More

    ಬಿಇಒ ಸಹಿ ಫೋರ್ಜರಿ, ಎಸ್​ಡಿಎ ಸಸ್ಪೆಂಡ್​

    ಕುಷ್ಟಗಿ(ಕೊಪ್ಪಳ): ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ದ್ವಿತಿಯ ದರ್ಜೆ ಸಹಾಯಕ ಪ್ರಶಾಂತ ಎಂಬಾತ ಬಿಇಒ ಅವರ ನಕಲಿ ಸಹಿ ಮಾಡಿ ಸಿಕ್ಕಿ ಬಿದ್ದಿದ್ದಾನೆ. ಡಿಡಿಪಿಐ ಶ್ರೀಶೈಲ ಬಿರಾದರ ನೌಕರನನ್ನು ಅಮಾನತುಗೊಳಿಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಗೆ ನೇಮಕಗೊಂಡಿರುವ ಅಭ್ಯರ್ಥಿಗಳ ಪ್ರಮಾಣ ಪತ್ರಗಳ ನೈಜತೆ ಪರಿಶೀಲಿಸಲು ಅವುಗಳನ್ನು ಉಪನಿರ್ದೇಶಕರ ಕಚೇರಿಯಿಂದ ಬಿಇಒ ಕಚೇರಿಗೆ ಕಳುಹಿಸಲಾಗಿದೆ. ಪ್ರಮಾಣಪತ್ರಗಳನ್ನು ಪರಿಶೀಲಿಸಿ ದೃಢೀಕರಿಸಿದ ಪ್ರಮಾಣಪತ್ರಗಳನ್ನು ಪುನ: ಉಪನಿರ್ದೇಶಕರ ಕಚೇರಿಗೆ ಕಳುಹಿಸಬೇಕು.

    ಪರಿಶೀಲನೆಗೆಂದು ಕಳಿಸಿದ್ದ ಭಾರತಿ ಮಹಾದೇವಪ್ಪ ಎನ್ನುವವರ ಪ್ರಮಾಣ ಪತ್ರಗಳ ಕಡತವನ್ನು ಪ್ರಶಾಂತ ತಾನೇ ನಿರ್ವಹಿಸಿ ಬಿಇಒ ಸಹಿಯನ್ನೂ ನಕಲು ಮಾಡಿ ಉಪನಿರ್ದೇಶಕರ ಕಚೇರಿಗೆ ರವಾನಿಸಿದ್ದಾನೆ. ಎಲ್ಲ ಕಡತಗಳಿಗೆ ಬಿಇಒ ಕಚೇರಿ ಮೊಹರು ಹಾಕಿ, ಮೊದಲ ಪುಟಕ್ಕೆ ಮಾತ್ರ ಸಹಿ ಮಾಡಿದ್ದಾನೆ. ವಿಷಯ ತಿಳಿದ ಬಿಇಒ ಸುರೇಂದ್ರ ಕಾಂಬ್ಳೆ ಪರಿಶೀಲಿಸಿದಾಗ ತಮ್ಮ ಸಹಿ ನಕಲು ಮಾಡಿರುವುದು ದೃಢಪಟ್ಟಿದೆ.

    ಈ ಸಂಬಂಧ ಪ್ರಶಾಂತ್​ಗೆ ಕಾರಣ ಕೇಳಿ ನೋಟಿಸ್​ ನೀಡಿದ್ದರು. ನೋಟಿಸ್​ಗೆ ಉತ್ತರ ನೀಡದ ಕಾರಣ ಶಿಸ್ತುಕ್ರಮಕ್ಕೆ ಡಿಡಿಪಿಐಗೆ ಶಿಾರಸ್ಸು ಮಾಡಿದ್ದರು. ಕರ್ತವ್ಯ ಲೋಪ ಎಸಗಿದ ಆರೋಪ ಹಿನ್ನೆಲೆಯಲ್ಲಿ ಪ್ರಶಾಂತ್​ನನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

    ಇತ್ತೀಚೆಗೆ ನಡೆದ ಶಿಕ್ಷಕರ ವರ್ಗಾವಣೆ ವೇಳೆ ವರ್ಗಾವಣೆಗೊಂಡ ಶಿಕ್ಷಕರಿಗೆ ಬಿಡುಗಡೆ ಪತ್ರ ನೀಡಲು ಪ್ರತಿ ಶಿಕ್ಷಕರಿಂದ ಸಾವಿರಾರು ರೂ.ಗಳನ್ನು ಇಲಾಖೆ ಅಧಿಕಾರಿಗಳು ಪಡೆದಿದ್ದಾರೆಂಬ ವಿಚಾರ ನೌಕರ ಪ್ರಶಾಂತ ಅಮಾನತುಗೊಂಡ ನಂತರ ಬಯಲಾಗಿದೆ.

    ಯಾವುದೇ ಕೆಲಸ ಆಗಬೇಕಾದರೆ ಹಣ ನೀಡಲೇಬೇಕು. ಶಾಲೆಗಳಿಗೆ ಭೇಟಿ ನೀಡಿದಾಗಲೊಮ್ಮೆ ಅಧಿಕಾರಿಗಳನ್ನು ಖುಷಿಪಡಿಸಬೇಕು. ಬಿಇಒ ಕಚೇರಿಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ಕೆಲ ಶಿಕ್ಷಕರು ಅಲವತ್ತುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts