More

    ಬೇರೊಬ್ಬರ ಬೆರಳಚ್ಚು ಬಳಸಿ ನರೇಗಾ ಹಣ ದುರುಪಯೋಗ: ಕನಕಪುರ ಅರಣ್ಯ ಕಚೇರಿ ಕಂಪ್ಯೂಟರ್ ಸಹಾಯಕನ ಕೃತ್ಯ

    ರಾಮನಗರ: ನಿರುದ್ಯೋಗ ಸಮಸ್ಯೆ ಪರಿಹಾರಕ್ಕೆ ನರೇಗಾ ಹೇಗೆ ರಾಮಬಾಣವೋ, ನುಂಗುಬಾಕರಿಗೂ ಅಷ್ಟೇ ವರದಾನವಾಗಿರುವ ಯೋಜನೆ ಎನ್ನುವುದು ಹಲವಾರು ಬಾರಿ ಸಾಬೀತಾಗಿದೆ. ಇದೀಗ ಇಂತಹುದೇ ನುಂಗುಬಾಕ ಕೆಲಸವೊಂದು ಕನಕಪುರ ಪ್ರಾದೇಶಿಕ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಪ್ರಕರಣ ಸದ್ದಿಲ್ಲದೆ ವಾಪಸ್ ಆಗಿರುವುದು ಅನುಮಾನಗಳಿಗೆ ಕಾರಣವಾಗಿದೆ.

    ಏನಿದು ದೂರು?: ಮುನೇಶ್ವರ ಬೆಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಲ್ಲಿ ಕೆರೆಗಳ ಹೂಳೆತ್ತುವ ಮತ್ತು ತೇವಾಂಶ ಸಂಗ್ರಹ ಕಾರ್ಯವನ್ನು 2020-21ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗಿದೆ. ಯಾವುದೇ ನರೇಗಾ ಕಾಮಗಾರಿ ಕೈಗೊಳ್ಳುವ ಮುನ್ನ ಅದಕ್ಕೆ ಸಂಬಂಧಿಸಿದಂತೆ ನರೇಗಾ ಪೋರ್ಟಲ್‌ನಲ್ಲಿ ಎನ್‌ಎಂಆರ್ ಸೃಜಿಸಬೇಕು. ಈ ರೀತಿ ಎನ್‌ಎಂಆರ್ ಸೃಜಿಸಬೇಕಾದರೆ ಜಿಲ್ಲಾ ಪಂಚಾಯಿತಿಯಿಂದ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಪಡೆದುಕೊಳ್ಳಬೇಕು.ಇವನ್ನು ಬಳಸಿ ಎನ್‌ಎಂಆರ್ ಸೃಜಿಸಿದ ನಂತರ ಅಂತಿಮವಾಗಿ ವಲಯ ಅರಣ್ಯಾಧಿಕಾರಿ ಬಯೋ ಮೆಟ್ರಿಕ್ ಪಡೆದು ಬಿಲ್ ಪಡೆಯುವುದು ಸೇರಿ ಇತರ ಅಧಿಕೃತ ಅನುಮೋದನೆಯನ್ನು ಪಡೆದುಕೊಳ್ಳಬೇಕು.
    ಆದರೆ, ಕನಕಪುರ ವಲಯ ಅರಣ್ಯ ಕಚೇರಿಯ ಕಂಪ್ಯೂಟರ್ ಸಹಾಯಕ ವಲಯ ಅರಣ್ಯಾಧಿಕಾರಿ ಬೆರಳಚ್ಚು ಡಿಲೀಟ್ ಮಾಡಿ ಬೇರೊಬ್ಬರ ಬೆರಳಚ್ಚನ್ನು ಬಳಕೆ ಮಾಡಿ ಹಣ ದುರುಪಯೋಗ ಮಾಡಿಕೊಂಡಿರುವುದು ಆ.12ರಂದು ಪತ್ತೆಯಾಗಿತ್ತು. ಈ ಸಂಬಂಧ ಆ.13ರಂದೇ ಕನಕಪುರದ ಪುರ ಪೊಲೀಸ್ ಠಾಣೆಗೆ ಕನಕಪುರ ವಲಯ ಅರಣ್ಯಾಧಿಕಾರಿ ದಿನೇಶ್ ದೂರು ನೀಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

    ಅನುಮಾನ ಮೂಡಿಸಿದ ನಡೆ?: ಒಂದೆಡೆ ದೂರು ನೀಡಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದ ವಲಯ ಅರಣ್ಯಾಧಿಕಾರಿ ದಿನೇಶ್ ಮತ್ತೆ ದೂರನ್ನು ಹಿಂಪಡೆದಿದ್ದಾರೆ. ಇದರಿಂದ ಅಧಿಕಾರಿಗಳ ನಡೆಯ ಬಗ್ಗೆಯೇ ಅನುಮಾನ ಮೂಡುವಂತೆ ಆಗಿದೆ. ವಲಯ ಅರಣ್ಯಾಧಿಕಾರಿ ದಿನೇಶ್ ಹಿರಿಯ ಅಧಿಕಾರಿಗಳ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡರೇ ಎನ್ನುವ ಪ್ರಶ್ನೆಯೂ ಕಾಡಿದ್ದು, ಇದಕ್ಕೆ ಅರಣ್ಯಾಧಿಕಾರಿಗಳೇ ಉತ್ತರ ನೀಡಬೇಕಿದೆ.

    ಒಬ್ಬರಿಂದ ಸಾಧ್ಯವೆ?: ಮೇಲ್ನೋಟಕ್ಕೆ ಇದು ಗಣಕಯಂತ್ರ ಸಹಾಯಕನ ಕೃತ್ಯ ಎಂದು ಅನಿಸುತ್ತದೆ. ಆದರೆ ಇದು ಗಣಕ ಯಂತ್ರ ಸಹಾಯಕನೊಬ್ಬನಿಂದ ಮಾತ್ರ ಮಾಡಲು ಸಾಧ್ಯವಲ್ಲದ ಕೆಲಸ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಜಿಪಂ ಡಾಂಗಲ್‌ನಲ್ಲಿ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಜಿಲ್ಲಾ ಪಂಚಾಯಿತಿಯಿಂದಲೇ ಸೃಜಿಸಲಾಗುತ್ತದೆ. ಹಾಗಾದರೆ ಕಂಪ್ಯೂಟರ್ ಸಹಾಯಕನಿಗೆ ಹೊಸ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನೀಡಿದವರು ಯಾರು ಎನ್ನುವ ಪ್ರಶ್ನೆಯೂ ಮೂಡಿದೆ. ಅಲ್ಲದೆ, ಅಧಿಕಾರಿಯ ಸೂಚನೆ, ಅಥವಾ ನಿರ್ದೇಶನವಿಲ್ಲದೆ ಗಣಕ ಯಂತ್ರದ ಸಹಾಯಕ ಈ ರೀತಿ ಮಾಡಲು ಸಾಧ್ಯವೇ ಎನ್ನುವ ದೊಡ್ಡ ಪ್ರಶ್ನೆಯೂ ಮೂಡದೇ ಇರದು.

    ತನಿಖೆ ನಡೆಯಬೇಕಿದೆ?: ಡಾಂಗಲ್ ದುರ್ಬಳಕೆ ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿ ವಾಪಸಾಗಿದ್ದರೂ ಇದೀಗ ಜಿಪಂ ಕರ್ತವ್ಯ ವಿಶ್ವಾರ್ಹತೆಯ ಬಗ್ಗೆಯೇ ಪ್ರಶ್ನೆ ಮೂಡುವಂತೆ ಮಾಡಿದೆ. ನರೇಗಾ ನಿಯಂತ್ರಣ ಸಂಪೂರ್ಣವಾಗಿ ಜಿಲ್ಲಾ ಪಂಚಾಯಿತಿಯಿಂದಲೇ ನಡೆಯುವುದರಿಂದ ಡಾಂಗಲ್ ದುರುಪಯೋಗದ ಹಿಂದೆ ಜಿಪಂ ಅಧಿಕಾರಿಗಳು, ಸಿಬ್ಬಂದಿ ಸಹಕಾರವಿಲ್ಲದೆ ನಡೆಯಲು ಸಾಧ್ಯವಿಲ್ಲ. ಅರಣ್ಯ ಇಲಾಖೆಯಲ್ಲಿ ನಡೆದಿರುವ ಪ್ರಕರಣದ ತನಿಖೆಯನ್ನು ಜಿಲ್ಲಾ ಪಂಚಾಯಿತಿಯೂ ಕೈಗೊಂಡು, ಏನಾಗಿದೆ ಎನ್ನುವ ಸ್ಪಷ್ಟ ಚಿತ್ರಣವನ್ನು ಸಾರ್ವಜನಿಕರ ಮುಂದೆ ಇಡಬೇಕಿದೆ. ಈ ಬಗ್ಗೆ ಜಿಪಂ ಸಿಇಒ ಸೂಕ್ತ ಗಮನಹರಿಸಿ ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

    ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು, ಆದರೆ ನಂತರ ಇದನ್ನು ಸರಿಪಡಿಸಿಕೊಂಡು ದೂರನ್ನು ವಾಪಸ್ ಪಡೆದುಕೊಳ್ಳಲಾಗಿದೆ.
    *ಸದಾಶಿವ ಎನ್. ಹೆಗಡೆ, ಡಿಸಿಎಫ್, ಪ್ರಾದೇಶಿಕ ಅರಣ್ಯ ವಿಭಾಗ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts