More

    ಭದ್ರಾವತಿ: ಅಂಗನವಾಡಿಗಳಿಗೆ ಆಟದ ಮೈದಾನವೇ ಇಲ್ಲ

    ಬಸವರಾಜ ಭದ್ರಾವತಿ
    ಮಕ್ಕಳ ಮೊದಲ ಪಾಠಶಾಲೆ ಆಗಿರುವ ಅಂಗನವಾಡಿ ಕೇಂದ್ರಗಳು ಇಂದಿಗೂ ಹತ್ತು ಹಲವು ಮೂಲ ಸಮಸ್ಯೆಗಳ ನಡುವೆಯೂ ಸದ್ದಿಲ್ಲದೇ ತಮ್ಮ ಕಾರ್ಯ ನಿರ್ವಹಿಸುತ್ತಿವೆ. ಮಕ್ಕಳ ಪೌಷ್ಟಿಕತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿರುವ ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೂ ಹೆಚ್ಚು ಆದ್ಯತೆ ನೀಡಬೇಕು ಎಂಬ ಮಾತುಗಳೂ ಇಲಾಖಾ ಅಧಿಕಾರಿಗಳಿಂದ ಕೇಳಿ ಬರುತ್ತಿದೆ.

    ತಾಲೂಕಿನಲ್ಲಿ ಒಟ್ಟು 405 ಅಂಗನವಾಡಿ ಕೇಂದ್ರಗಳಿವೆ. ಗರ್ಭಿಣಿಯರು, ಮಕ್ಕಳು, ಬಾಣಂತಿಯರೂ ಸೇರಿದಂತೆ 26 ಸಾವಿರ ಜನರಿಗೆ ಸರ್ಕಾರದ ಯೋಜನೆಗಳು ಅಂಗನವಾಡಿ ಮೂಲಕ ದೊರಕುತ್ತಿವೆ. ತಾಲೂಕಿನಲ್ಲಿ 387 ಸಹಾಯಕಿಯರಿದ್ದು 300 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳಿವೆ. 105 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ.
    ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಯ ಅನುದಾನ ಬಳಕೆ ಮಾಡಿಕೊಂಡು ಕೆಲವು ಕಟ್ಟಡಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಬಹುತೇಕ ಅಂಗನವಾಡಿಗಳು ಸ್ವಂತದ್ದಾಗಿದ್ದು ನಗರ ಭಾಗದಲ್ಲಿ ಬಾಡಿಗೆ ಪಡೆದು ನಡೆಸಲಾಗುತ್ತಿದೆ. ಸ್ವಂತ ಜಾಗದ ಸಮಸ್ಯೆ ಇದ್ದರೂ 11 ಕಡೆ ಜಾಗ ಗುರುತಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯ ಕಿಷ್ಕಿಂದೆಯಂತಿರುವ ಸಣ್ಣ ಕೊಠಡಿಗಳಲ್ಲಿಯೇ ಮಕ್ಕಳಿಗೆ ಪಾಠ ಹೇಳಿಕೊಡಲಾಗುತ್ತಿದ್ದು, ಆಟದ ಮೈದಾನವಂತೂ ಕೈಗೆಟುಕದ ನಕ್ಷತ್ರವಾಗಿದೆ. ಕೆಲವು ಅಂಗನವಾಡಿಗಳಲ್ಲಿ ಮಾತ್ರ ಮಕ್ಕಳ ಆಟಿಕೆಗಳನ್ನು ಮೈದಾನದಲ್ಲಿ ಅಳವಡಿಸಲಾಗಿದೆ.
    ಬಡ, ಕೂಲಿ ಕಾರ್ಮಿಕರು, ರೈತರು, ಮಧ್ಯಮ ವರ್ಗದ ಜನರೆ ಹೆಚ್ಚಿರುವ ಭದ್ರಾವತಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಭರಾಟೆಯ ನಡುವೆ ಅಂಗನವಾಡಿಗಳು ಸಹ ಇಂದಿಗೂ ಜೀವಂತವಾಗಿವೆ. ಅಂಗನವಾಡಿ ಸಹಾಯಕಿಯರು ಹಾಗೂ ಕಾರ್ಯಕರ್ತೆಯರು ಮಕ್ಕಳ ಆರೋಗ್ಯ ಸುಧಾರಣೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಈಗಿರುವ ಅನ್ನ-ಸಾಂಬಾರ್, ಮೊಟ್ಟೆ, ಮೊಳಕೆ ಕಾಳುಗಳು, ಕಡ್ಲೆ ಮಿಠಾಯಿ, ಹಾಲು ಮಕ್ಕಳಿಗೆ ಸರಿಯಾದ ಆಹಾರ ಕ್ರಮ ಎನ್ನುವುದು ಕಾರ್ಯಕರ್ತೆಯರ ಅಭಿಪ್ರಾಯವಾಗಿದೆ.
    ಹಾಲಿನ ಪೌಡರ್ ಸರಬರಾಜಿಲ್ಲ: ಅಂಗನವಾಡಿ ಕೇಂದ್ರದ ಮಕ್ಕಳ ಪೌಷ್ಟಿಕತೆಗೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಸರ್ಕಾರ ಬಿಸಿ ಅನ್ನ-ಸಾಂಬಾರ್, ಮೊಟ್ಟೆ, ಹಾಲು, ಚಿಕ್ಕಿ ನೀಡುತ್ತಿತ್ತು. ಆದರೆ ಕಳೆದ 6 ತಿಂಗಳಿನಿಂದ ಇದುವರೆಗೂ ಭದ್ರಾವತಿ ತಾಲೂಕಿನಲ್ಲಿ ಹಾಲಿನ ಪೌಡರ್ ಸರಬರಾಜು ಮಾಡುತ್ತಿಲ್ಲ. ವ್ಯವಹಾರಿಕ ಸಮಸ್ಯೆಯಿಂದಾಗಿ ಕೆಎಂಎಫ್ ಹಾಲಿನ ಪೌಡರ್ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಲಾಗುತ್ತಿದೆ. ಉಳಿದಂತೆ ಮೊಟ್ಟೆ, ಅಕ್ಕಿ, ತರಕಾರಿ, ಸಾಂಬಾರು ಪದಾರ್ಥಗಳು ಸರಬರಾಜಾಗುತ್ತಿವೆ. 2024ರ ಜನವರಿಯಿಂದ ಕಾಂಗ್ರೆಸ್ ಸರ್ಕಾರ ಕಿಚಡಿ, ಮಿಲ್ಕಿ ಉಂಡೆ, ಪುಷ್ಟಿ ಉಂಡೆ ನೀಡಲು ಮುಂದಾಗಿದೆ. ಇಲಾಖೆಯು ಈಗಾಗಲೇ ಎಲ್ಲೆಡೆ ಸರಬರಾಜು ಮಾಡುವ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ. ಗರ್ಭಿಣಿ ಹಾಗೂ ಬಾಣಂತಿಯರ ಮನೆಗಳಿಗೆ ಸಹಾಯಕಿಯರು ತಿಂಗಳಿಗೆ ಬೇಕಾಗುವಷ್ಟು ಪ್ರಮಾಣದಲ್ಲಿ ದಿನಸಿ ಪದಾರ್ಥಗಳನ್ನು ವಿತರಿಸಲಾಗುತ್ತಿದೆ.
    ಮೊಬೈಲ್, ಸಿಮ್‌ಕಾರ್ಡ್ ಡೆಡ್: ಅಂಗನವಾಡಿ ಸಹಾಯಕಿಯರು ತಮ್ಮ ದಿನನಿತ್ಯದ ಕಾರ್ಯದ ದತ್ತಾಂಶ ಸಂಗ್ರಹಿಸಲು ಹಾಗೂ ಇಲಾಖೆಯ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲು ಅನುಕೂಲವಾಗಲೆಂದು ಸರ್ಕಾರ ನೀಡಿದ ಮೊಬೈಲ್, ಸಿಮ್‌ಕಾರ್ಡ್‌ಗಳು ಈಗಾಗಲೇ ಬಳಕೆಗೆ ಬಾರದಂತಹ ಸ್ಥಿತಿ ತಲುಪಿವೆ. ಕಡಿಮೆ ಡಾಟಾ ಬಳಕೆಯ ಮೊಬೈಲ್‌ಗಳು, ಸರ್ವರ್ ಸಮಸ್ಯೆಗಳು ಸೇರಿದಂತೆ ಹಲವು ನ್ಯೂನತೆಗಳಿಂದಾಗಿ ಸರ್ಕಾರ ಕೊಟ್ಟ ಮೊಬೈಲ್‌ಗಳು ಕರೆನ್ಸಿ ಖಾಲಿಯಾಗುತ್ತಿದ್ದಂತೆ ಮೂಲೆಗುಂಪಾಗಿವೆ. ಸಹಾಯಕಿಯರ ಸ್ವಂತ ಮೊಬೈಲ್‌ಗಳೇ ಕೆಲವು ಸಂದರ್ಭಗಳಲ್ಲಿ ಇಲಾಖೆಯ ಉಪಯೋಗಕ್ಕೆ ಬಳಕೆಯಾಗುತ್ತಿವೆ. ಸರ್ಕಾರ ಕಾಲಕಾಲಕ್ಕೆ ತಾಂತ್ರಿಕವಾಗಿ ಬದಲಾಗದಿರುವುದು ಮೊಬೈಲ್ ತುಕ್ಕು ಹಿಡಿಯಲು ಕಾರಣವಾಗಿದೆ.
    ಶಿಕ್ಷಣಕ್ಕೂ ಪ್ರಥಮ ಆದ್ಯತೆ ನೀಡಿ: ಸರ್ಕಾರ ನೀಡುವ ಕಡಿಮೆ ಅನುದಾನದಲ್ಲಿ ಸಿಗುವ ಸಣ್ಣ ಸಣ್ಣ ಮನೆಗಳನ್ನೇ ಬಾಡಿಗೆ ಪಡೆಯುವ ಅನಿವಾರ್ಯತೆಯಿದೆ. ಆಟದ ಮೈದಾನ, ಆಸನದ ವ್ಯವಸ್ಥೆ, ನೀರಿನ ಸಮಸ್ಯೆಯಂತಹ ಮೂಲ ಸಮಸ್ಯೆಗಳು ನಗರದ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿಗಳು ಎದುರಿಸಬೇಕಾಗಿದೆ ಎಂದು ಭದ್ರಾವತಿ ಸಿಡಿಪಿಒ ಸುರೇಶ್ ಹೇಳಿದ್ದಾರೆ. ಅಂಗನವಾಡಿಗಳಲ್ಲಿ ಮಕ್ಕಳ ಬೆಳವಣಿಗೆಗೆ ಅಗತ್ಯವಾದ ಪೂರಕ ಆಹಾರದ ಜತೆ ಜತೆಗೆ ಶಿಕ್ಷಣಕ್ಕೂ ಪ್ರಥಮ ಆದ್ಯತೆ ಸಿಗುವಂತಾಗಬೇಕು. ಮೂಲ ಸೌಕರ್ಯ ಉನ್ನತೀಕರಿಸಬೇಕಾಗಿದೆ. ನಗರ ಹಾಗೂ ಗ್ರಾಮೀಣ ಭಾಗದ ಎಲ್ಲ ಕಟ್ಟಡಗಳೂ ಸ್ವಂತ ಜಾಗ ಹೊಂದುವಂತಾಗಬೇಕು. ಮಕ್ಕಳ ದಾಖಲಾತಿ ಸಂಖ್ಯೆ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

    ಅಂಗನವಾಡಿ ಕೇಂದ್ರಗಳಿಗೆ ನೀಡುವ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳು, ಕಟ್ಟಡದ ಬಾಡಿಗೆ ಹಣ, ಮಕ್ಕಳಿಗೆ ಪುಸ್ತಕ ಸರಿಯಾದ ಸಮಯಕ್ಕೆ ತಲುಪುವಂತಾಗಬೇಕು. ತಾಲೂಕಿನಲ್ಲಿ ಮಕ್ಕಳಿಗೆ ಹಾಲು ಕೊಡುವ ಪದ್ಧತಿ ಮುಂದುವರಿಯಬೇಕು ಎಂಬುದು ನಮ್ಮ ಆಶಯ.
    ವೇದಾವತಿ, ಎಐಟಿಯುಸಿ ತಾಲೂಕು ಸಮಿತಿ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts