More

    ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಅಕ್ಷತಾ ಕೃಷ್ಣಮೂರ್ತಿ

    ಕಾರವಾರ: “ಇಸ್ಕೂಲು” ಎಂಬ ಅಂಕಣ ಬರಹ, ಪುಸ್ತಕದ ಮೂಲಕ ಹಳ್ಳಿಗಳ ಸರ್ಕಾರಿ ಕನ್ನಡ ಶಾಲೆಗಳ ಆಂತರ್ಯವನ್ನು ಜಗತ್ತಿಗೆ ತೆರೆದಿಟ್ಟ ಅಕ್ಷತಾ ಕೃಷ್ಣಮೂರ್ತಿ ಅವರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಬೆಂಗಳೂರಿನಲ್ಲಿ ಮಂಗಳವಾರ ಆಯೋಜನೆಯಾಗಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಶಿಕ್ಷಣ ಸಚಿವ ಮಧು ಬಂಗಾರಪ್ಪ‌ ಹಾಗೂ ಇತರ ಗಣ್ಯರು ಇದ್ದರು‌.

    ಪರಿಚಯ
    ಅಂಕೋಲಾ ತಾಲೂಕಿನ ಬೇಲೆಕೇರಿಯ ಅಕ್ಷತಾ ಕೃಷ್ಣಮೂರ್ತಿ ಸ್ನಾತಕೋತ್ತರ ಪದವಿ ಪಡೆದವರು. ಜೊಯಿಡಾ ತಾಲೂಕಿನ ಅಣಶಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾರೆ.
    ಶಿಕ್ಷಣದ ಜತೆಗೆ ಬರವಣಿಗೆಯಲ್ಲಿ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ಕಥೆ,ಘಜಲ್ ಗಳನ್ನು ರಚಿಸಿದ್ದಾರೆ. ಇದುವರೆಗೆ ಅವರ 11 ಕೃತಿಗಳು ಪ್ರಕಟವಾಗಿವೆ. ಅವರ ಅಬ್ಬೊಲಿ ಎಂಬ ಕೃತಿ ಮೈಸೂರು ವಿಶ್ವ ವಿದ್ಯಾಲಯದ ಪಠ್ಯವಾಗಿದೆ. 12 ವರ್ಷಗಳಿಂದ ಗಾಂವಕರ್ ಫೌಂಡೇಷನ್‌ನಲ್ಲಿ ಸಕ್ರಿಯವಾಗಿದ್ದಾರೆ.
    ಗ್ರಾಮೀಣ ಸೊಗಡಿನ ಆಪ್ತ, ಶೈಲಿಯ ಬರವಣಿಗೆಯಲ್ಲಿ ಅವರು ಪಳಗಿದ್ದು, ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಸಾಕಷ್ಟು ಲೇಖನ ಬರೆದಿದ್ದಾರೆ. ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಅವರ ಕಿರು ಸಂದರ್ಶನ ಇಲ್ಲಿದೆ.

    ಕನ್ನಡ ಶಾಲೆ ಮುಚ್ಚಬಾರದು

    ಪ್ರಸ್ತುತ ಜಗತ್ತಿಗೆ ಶಿಕ್ಷಣ ಪದ್ಧತಿ ಹೇಗಿರಬೇಕು…?
    ಉತ್ತರ:-ಶಾಲೆ ಎಂದರೆ ಕೇವಲ ಕಲಿಕೆಯ ಕೇಂದ್ರವಲ್ಲ. ಪ್ರತಿ ಶಾಲೆಗೂ ಅದರದ್ದೇ ಆದ ಭೌಗೋಳಿಕೆ ವಿಶೇಷತೆ ಇರುತ್ತದೆ. ಅಲ್ಲಿನ ಸಂಸ್ಕೃತಿ, ಭಾಷೆ, ಪರಿಸರದ ಜತೆ ಅದು ಒಗ್ಗೂಡಿಕೊಂಡಿರುತ್ತದೆ. ಮಕ್ಕಳು ಕಡಿಮೆಯಾದರು ಎಂದು ಶಾಲೆಗಳನ್ನು ಮುಚ್ಚುವುದು. ಬೇರೆ ಶಾಲೆಗಳ ಜತೆ ಸೇರಿಸುವುದು ಸರಿಯಲ್ಲ. ಭವಿಷ್ಯಕ್ಕೆ ಇಂಗ್ಲಿಷ್ ಭಾಷೆ ಬೇಕು ಎಂಬುದು ನಿಜವಾದರೂ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು. ಇದರಿಂದ ಮಕ್ಕಳಿಗೆ ಘಟ್ಟಿ ತಳಹದಿ ಸಿಗುತ್ತದೆ.

    ನಿಮ್ಮ ಸಾಧನೆಗೆ ಪ್ರೇರಣೆ ಏನು…?

    ಉತ್ತರ:-ಗ್ರಾಮೀಣ ಪ್ರದೇಶದ ಕಾಡು, ಹಳ್ಳ,ಕೊಳ್ಳ ಮುಂತಾದವನ್ನು ನೋಡಿ ಬೆಳೆದು ಬಂದವಳು. ಕನ್ನಡ ಶಾಲೆಯಲ್ಲಿ ಕಲಿತು, ಕನ್ನಡ, ಕೊಂಕಣಿ, ಉರ್ದು ಮುಂತಾದ ವಿಭಿನ್ನ ಭಾಷೆಯ, ವಿಭಿನ್ನ ಸಂಸ್ಕೃತಿಯ ಜನರು, ಸ್ನೇಹಿತರ ಜತೆ ಒಡನಾಡಿ ಕಲಿತು ಬೆಳೆದವಳು. ಅದೆಲ್ಲದರ ಪ್ರಭಾವ ನನ್ನ ಸೃಜನಶೀಲತೆ ಅಕ್ಷರ ರೂಪದಲ್ಲಿ ಹೊರ ಬಂದಿದೆ ಎಂದುಕೊಂಡಿದ್ದೇನೆ. ಹೈಸ್ಕೂಲ್ ಹಂತದಿಂದಲೇ,ಸಾಕಷ್ಟು ಪುಸ್ತಕ ಓದುತ್ತಿದ್ದೆ. ಕನ್ನಡ ಪುಸ್ತಕಗಳ ಓದು ನನ್ನ ಬರವಣಿಗೆಗೆ ಸಾಕಷ್ಟು ಪ್ರೇರಕವಾಗಿದೆ.

    *ಪ್ರಶಸ್ತಿ ಬಂದಿದ್ದು ಹೇಗನ್ನಿಸುತ್ತದೆ…?
    ಉತ್ತರ:-ಜೊಯಿಡಾ ತಾಲೂಕಿನ ಶಿಕ್ಷಕರೊಬ್ಬರಿಗೆ ಸಂದ ಮೊದಲ ರಾಜ್ಯ ಮಟ್ಟದ ಪ್ರಶಸ್ತಿ ಇದು. ಆ ಭಾಗ್ಯ ನನ್ನದಾಗಿದೆ ಎಂಬ ಹೆಮ್ಮೆ ಇದೆ. ನನಗಿಂತ ಜೊಯಿಡಾದ ಜನ ಖುಷಿಪಡುತ್ತಿದ್ದಾರೆ. ನಾನು 16 ವರ್ಷದಿಂದ ಜೊಯಿಡಾದಲ್ಲಿ ಮರಾಠಿ ಹಾಗೂ ಕೊಂಕಣಿ ಮಾತೃಭಾಷೆಯ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಮಾಡುತ್ತಿದ್ದೇನೆ. ಇಂಥ ಹಳ್ಳಿಯ ಶಾಲೆಗಳಲ್ಲಿ ಕಲಿಕೆಗೆ ವಿಭಿನ್ನವಾದ ಸವಾಲು ಹಾಗೂ ಅನುಕೂಲಗಳೂ ಇರುತ್ತವೆ. ನನ್ನೆಲ್ಲ ಕಾರ್ಯಗಳಿಗೆ ನಿರಂತರ ಸ್ಪಂದನೆ ನೀಡಿದವರು ನನ್ನ ಮಕ್ಕಳು. ಅವರ ಪ್ರೇರಣೆಯಿಂದಲೇ ನಾನು `ಇಸ್ಕೂಲು’ ಎಂಬ ಪುಸ್ತಕ ಬರೆದೆ. ನನ್ನ ಪ್ರಶಸ್ತಿ ಜೊಯಿಡಾದ ಆ ಮಕ್ಕಳಿಗೆ, ಸಹಕರಿಸಿದ ಪಾಲಕರಿಗೆ ಸಲ್ಲಬೇಕು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts