More

    ಮಾಹಿತಿಯ ಮಹತ್ವ: ತಂತ್ರಜ್ಞಾನದ ಬಳಕೆ ಮಿತಿಯಲ್ಲಿದ್ದರೆ ಉತ್ತಮ

    ತಂತ್ರಜ್ಞಾನ ಮುಂದುವರಿದಂತೆಲ್ಲ ಹೆಚ್ಚೆಚ್ಚು ಜನರಿಗೆ ಅದರ ಪ್ರಯೋಜನ ದೊರೆಯಬೇಕು ಎಂಬುದು ಸಹಜ ನಿರೀಕ್ಷೆ. ಹಾಗಾದಾಗಲೇ ಆ ಜ್ಞಾನ ಹೆಚ್ಚು ಪ್ರಸರಣ ಆದಂತಾಗುತ್ತದೆ; ಸಮಾಜ-ದೇಶಕ್ಕೆ ಅದರಿಂದಾಗುವ ಲಾಭದ ಪ್ರಮಾಣವೂ ಹೆಚ್ಚಾಗುತ್ತದೆ. ಈಗಂತೂ ಬಹುತೇಕ ಎಲ್ಲರಿಗೂ ಮೊಬೈಲ್ ಅನಿವಾರ್ಯ ಸಾಧನದಂತಾಗಿದ್ದು, ಇಂಟರ್ನೆಟ್ ಒಂದಿದ್ದರೆ ಕೂತಲ್ಲೇ ಬೇಕಾದ ಮಾಹಿತಿ ಪಡೆಯಬಹುದು. ಜನಜೀವನದ ಎಲ್ಲ ರಂಗಗಳಿಗೂ ಇದರಿಂದ ಬಹುಬಗೆಯ ಉಪಯೋಗ ಆಗಿರುವುದನ್ನು ಅಲ್ಲಗಳೆಯಲಾಗದು. ಆದರೆ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಆದಂತೆ, ಅದಕ್ಕೆ ಸಮಾನಾಂತರವಾಗಿ ವಂಚನೆ ಕೂಡ ಹೊಸ ಹೊಸ ರೀತಿಯಲ್ಲಿ ನಡೆಯುವುದು ಕಳವಳದ ಸಂಗತಿ.

    ಬ್ಯಾಂಕ್ ಖಾತೆಗಳಿಗೆ ಕನ್ನಹಾಕುವುದು; ಉಡುಗೊರೆ ಹೆಸರಲ್ಲಿ ವಂಚಿಸುವುದು ಇವೆಲ್ಲ ಸಾಮಾನ್ಯ ಎಂಬಂತಾಗಿವೆ. ಸೈಬರ್ ಖದೀಮರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜನರ ಖಾಸಗಿ ಬದುಕಿನಲ್ಲಿ ಪ್ರವೇಶಿಸುತ್ತಿರುವುದು ಮತ್ತಷ್ಟು ಕಳವಳದ ಸಂಗತಿ. ವಾಟ್ಸಪ್​ಗೆ ಯಾವುದೋ ನಂಬರಿನಿಂದ ಕರೆಮಾಡಿ, ಆಚೆಯ ವ್ಯಕ್ತಿ ಸ್ವೀಕರಿಸಿದಾಕ್ಷಣ ಅರೆಬೆತ್ತಲೆಯಾಗಿ ಕಾಣಿಸಿಕೊಂಡು, ತದನಂತರದಲ್ಲಿ ಅಶ್ಲೀಲ ಚಿತ್ರ ವೀಕ್ಷಣೆ ಹೆಸರಿನಲ್ಲಿ ಬೆದರಿಸಿ ಬ್ಲಾ್ಯಕ್​ವೆುೕಲ್ ಮಾಡುವ ಕುರಿತು ಅನೇಕ ದೂರುಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇದು ಜನರನ್ನು ವಂಚಿಸುವ ಮತ್ತೊಂದು ಬಗೆ. ಮರ್ಯಾದೆಗೆ ಅಂಜಿ ಈ ಬಗ್ಗೆ ಕೆಲವರು ಮಾತ್ರ ದೂರು ದಾಖಲಿಸಿದ್ದು, ಇಂಥ ಎಷ್ಟು ಪ್ರಕರಣಗಳು ನಡೆದಿವೆಯೋ!

    ಇದೀಗ ಮತ್ತೊಂದು ಆತಂಕಕಾರಿ ಸಂಗತಿ ಬಯಲಾಗಿದೆ. ವಿದೇಶಗಳಿಂದ ವಾಟ್ಸಪ್​ಗೆ ಅಪರಿಚಿತ ನಂಬರ್​ಗಳಿಂದ ಮಿಸ್ಡ್​ಕಾಲ್ ಬರುತ್ತಿರುವ ಬಗ್ಗೆ ಅನೇಕರು ದೂರಿದ್ದಾರೆ. ಭಾರತದಲ್ಲಿ ವಾಟ್ಸಪ್ ಬಳಕೆದಾರರ ಸಂಖ್ಯೆ 50 ಕೋಟಿಯಷ್ಟಿದೆ. ಈ ಅಗಾಧ ಸಂಖ್ಯೆ ವಂಚಕರಿಗೆ ಆಕರ್ಷಣೆಯಾಗಿದೆ. ಒಬ್ಬರಲ್ಲ ಒಬ್ಬರು ಬಲೆಗೆ ಬೀಳುತ್ತಾರೆಂಬ ನಂಬಿಕೆಯಿಂದ ವಂಚಕರ ಪ್ರಯತ್ನ ಸಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಕರೆಗಳ ಬಗ್ಗೆ ಪ್ರತಿಕ್ರಿಯಿಸಿರುವ ವಾಟ್ಸಪ್ ಮಾತೃಸಂಸ್ಥೆಯಾದ ಮೆಟಾ, ಸ್ಪ್ಯಾಮ್ ಡಿಟೆಕ್ಷನ್ ತಂತ್ರಜ್ಞಾನವನ್ನು ಬಳಸಿ ವಂಚನೆಯನ್ನು ಗುರುತಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಕೀನ್ಯಾ, ಇಥಿಯೋಪಿಯಾ, ಇಂಡೋನೇಷ್ಯಾ, ವಿಯೆಟ್ನಾಂ ಮುಂತಾದ ದೇಶಗಳಿಂದ ಇಂಥ ಕರೆಗಳು ಬರುತ್ತಿವೆ ಎನ್ನಲಾಗಿದ್ದರೂ, ವಾಟ್ಸಪ್ ಅಂತರ್ಜಾಲ ಆಧಾರಿತ ವೇದಿಕೆಯಾಗಿರುವುದರಿಂದ ಇಂಟರ್ನೆಟ್ ಟೆಲಿಫೋನಿ ಮೂಲಕ ಮೋಸಗಾರರು ಯಾವ ದೇಶದ ಕೋಡ್ ಬಳಸಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಕರೆ ಮಾಡಬಹುದಾಗಿದೆ.

    ಹೀಗಾಗಿ ಇಂಥದೇ ನಿರ್ದಿಷ್ಟ ದೇಶದಿಂದ ಎನ್ನಲಾಗದು. ಇಂಥ ವಾಟ್ಸಪ್ ಕರೆಗಳ ಮೂಲಕ ಸಾರ್ವಜನಿಕರ ಖಾಸಗಿತನಕ್ಕೆ ಧಕ್ಕೆಯಾಗಿದ್ದರೆ ಆ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಾಮಾಜಿಕ ವೇದಿಕೆಗಳಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಿದ್ದು, ಇಂಥ ವೇದಿಕೆಗಳನ್ನು ನಡೆಸುವ ಖಾಸಗಿ ಕಂಪನಿಗಳು ಸಹ ಈ ಯತ್ನದಲ್ಲಿ ಕೈಜೋಡಿಸಬೇಕಾಗುತ್ತದೆ. ಅಂದಾಗ ಮಾತ್ರ, ಜನರು ನಿಶ್ಚಿಂತೆಯಿಂದ ತಂತ್ರಜ್ಞಾನ ವೇದಿಕೆಗಳಲ್ಲಿ ಸಕ್ರಿಯರಾಗಿರಬಹುದು. ಜನರು ಸಹ ಪೂರ್ಣ ಮಾಹಿತಿ ಪಡೆದುಕೊಂಡೇ ಇಂಥ ವೇದಿಕೆಗಳನ್ನು ಬಳಸಬೇಕು. ಅಂದಹಾಗೆ, ಇಂದು, ಮೇ 11 ತಂತ್ರಜ್ಞಾನ ದಿನ. ಅಂತರ್ಜಾಲದಲ್ಲಿ ವಿವೇಚನೆಯಿಂದ ವ್ಯವಹರಿಸುವ ಸಂಕಲ್ಪ ಮಾಡುವುದಕ್ಕೆ ಈ ದಿನ ನಿಮಿತ್ತವಾಗಲಿ.

    EXIT POLL ಪ್ರಕಟ: ಈ ಬಾರಿ ಯಾರಿಗೆ ಬಹುಮತ? ಇಲ್ಲಿದೆ ವಿವರ…

    ಚುನಾವಣೋತ್ತರ ಸಮೀಕ್ಷೆ- ದಿಗ್ವಿಜಯ ನ್ಯೂಸ್​: ಇಲ್ಲಿದೆ ಲೈವ್ ಅಪ್​ಡೇಟ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts