More

    ಚಲ್ಲಘಟ್ಟ-ವೈಟ್​ಫೀಲ್ಡ್​ ಮೆಟ್ರೋ ಫುಲ್​ ರಶ್​; 50 ಸಾವಿರಕ್ಕೂ ಅಧಿಕ ಮಂದಿ ಹೆಚ್ಚುವರಿ ಪ್ರಯಾಣ

    ಬೆಂಗಳೂರು: ನಮ್ಮ ಮೆಟ್ರೋ ವಿಸ್ತರಿತ ನೇರಳೆ ಮಾರ್ಗ ಚಲ್ಲಟ್ಟ&ವೈಟ್​ಫೀಲ್ಡ್​ (ಕಾಡುಗೋಡಿ) ಸಂಚಾರ ಆರಂಭವಾಗಿದ್ದು, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಇದು ಆ ಭಾಗದ ರಸ್ತೆಗಳಲ್ಲಿ ತುಸು ಸಂಚಾರದಟ್ಟಣೆ ಕಡಿಮೆ ಮಾಡುವ ನಿರೀಕ್ಷೆ ಹುಟ್ಟುಹಾಕಿದೆ.

    ಕೆಂಗೇರಿ-ಚಲ್ಲಘಟ್ಟ ಹಾಗೂ ಬೈಯಪ್ಪನಹಳ್ಳಿ-ಕೆ.ಆರ್​.ಪುರ ಮಾರ್ಗ ಆರಂಭವಾದ ಎರಡು ದಿನದಲ್ಲಿ (ಸೋಮವಾರ-ಮಂಗಳವಾರ) ಹೆಚ್ಚುವರಿಯಾಗಿ 50 ಸಾವಿರದಷ್ಟು ಮಂದಿ ಸಂಚರಿಸಿದ್ದಾರೆ. ಮಂಗಳವಾರ ಒಂದೇದಿನ (ಸಂಜೆ 7ರವರೆಗೆ) ಹಸಿರು ಹಾಗೂ ನೇರಳೆ ಮಾರ್ಗ ಸೇರಿ 6,80,894 ಮಂದಿ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈವರೆಗೆ ಮೆಟ್ರೋ ರೈಲು ನಗರದಲ್ಲಿ 69.96 ಕಿ.ಮೀ. ಮಾರ್ಗದಲ್ಲಿ ಸಂಚರಿಸುತ್ತಿತ್ತು. ಇದೀಗ ವೈಟ್​ಫೀಲ್ಡ್-ಕೆಂಗೇರಿ ನಡುವಿನ 43.49 ಕಿ.ಮೀ. ನೇರಳೆ ಮಾರ್ಗ ಸೇವೆಗೆ ಲಭ್ಯವಾಗುತ್ತಿದ್ದಂತೆ ಸಂಚಾರ ಜಾಲ 73.81 ಕಿ.ಮೀ.ಗೆ ವಿಸ್ತರಣೆಗೊಂಡಿದೆ.

    ಹೆಚ್ಚುವರಿ ರೈಲಿಗೆ ಬೇಡಿಕೆ

    ಪ್ರಸ್ತುತ ನೇರಳೆ ಮಾರ್ಗದಲ್ಲಿ ಪ್ರತಿನಿತ್ಯ 30 ರೈಲುಗಳು ಹಾಗೂ ಹಸಿರು ಮಾರ್ಗದಲ್ಲಿ 22 ರೈಲುಗಳು ಬೆಳಗ್ಗೆ 5ರಿಂದ ರಾತ್ರಿ 11ರವರೆಗೆ ಓಡಾಟ ನಡೆಸುತ್ತಿವೆ. ಇದೀಗ ವಿಸ್ತರಿತ ಮಾರ್ಗಗಳಲ್ಲಿ ಸಂಚಾರ ಆರಂಭವಾಗುತ್ತಿದ್ದಂತೆ, ಪ್ರಯಾಣಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ನೇರಳೆ ಮಾರ್ಗ ನಗರದ ಐಟಿ ಕಾರಿಡಾರ್​ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ತಂದಿದ್ದು, ಎರಡೂ ಮಾರ್ಗಗಳಲ್ಲಿ ಸಂಚರಿಸುತ್ತಿರುವ ಬಹುತೇಕ ರೈಲುಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಹೀಗಾಗಿ ರೈಲುಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಬಿಎಂಆರ್​ಸಿಎಲ್​ಗೆ ಮನವಿ ಮಾಡಿದ್ದಾರೆ.

    ಹಣ, ಸಮಯದ ಉಳಿತಾಯ

    ನೇರಳೆ ಮಾರ್ಗದಲ್ಲಿ ಸಂಪೂರ್ಣವಾಗಿ ಮೆಟ್ರೋ ಸಂಚರಿಸುತ್ತಿರುವುದನ್ನು ನಗರದ ಜನ ಸಂಭ್ರಮದಿಂದಲೇ ಸ್ವಾಗತಿಸಿದ್ದಾರೆ. ಜತೆಗೆ ಹಣ ಮತ್ತು ಸಮಯ ಉಳಿತಾಯವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಚಲ್ಲಟ್ಟದಿಂದ ವೈಟ್​ಫೀಲ್ಡ್​ವರೆಗೆ ಓಲಾ ಕ್ಯಾಬ್​ ಮಾಡಿ ಹೋಗುವುದಾದರೆ, 1,000 ರೂ. ಹಾಗೂ ಓಲಾ ಆಟೋದಲ್ಲಿ ಪ್ರಯಾಣಿಸುವುದಾದರೆ 600 ರೂ. ಬಾಡಿಗೆ ನೀಡಬೇಕು. ಅದೇ ಬಿಎಂಟಿಸಿ ಬಸ್​ನಲ್ಲಿ ತೆರಳುವುದಾದರೆ 70 ರೂ. ತಗಲುತ್ತದೆ. ಜತೆಗೆ ಒಂದೂವರೆ ತಾಸಿಗೂ ಅಧಿಕ ಸಮಯದ ಪ್ರಯಾಣ. ಮೆಟ್ರೋದಲ್ಲಿ 60 ರೂ. ಕೊಟ್ಟು 80 ನಿಮಿಷದಲ್ಲಿ ತಲುಪಲು ಸಾಧ್ಯವಾಗುತ್ತಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ. ಈ ಮೂಲಕ ನಮ್ಮ ಮೆಟ್ರೋ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ.

    ಮುಂದಿನ ದಿನಗಳಲ್ಲಿ ಮೆಟ್ರೋ ಬಳಕೆದಾರರ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಸ್ತುತ ನೇರಳೆ ಮಾರ್ಗದಲ್ಲಿ ರೈಲಿನ ಸಂಖ್ಯೆ ಹೆಚ್ಚಳದ ಬಗ್ಗೆ ಚಿಂತಿಸಿಲ್ಲ. ಹೊಸ ರೈಲುಗಳು ಆಗಮಿಸಿದ ಬಳಿಕ ಅಗತ್ಯಕ್ಕನುಗುಣವಾಗಿ ರೈಲಿನ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಮ್​ ಪರ್ವೇಜ್​ ತಿಳಿಸಿದ್ದಾರೆ.

    ಸಮಯ ಪರಿಷ್ಕರಿಸಿ

    ಬೆಳಗ್ಗೆ ಹಾಗೂ ಸಂಜೆ ಹೊತ್ತಿನ ಪೀಕ್​ ಅವರ್​ನಲ್ಲಿ ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್​)ದಿಂದ ಮಹಾತ್ಮ ಗಾಂಧಿ ರಸ್ತೆ ನಿಲ್ದಾಣದವರೆಗೆ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಉಂಟಾಗುತ್ತಿದೆ. ಈ ಬಗ್ಗೆ ಬಿಎಂಆರ್​ಸಿಎಲ್​ ಗಮನ ಹರಿಸಿ, ರೈಲು ಸಂಚಾರದ ಸಮಯವನ್ನು ಪರಿಷ್ಕರಿಸಿದರೆ ಸಹಕಾರಿಯಾಗುತ್ತದೆ ಎಂದು ಎಕ್ಸ್​ (ಟ್ವಿಟ್ಟರ್​) ಬಳಕೆದಾರರೊಬ್ಬರು ಹೇಳಿಕೊಂಡಿದ್ದಾರೆ.

    ಉದ್ಯೋಗನಿಮಿತ್ತ ಪ್ರತಿನಿತ್ಯ ಬೈಕ್​ನಲ್ಲಿ ವೈಟ್​ಫೀಲ್ಡ್​ಗೆ ತೆರಳುತ್ತಿದ್ದೆ. ಇನ್ನುಮುಂದೆ ಮೆಟ್ರೋ ಬಳಸಲು ನಿರ್ಧರಿಸಿದ್ದೇನೆ. ಇದರಿಂದ ಸಮಯ ಉಳಿತಾಯವಾಗುವುದರ ಜತೆಗೆ, ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ಐಟಿ ಉದ್ಯೋಗಿ ಕೆ.ಎಸ್​.ಸಂತೋಷ್​ ಪ್ರತಿಕ್ರಿಯಿಸಿದ್ದಾರೆ.

    ಮೆಜೆಸ್ಟಿಕ್​ನಲ್ಲಿ ಜನದಟ್ಟಣೆ

    ಹಸಿರು ಹಾಗೂ ನೇರಳೆ ಮಾರ್ಗದ ಪ್ರಯಾಣಿಕರಿಗೆ ಇಂಟರ್​ ಚೇಂಜ್​ ನಿಲ್ದಾಣವಾಗಿರುವ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಎರಡು ದಿನಗಳಿಂದ ಜನಜಂಗಳಿ ಕಂಡುಬರುತ್ತಿದೆ. ನೇರಳೆ ಮಾರ್ಗದಲ್ಲಿ ಸಂಪೂರ್ಣ ಸಂಚಾರ ಆರಂಭವಾಗಿರುವುದೂ ಇದಕ್ಕೆ ಕಾರಣ. ಕೆಲ ದಿನಗಳಿಂದ ಸಂಜೆಯಾಗುತ್ತಿದ್ದಂತೆ ಮಳೆಯಾಗುತ್ತಿದ್ದು, ಟ್ರಾಫಿಕ್​ ಜಾಮ್​ ಸಾಮಾನ್ಯ ಎಂಬಂತಾಗಿದೆ. ಇದನ್ನು ತಪ್ಪಿಸಲು ಜನರು ನಮ್ಮ ಮೆಟ್ರೋ ಮೊರೆ ಹೋಗುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts