More

    ಗ್ರಾಪಂನಲ್ಲಿ ಪದವೀಧರರ ಪಾರುಪತ್ಯ, ದೊಡ್ಡಬಳ್ಳಾಪುರದ ಭಕ್ತರಹಳ್ಳಿ ಗ್ರಾಪಂನಲ್ಲಿ ಯುವಕರ ದಂಡು

    | ವೆಂಕಟರಾಜು.ಎಸ್.

    ದೊಡ್ಡಬಳ್ಳಾಪುರ: ಈ ಬಾರಿಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ಯುವಕರು ಆಯ್ಕೆಯಾಗುವ ಮೂಲಕ ಗ್ರಾಪಂಗಳು ಕೇವಲ ಹೆಬ್ಬೆಟ್ಟು, ಅವಿದ್ಯಾವಂತರ ಆಡಳಿತ ಎಂಬ ಹಣೆಪಟ್ಟಿ ದೂರವಾಗಿದೆ ಎಂಬುದಕ್ಕೆ ದೊಡ್ಡಬಳ್ಳಾಪುರ ತಾಲೂಕಿನ ಭಕ್ತರಹಳ್ಳಿ ಗ್ರಾಪಂ ಸಾಕ್ಷಿ.

    ಒಟ್ಟು 15 ಸದಸ್ಯ ಬಲ ಹೊಂದಿರುವ ಭಕ್ತರಹಳ್ಳಿ ಗ್ರಾಪಂಗೆ ಈ ಬಾರಿ ಎಲ್ಲರೂ ಯುವಕರು, ವಿದ್ಯಾವಂತರೇ ಆಯ್ಕೆಯಾಗಿದ್ದಾರೆ. ಯಾವುದೇ ಅಭಿವೃದ್ಧಿ ಇಲ್ಲದೆ ಸೊರಗುತ್ತಿದ್ದ ಗ್ರಾಮಗಳ ಅಭಿವೃದ್ಧಿಯ ಬಗ್ಗೆ ಜನತೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡೇ ಇವರೆಲ್ಲರನ್ನೂ ಆಯ್ಕೆ ಮಾಡಿದ್ದಾರೆ.

    ಅಧ್ಯಕ್ಷರೂ ಸ್ನಾತಕೋತ್ತರ ಪದವೀಧರ: ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಸೇರಿ ನಾಲ್ವರು ಸ್ನಾತಕೋತ್ತರ ಪದವೀಧರರಿದ್ದು, ಸದ್ಯ ಅಧ್ಯಕ್ಷರಾಗಿರುವ ಬಿ.ಆರ್.ಸಿದ್ಧಲಿಂಗಯ್ಯ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ.ಮುಗಿಸಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಜಕೀಯಕ್ಕೆ ಬರಬೇಕು ಎಂದು ಉದ್ಯೋಗ ತೊರೆದು ಗ್ರಾಪಂ ಚುನಾವಣಾ ರಂಗಕ್ಕೆ ಧುಮುಕಿದ್ದರು. ಉಪಾಧ್ಯಕ್ಷರಾಗಿರುವ ಹೇಮಮಾಲಿನಿ ಕೂಡ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಷನ್ ಡಿಪ್ಲೊಮಾ ಮಾಡಿದ್ದಾರೆ.

    3 ಸದಸ್ಯರು ಉನ್ನತ ಶಿಕ್ಷಣ: ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ಅಭಿವೃದ್ಧಿಗೋಸ್ಕರ ವಿವಿಧ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಚುನಾವಣಾ ಕಣಕ್ಕೆ ಧುಮುಕಿದ್ದರು. ಇವರಲ್ಲಿ ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಬೈಯ್ಯಪ್ಪನಹಳ್ಳಿ ಕ್ಷೇತ್ರದ ಬಿ.ಆರ್. ಸಿದ್ದಲಿಂಗಯ್ಯ ಅರ್ಥಶಾಸ್ತ್ರದಲ್ಲಿ ಎಂಎ, ಕಾಡತಿಪ್ಪೂರು ಕ್ಷೇತ್ರದ ಕೃಷ್ಣಮೂರ್ತಿ ಸಮಾಜಶಾಸ್ತ್ರದಲ್ಲಿ ಎಂಎ. ಆಲಪ್ಪನಹಳ್ಳಿ ಕ್ಷೇತ್ರದ ಗಂಗಹನುಮಯ್ಯ ರಾಜಕೀಯಶಾಸ್ತ್ರದಲ್ಲಿ ಎಂಎ ಮಾಡಿ ರಾಜಕೀಯ ರಂಗದಲ್ಲಿ ಭವಿಷ್ಯವನ್ನು ಅರಸಲು ಮುಂದಾಗಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದ ಶ್ರೀಲತಾ ಬಿಎ ಪದವೀಧರೆಯಾಗಿದ್ದರೆ, ಭಕ್ತರಹಳ್ಳಿಯ ರವಿಕುಮಾರ್ ಪಿಯುಸಿವರೆಗೆ ಶಿಕ್ಷಣ ಪಡೆದಿದ್ದಾರೆ.

    ಭ್ರಷ್ಟಾಚಾರರಹಿತ, ಮಾದರಿ ಗ್ರಾಮದ ಸಂಕಲ್ಪದೊಂದಿಗೆ ಸ್ಪರ್ಧಿಸಿದ್ದೆ. ಪ್ರತಿ ಮನೆಗೂ ಶುದ್ಧ ಕುಡಿವನೀರು, ಪ್ರತಿ ಗ್ರಾಮಸ್ಥರ ಮನೆ ಬಾಗಿಲಿಗೆ ಪಡಿತರ, ಸಂಚಾರ ಕಸ ವಿಲೇವಾರಿ ವ್ಯವಸ್ಥೆ, ಮಹಿಳಾ ಸಬಲೀಕರಣಕ್ಕೆ ಮಹಿಳಾ ಸಂಘ ಕೊಠಡಿ ವ್ಯವಸ್ಥೆ, ಸುಸಜ್ಜಿತ ಗ್ರಂಥಾಲಯದ ವ್ಯವಸ್ಥೆ ಮಾಡಲು ಬದ್ಧವಾಗಿದ್ದೇನೆ.

    | ಬಿ.ಆರ್. ಸಿದ್ದಲಿಂಗಯ್ಯ, ಅಧ್ಯಕ್ಷ.

    ಗ್ರಾಮಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸುವುದರ ಜತೆಗೆ ವಿವಿಧ ಯೋಜನೆಗಳ ಅನುದಾನಗಳ ಸಮರ್ಪಕ ಬಳಕೆ, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಮುನ್ನುಡಿ ಬರೆಯವ ಗ್ರಾಮಾಭ್ಯುದಯ ಕನಸಿನೊಂದಿಗೆ ಸ್ನಾತಕೋತ್ತರ ಪದವೀಧರರಾದ ನಾವು ಉತ್ತಮ ಆಡಳಿತ ನೀಡಲಿದ್ದೇವೆ.

    | ಹೇಮಮಾಲಿನಿ, ಉಪಾಧ್ಯಕ್ಷೆ

    ಬಿಬಿಎಂಪಿಯ ಕಸವನ್ನು ಇಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ತಂದು ಸುರಿಯಲಾಗುತ್ತಿದೆ. ಈ ತ್ಯಾಜ್ಯ ವಿಲೇವಾರಿ ಘಟಕಗಳಿಂದ ಪಂಚಾಯತಿಗೆ ಬರಬೇಕಾದ ಆದಾಯ ಪಾರದರ್ಶಕವಾಗಿ, ಸಂಪೂರ್ಣವಾಗಿ ಬರುತ್ತಿಲ್ಲ. ತ್ಯಾಜ್ಯ ಘಟಕಗಳ ಆದಾಯ ಸಂಪೂರ್ಣವಾಗಿ ವಸೂಲಿಯಾದರೆ ಪಂಚಾಯತಿಯ ಅಭಿವೃದ್ಧಿ ಕನಸು ನನಸಾಗಲಿದೆ. ಈ ಬಗ್ಗೆ ಅಧ್ಯಕ್ಷ-ಉಪಾಧ್ಯಕ್ಷರು ಗಮನ ಹರಿಸಬೇಕು.

    | ಸಾರಥಿ ಸತ್ಯಪ್ರಕಾಶ್, ಬಿಜೆಪಿ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts