More

    ಫೋಟೋ ತೆಗೆದು ದಂಡ ವಿಧಿಸುವುದಕ್ಕೂ ಬ್ರೇಕ್: ಸುಗಮ ಸಂಚಾರಕ್ಕಷ್ಟೇ ಪೊಲೀಸರ ಸೇವೆ ಸೀಮಿತ

    | ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

    ರಾಜಧಾನಿಯ ಪ್ರಮುಖ ರಸ್ತೆ, ಸಿಗ್ನಲ್​ನಲ್ಲಿ ಸಂಚಾರ ಪೊಲೀಸರು ತಮ್ಮ ಮೊಬೈಲ್​ನಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ದಂಡ ವಿಧಿಸುವುದಕ್ಕೆ ಬ್ರೇಕ್ ಬೀಳಲಿದೆ. ಕೇವಲ ಸುಗಮಸಂಚಾರಕ್ಕೆ ಟ್ರಾಫಿಕ್ ಪೊಲೀಸರು ಸೇವೆ ಸೀಮಿತಗೊಳಿಸಲು ಚಿಂತನೆ ನಡೆಯುತ್ತಿದೆ. ಇಂತಹದೊಂದು ಆದೇಶವನ್ನು ಹೊರಡಿಸಲು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಡಾ.ಎಂ.ಎ. ಸಲೀಂ ಚಿಂತನೆ ನಡೆಸುತ್ತಿದ್ದಾರೆ.

    ತಮ್ಮದಲ್ಲದ ತಪ್ಪಿಗೂ ಜನರು ಸಂಚಾರ ನಿಯಮ ಉಲ್ಲಂಘನೆ ಕೇಸ್​ನಲ್ಲಿ ಸಿಲುಕಿ ದಂಡ ಪಾವತಿ ಅಥವಾ ರದ್ದುಪಡಿಸಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಸಾರಿಗೆ ಇಲಾಖೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಾಕಿ ದಂಡದ ಮೇಲೆ ಶೇ.50 ರಿಯಾಯಿತಿ ನೀಡಿತ್ತು. ದಂಡ ಪಾವತಿಸಲು ಜನರು ತಮ್ಮ ವಾಹನಗಳ ಮೇಲಿನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪರಿಶೀಲನೆ ವೇಳೆ ಪೊಲೀಸರಿಂದ ತಪ್ಪುಗಳು ನಡೆದಿರುವುದು ಕಂಡುಬಂದಿದೆ.

    ಸಿಗ್ನಲ್ ಮತ್ತು ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ವಾಹನಗಳ ಪೋಟೋ ತೆಗೆದು ದಂಡ ವಿಧಿಸುವಾಗ ನಂಬರ್ ಪ್ಲೇಟ್ ಅಸ್ಪಷ್ಟವಾಗಿ ಕಂಡಾಯ ಸಿಕ್ಕ ಸಿಕ್ಕ ವಾಹನಗಳ ಮೇಲೆ ಕೇಸ್ ದಾಖಲಿಸಿದ್ದಾರೆ. ಇದರಿಂದ ತಪು್ಪ ಮಾಡದ ವಾಹನ ಸವಾರರ ಮೇಲೂ ಕೇಸ್ ದಾಖಲಿಸಿರುವುದು ಕಂಡುಬಂದಿದೆ. ಒಮ್ಮೆ ದಾಖಲಾದ ಪ್ರಕರಣಗಳನ್ನು ರದ್ದುಪಡಿಸಲು ಸಂಚಾರ ನಿರ್ವಹಣಾ ಕೇಂದ್ರಕ್ಕೆ (ಟಿಎಂಸಿ) ಜನರು ದೂರು ರದ್ದು ಪಡಿಸಿಕೊಳ್ಳಬೇಕಾಗುತ್ತಿದೆ.

    ತಪ್ಪಾಗಿ ದಾಖಲಾದ ಕೇಸ್​ಗಳನ್ನು ರದ್ದುಪಡಿಸು ವಂತೆ ಸಾವಿರಾರು ದೂರು ಬಂದಿವೆ. ಇದರಲ್ಲಿ ಸಂಚಾರ ಪೊಲೀಸರು ಮೊಬೈಲ್​ನಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಫೋಟೋ ತೆಗೆದು ಕೇಸ್ ದಾಖಲಿಸುವಾಗ ತಪ್ಪಾಗಿ ದಂಡ ವಿಧಿಸಿರುವುದು ಕಂಡುಬಂದಿದೆ. ಉಳಿದಂತೆ 57 ನಕಲಿ ನಂಬರ್ ಪ್ಲೇಟ್ ಪ್ರಕರಣಗಳು ದಾಖಲಾಗಿವೆ. ಇದನ್ನು ಸಂಚಾರ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

    ಸಿಸಿ ಕ್ಯಾಮರಾ ಸಂಖ್ಯೆ ಹೆಚ್ಚಿಸುವ ಮೂಲಕ ಟ್ರಾಫಿಕ್ ನಿಯಮ ಉಲ್ಲಂಘಿಸುವರ ವಿರುದ್ಧ ಸಂಪರ್ಕರಹಿತ ಕೇಸ್ ದಾಖಲಿಸಲಾಗುತ್ತದೆ. ಪೊಲೀಸರಿಗೆ ಮೊಬೈಲ್​ನಲ್ಲಿ ಫೋಟೋ ತೆಗೆದು ದಂಡ ವಿಧಿಸುವ ಕೆಲಸದಿಂದ ಮುಕ್ತಿ ನೀಡಲಾಗುತ್ತದೆ.

    | ಡಾ.ಎಂ.ಎ. ಸಲೀಂ, ವಿಶೇಷ ಪೊಲೀಸ್ ಆಯುಕ್ತ(ಸಂಚಾರ)

    * ಒಂದೇ ಸಮಯ, ಒಂದೇ ಉಲ್ಲಂಘನೆಗೆ 2-3 ಕೇಸ್
    * ಫೋಟೋದಲ್ಲಿ ನಂಬರ್ ಪ್ಲೇಟ್ ಕಾಣದೆ ಇದ್ದಾಗ ತಪ್ಪಾಗಿ ದಾಖಲು
    * ವಾಹನ ಮಾಡಲ್ ಬೇರೆಬೇರೆ ಆಗಿದ್ದರೂ ಟ್ರಾಫಿಕ್ ಫೈನ್
    * ನಕಲಿ ನಂಬರ್ ಪ್ಲೇಟ್​ನಿಂದಲೂ ಅಸಲಿ ವಾರಸುದಾರನಿಗೆ ದಂಡ

    ಮತ್ತಷ್ಟು ಕಡೆ ಸಿಸಿ ಕ್ಯಾಮರಾ
    ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಒಳಗೊಂಡ 250 ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್​ಪಿಆರ್) ಕ್ಯಾಮರಾಗಳು ಮತ್ತು 100 ರೆಡ್​ಲೈಟ್ ವಯೋಲೇಷನ್ ಡಿಟೆಕ್ಷನ್ (ಆರ್​ಎಲ್​ವಿಡಿ) ಕ್ಯಾಮರಾಗಳನ್ನು ನಗರದ ಪ್ರಮುಖ 50 ಜಂಕ್ಷನ್​ಗಳಲ್ಲಿ ಅಳವಡಿಸಿದ್ದಾರೆ. ವೇಗ ಮಿತಿ, ಕೆಂಪು ದೀಪ, ಸ್ಟಾಪ್​ಲೇನ್, ಹೆಲ್ಮೆಟ್​ರಹಿತ, ತ್ರಿಬಲ್ ರೈಡಿಂಗ್, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ, ಅರ್ಧ ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಉಲ್ಲಂಘನೆಗಳನ್ನು ಸ್ವಯಂ ಚಾಲಿತವಾಗಿ ಗುರುತಿಸಲಿವೆ. ವಾಹನದ ನಂಬರ್ ಪ್ಲೇಟ್ ಗುರುತಿಸಿ ವಾರಸುದಾರರ ಮನೆ ವಿಳಾಸಕ್ಕೆ ಇ-ಚಲನ್ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ದಿನಕ್ಕೆ 30 ಸಾವಿರದಂತೆ ವರ್ಷಕ್ಕೆ 1 ಕೋಟಿಯಷ್ಟು ಕೇಸ್ ದಾಖಲಾಗುತ್ತಿವೆ. ಕ್ಯಾಮರಾ ಕಣ್ಣಿಗೆ ವಾಹನಗಳ ನಂಬರ್ ಪ್ಲೇಟ್ ಮತ್ತು ನಿಯಮ ಉಲ್ಲಂಘನೆ ಶೇ.99.99 ನಿಖರವಾಗಿ ಕಂಡರೆ ಮಾತ್ರ ಕೇಸ್ ದಾಖಲಿಸುತ್ತಿದೆ. ಇದರ ಬಗ್ಗೆ ಜನರಿಗೂ ಜಾಗೃತಿ ಮೂಡುತ್ತಿದೆ. ಇದೇ ರೀತಿ ನಗರದಲ್ಲಿ ಮತ್ತಷ್ಟು ಕಡೆಗಳಲ್ಲಿ ಸಿಸಿ ಕ್ಯಾಮರಾಗಳ ಅಳವಡಿಕೆ ಮಾಡಲಾಗುತ್ತದೆ. ಇದಾದ ಮೇಲೆ ನಿಧಾನವಾಗಿ ಮೊಬೈಲ್​ನಲ್ಲಿ ಫೋಟೋ ತೆಗೆದು ಸಂಚಾರ ಪೊಲೀಸರು ದಂಡ ವಿಧಿಸುವುದನ್ನು ನಿಲ್ಲಿಸಲಾಗುತ್ತದೆ. ಆಗ ತಪ್ಪಾಗಿ ವಾಹನಗಳ ಮೇಲೆ ಕೇಸ್ ದಾಖಲಾಗುವುದು ನಿಲ್ಲಲಿದೆ ಎಂದು ‘ವಿಜಯವಾಣಿ’ಗೆ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.

    ಕುರ್ಚಿ ಆಸೆ ಇನ್ನೂ ಬಂದಿಲ್ಲ; ಪ್ರಧಾನಿ ಮೋದಿ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ!

    ಶಾರುಖ್​ ಮ್ಯಾನೇಜರ್​ ಪೂಜಾರ ಒಟ್ಟು ಆಸ್ತಿ ಮೌಲ್ಯ, ವಾರ್ಷಿಕ ಸಂಬಳ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ!

    ಪತ್ನಿಯಿಂದ ರಹಸ್ಯ ಮುಚ್ಚಿಟ್ಟ ಪತಿಗೆ ಕಾದಿತ್ತು ಬಿಗ್​ ಶಾಕ್​! ಭಾರೀ ಸಂಚಲನ ಮೂಡಿಸಿದ ಕೋರ್ಟ್​ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts