

ಬೆಂಗಳೂರು: ನೇಣು ಬಿಗಿದುಕೊಂಡು ಮಹಿಳಾ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ಸಾವಿಗೆ ಶರಣಾಗಿರುವ ಘಟನೆ ನಗರದ ಜೋಗುಪಾಳ್ಯದಲ್ಲಿ ನಡೆದಿದೆ.
ದಿವ್ಯಾ (30) ಆತ್ಮಹತ್ಯೆಗೆ ಶರಣಾದ ಟೆಕ್ಕಿ. 2014 ರಲ್ಲಿ ಅರವಿಂದ್ ಎಂಬ ಟೆಕ್ಕಿಯನ್ನು ದಿವ್ಯಾ ವಿವಾಹವಾಗಿದ್ದಳು. ಮದುವೆಯ ನಂತರ ಹಲವು ವರ್ಷಗಳಿಂದ ಗಂಡನ ಮನೆಯವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ದಿವ್ಯಾ ಬಾಗಿಲು ಲಾಕ್ ಮಾಡಿಕೊಂಡಿದ್ದಾಳೆಂದು ಅತ್ತೆ ಮನೆಯವರಿಗೆ ಪತಿ ಅರವಿಂದ್ ಕರೆ ಮಾಡಿದ್ದ. ಬಳಿಕ ದಿವ್ಯಾ ಕುಟುಂಬಸ್ಥರು ಬಂದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕೋಣೆಯ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ.
ಆತ್ಮಹತ್ಯೆಗೆ ಪತಿ ಹಾಗೂ ಆತನ ಕುಟುಂಬಸ್ಥರು ಕಾರಣ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ದಿವ್ಯಾ ಪೊಷಕರು ಆರೋಪ ಮಾಡಿದ್ದಾರೆ. ಅಲ್ಲದೆ, ದೂರು ಸಹ ದಾಖಲಾಗಿದ್ದು, ಇದರ ಬೆನ್ನಲ್ಲೇ ಹಲಸೂರು ಪೊಲೀಸರು ಆರೋಪಿ ಅರವಿಂದ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್)