More

    ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸಿ : ಮೈಸೂರು ಜಿಲ್ಲಾಧಿಕಾರಿ ಸೂಚನೆ

    ಮೈಸೂರು: ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಸೂಚಿಸಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ವಿಪತ್ತು ಪ್ರಾಧಿಕಾರ ಸಭೆ ನಡೆಸಿ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಎಲ್ಲ ತಹಶೀಲ್ದಾರ್‌ಗಳು , ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು ಪ್ರತಿದಿನ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

    ಕುಡಿಯುವ ನೀರಿಗೆ ಸಂಬಂಧಿಸಿದಂತೆ ಅನುದಾನದ ಕೊರತೆ ಇಲ್ಲ. ಅಧಿಕಾರಿಗಳು ಸಮರ್ಪಕ ಹಾಗೂ ಸಮನ್ವಯವಾಗಿ ಕಾರ್ಯನಿರ್ವಹಿಸಬೇಕು. ಖಾಸಗಿ ಕೊಳವೆ ಬಾವಿಗಳಿಗೆ ನೀರು ವೆಚ್ಚದ ಬಿಲ್ಲುಗಳನ್ನು ವಿಪತ್ತು ನಿರ್ವಹಣೆಯಡಿ ಪಾವತಿಸಲಾಗುವುದು. ಹಾಗಾಗಿ ಅವಶ್ಯಕತೆ ಇರುವಷ್ಟು ಹೆಚ್ಚು ಖಾಸಗಿ ಬೊರ್ವೇಲ್ ಗಳನ್ನು ಪಡೆದು ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡಬೇಕು ಎಂದು ತಿಳಿಸಿದರು.

    ಪ್ರಸ್ತುತ 26 ಸಮಸ್ಯಾತ್ಮಕ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಗಳ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ಸದ್ಯ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಮುಂಬರುವ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಗಳಿದ್ದು, ಒಂದುವೇಳೆ ಮಳೆಯಾಗದಿದ್ದರೆ 113 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದಕ್ಕೆ ಮುಂಜಾಗ್ರತ ಕ್ರಮವಾಗಿ ಅಗತ್ಯವಿರುವಷ್ಟು ಖಾಸಗಿ ಕೊಳವೆಬಾವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಇದರಿಂದ ಬರವನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದರು.

    ಬರಗಾಲದಲ್ಲಿ ಕೆರೆಗಳು ಪ್ರಮುಖ ಪಾತ್ರವಹಿಸಲಿದ್ದು, ಜಿಲ್ಲೆಯಾದ್ಯಂತ ಇರುವ ಕೆರೆಗಳ ಮಾಹಿತಿ ಹಾಗೂ ಹೂಳೆತ್ತುವ ಕೆಲಸ ಆಗಬೇಕು. ಅಲ್ಲದೆ ಒತ್ತುವರಿ ಆಗಿರುವ ಕೆರೆಗಳ ಪಟ್ಟಿಮಾಡಿ ಒತ್ತುವರಿ ತೆರವುಗೊಳಿಸಬೇಕು. ಒತ್ತುವರಿ ಆಗದೆ ಇರುವ ಕೆರೆಗಳಿಗೆ ಫೆನ್ಸ್ ಹಾಕಲಾಗಿದೆಯೇ ಎಂದು ಪರಿಶೀಲಿಸಬೇಕು. ಕೆರೆಯಲ್ಲಿ ಹೂಳೆತ್ತುವ ಮೂಲಕ ಸಿಗುವ ಮಣ್ಣು ಮೂಲಸೌಕರ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಹೂಳೆತ್ತುವ ಕೆರೆಗಳಿಂದ ಮಣ್ಣನ್ನು ಉಪಯೋಗಿಸಿಕೊಳ್ಳಬಹುದು. ಇದನ್ನು ರೈತರು ಸಹ ಬಳಸಿಕೊಳ್ಳಬಹುದು ಎಂದು ಹೇಳಿದರು.

    ತಾಲೂಕುವಾರು ಸ್ಥಳೀಯ ರೈತ ಮುಖಂಡರ ಸಭೆ ಕರೆದು ಕುಡಿಯುವ ನೀರಿನ ಸಮಸ್ಯೆ ಹಾಗೂ ಜಾನುವಾರುಗಳಿಗೆ ಮೇವಿನ ತೊಂದರೆ, ಗೋ ಶಾಲೆಗಳ ಅಗತ್ಯತೆಗಳ ಬಗ್ಗೆ ಅವರಿಂದ ದೂರು ಪಡೆದು ಅದನ್ನು ಬಗೆಹರಿಸಲು ಮುಂದಾಗಬೇಕು ಎಂದರು.

    ಇತ್ತೀಚಿನ ದಿನಗಳಲ್ಲಿ ಅನುಮತಿ ಇಲ್ಲದೆ ಖಾಸಗಿ ಕೊಳವೆ ಬಾವಿಗಳನ್ನು ಕೊರೆಸುತ್ತಿರುವುದು ಕಂಡುಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಇದಲ್ಲದೆ ವಿಫಲ ಕೊಳವೆವಾವಿಗಳು ಮತ್ತು ಸಂಪರ್ಕ ನೀಡದೆ ಬಿಟ್ಟಿರುವ ಕೊಳವೆ ಬಾವಿಗಳನ್ನು ಕೂಡಲೇ ಮುಚ್ಚಬೇಕು. ಇಲ್ಲವಾದರೆ ಮುಂದೆ ಆಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದರು.

    ಗ್ರಾಮ ಪಂಚಾಯಿತಿ ಮಟ್ಟದಿಂದಲೇ ಕುಡಿಯುವ ನೀರಿನ ಸಮಸ್ಯೆ ಬಗ್ಗೆ, ಪ್ರಸ್ತುತ ಎದುರಿಸುತ್ತಿರುವ ಬರಗಾಲದ ಬಗ್ಗೆ ಜನರಿಗೆ ಅರಿವು ಮೂಡಿಸಿ ನೀರು ಪೋಲು ಮಾಡದೆ, ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸುವಂತೆ ಜಾಗೃತಿಮೂಡಿಸಬೇಕು ಎಂದು ಸೂಚಿಸಿದರು.

    ಜಿಲ್ಲೆಯಲ್ಲಿ ಕಾಲರ ಪ್ರಕರಣ ಕಂಡು ಬರುತ್ತಿದೆ. ಹಾಗಾಗಿ ಪೂರೈಕೆ ಮಾಡುತ್ತಿರುವ ನೀರು ಶುದ್ಧವಾಗಿದೆಯೇ ಎಂದು ಅದರ ಗುಣಮಟ್ಟವನ್ನು ಪರೀಕ್ಷಿಸಿದ ನಂತರ ಸಾರ್ವಜನಿಕರಿಗೆ ನೀಡಬೇಕು. ಜಿಲ್ಲೆಯಾದ್ಯಂತ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದರೆ 1077 ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ಮಾಹಿತಿ ನೀಡಿದರು.

    ಮೇ ತಿಂಗಳಿನಲ್ಲಿ ಮಳೆ ಬರುವ ಸಾಧ್ಯತೆಗಳಿದ್ದು, ಅಲ್ಲಿಯವರೆಗೆ ಪಶುಗಳಿಗೆ ಮೇವು, ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ರೈತರಿಗೆ ಈ ವಾತಾವರಣಕ್ಕೆ ತಕ್ಕಂತಹ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

    ಅತಿ ಹೆಚ್ಚು ಜನ ಸೇರುವ ಸ್ಥಳಗಳಾದ ಮಾರುಕಟ್ಟೆ, ಹೋಟೆಲ್ಗಳು ಹಾಗೂ ಇತ್ಯಾದಿ ಜನ ಸೇರುವ ಸ್ಥಳಗಳಲ್ಲಿ ಕುಡಿಯುವ ನೀರಿನ ಅರವಟಿಕೆಗಳನ್ನು ಸ್ಥಾಪಿಸುವುದರ ಮೂಲಕ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ಮುಕ್ತವಾಗಿಸಬೇಕು ಎಂದರು.

    ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಎಂ ಗಾಯತ್ರಿ ಮಾತನಾಡಿ, ನೀರಿನಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆರೋಗ್ಯ ಸಮಸ್ಯೆ ಕಂಡು ಬರುವುದರಿಂದ ಕುಡಿಯುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿದ ನಂತರ ಜನರಿಗೆ ಪೂರೈಕೆ ಮಾಡಬೇಕು. ಅಲ್ಲದೆ ಯಾವ ಮಟ್ಟದಲ್ಲಿ ಎಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ನೀರಿನ ಪೂರೈಕೆ ಆಗುತ್ತಿದೆ ಎಂಬುದನ್ನು ನೋಡಿಕೊಂಡು, ಯಾವುದೇ ಕಾರಣಕ್ಕೂ ಪೂರೈಕೆ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು ಎಂದರು.

    ಕಾಲರ ಪ್ರಕರಣ ಕಂಡು ಬಂದಿರುವ ಕಾರಣ ಪ್ರತಿ ಹಂತದಲ್ಲಿಯೂ ಎಚ್ಚರಿಕೆ ಬಹಳ ಮುಖ್ಯ. ಬೀದಿಬದಿ ಮಾರಾಟ ಮಾಡುವ ವ್ಯಾಪಾರಿಗಳು ಸುರಕ್ಷಿತ ಆಹಾರವನ್ನು ಮಾರಾಟ ಮಾಡುತ್ತಿದ್ದಾರೆಯೇ ಎಂಬುದನ್ನು ಪರೀಕ್ಷಿಸಬೇಕು. ಪ್ರತಿಯೊಬ್ಬರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸೂಚಿಸಿದರು.

    ಸಭೆಯಲ್ಲಿ ನಗರ ಪಾಲಿಕೆ ಆಯುಕ್ತೆ ಎನ್.ಎನ್. ಮಧು, ನಂಜನಗೂಡು, ಪಿರಿಯಾಪಟ್ಟಣ, ಮೈಸೂರು, ಎಚ್.ಡಿ.ಕೋಟೆ, ಸರಗೂರು, ತಿ.ನರಸೀಪುರ, ಹುಣಸೂರು ಹಾಗೂ ಕೆ.ಆರ್. ನಗರ ತಾಲೂಕಿನ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts