಿಲ್ಲ ಎಂದು ಪಟ್ಟುಹಿಡಿದು ಬುಧವಾರ ರೈತಸಂಘ ಕಾರ್ಯಕರ್ತರು ಸುಮಾರು 4 ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ಮಾಡಿದ್ದ ಹಿನ್ನೆಲೆಯಲ್ಲಿ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು.

    ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು ಮಾತನಾಡಿ, ಕಾಮಗಾರಿ ಆರಂಭಗೊಂಡ ಮೊದಲಿನಿಂದಲೂ ಅಂಡರ್ ಪಾಸ್ ನಿರ್ಮಿಸಿಕೊಡುವ ಬಗ್ಗೆ ಹಲವು ಬಾರಿ ಮನವಿ, ಪ್ರತಿಭಟನೆ ಮಾಡಿದರೂ ಸ್ಪಂದಿಸದ ಜಿಲ್ಲಾಡಳಿತದ ನಿಲುವು ಜನವಿರೋಧಿ ಆಗಿದೆ. ರೈತರು ಹಾಗೂ ಗ್ರಾಮಸ್ಥರ ನಿಯೋಗದೊಂದಿಗೆ ಸಂಸದ ನಾರಾಯಣಸ್ವಾಮಿ ಅವರ ಬಳಿ ಚರ್ಚಿಸಲಾಗುವುದು. ಸ್ಪಂದಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts