More

    ಕಳ್ಳೇರಿ ಗ್ರಾಪಂ ಕಚೇರಿ ಮುಂದೆ ಸಾರ್ವಜನಿಕರ ಪ್ರತಿಭಟನೆ

    ಬೇಲೂರು: ಸಾರ್ವಜನಿಕರ ಉಪಯೋಗಕ್ಕೆಂದು ಕೊರೆಯಿಸಿದ್ದ ಕೊಳವೆ ಬಾವಿಯನ್ನು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿರುವ ಖಾಸಗಿ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಸಾರ್ವಜನಿಕರ ಉಪಯೋಗಕ್ಕೆ ಬಳಸುವಂತೆ ಒತ್ತಾಯಿಸಿ ಮಂಗಳವಾರ ಕಳ್ಳೇರಿ ಗ್ರಾಪಂ ಕಚೇರಿ ಮುಂದೆ ಸಾರ್ವಜನಿಕರು ಪ್ರತಿಭಟಿಸಿದರು.


    ಗ್ರಾಪಂ ಮಾಜಿ ಅಧ್ಯಕ್ಷ ಸುರೇಶ್ ಮಾತನಾಡಿ, ಸಾರ್ವಜನಿಕರಿಗೆ ಕುಡಿಯುವ ನೀರೊದಗಿಸುವ ಉದ್ದೇಶದಿಂದ 2004ರಲ್ಲಿ ಗ್ರಾಪಂನಿಂದ ಸರ್ವೇ ನಂ.3ರಲ್ಲಿ ಕೊಳವೆ ಬಾವಿ ಕೊರೆಯಿಸಿ ಹಣ ಪಾವತಿಸಲಾಗಿದೆ. ಅಲ್ಲದೆ ಶಾಸಕರ ಬರ ಪರಿಹಾರ ನಿಧಿಯಿಂದಲೂ ಪೈಪ್‌ಲೈನ್ ಕಾಮಗಾರಿ ಮಾಡಲಾಗಿದೆ. ಆದರೆ ಕೊಳವೆ ಬಾವಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿ ವಶಕ್ಕೆ ಪಡೆದು ಸ್ವಂತಕ್ಕೆ ಬಳಸುತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಅನನುಕೂಲವಾಗಿರುವುದರಿಂದ ಕೊಳವೆ ಬಾವಿ ಬಿಟ್ಟು ಕೊಡುವಂತೆ ಹಲವಾರು ಬಾರಿ ಕೇಳಿದರೂ ಜಿಪಂ, ತಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.


    ಜೆಡಿಎಸ್ ಮುಖಂಡ ಮಹೇಶ್ ಮಾತನಾಡಿ, 16 ವರ್ಷಗಳಿಂದ ಸಾರ್ವಜನಿಕ ಕೊಳವೆ ಬಾವಿಯನ್ನು ಅಕ್ರಮವಾಗಿ ವಶಕ್ಕೆ ಪಡೆದಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಗ್ರಾಪಂ ಸಭೆಯಲ್ಲೂ ನಿರ್ಣಯ ಕೈಗೊಂಡಿದ್ದರಿಂದ ಜಿಪಂನಿಂದ ತೆರವುಗೊಳಿಸುವಂತೆ ತಿಳಿಸಲಾಗಿದೆ. ಆದರೂ ಅಧಿಕಾರಿಗಳು ಖಾಸಗಿ ವ್ಯಕ್ತಿಯಿಂದ ಕೊಳವೆ ಬಾವಿಯನ್ನು ಗ್ರಾಪಂ ವಶಕ್ಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಕಂಡುಬರುತಿದ್ದು, ತಕ್ಷಣವೆ ಗ್ರಾಪಂ ವಶಕ್ಕೆ ಕೊಳವೆ ಬಾವಿಯನ್ನು ಪಡೆಯದಿದ್ದಲ್ಲಿ ಜಿಪಂ ಹಾಗೂ ತಾಪಂ ಕಚೇರಿ ಮುಂದೆ ಗ್ರಾಮಸ್ಥರೊಂದಿಗೆ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.


    ಪ್ರತಿಭಟನೆಯಲ್ಲಿ ಕಳ್ಳೇರಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್, ಗೆಂಡೇಹಳ್ಳಿ ಹಾಗೂ ಕಳ್ಳೇರಿ ಗ್ರಾಮಸ್ಥರಾದ ಸಂಪತ್, ಸಂತೋಷ್, ನಂದಕುಮಾರ್, ಸಂದೀಪ್, ಚಂದ್ರೇಗೌಡ, ಸಿಖಂದರ್ ಮತ್ತಿತರರಿದ್ದರು.

    ಚಿತ್ರ:2(ಬಿಎಲ್‌ಆರ್)2-ಕೊಳವೆ ಬಾವಿಯನ್ನು ಅಕ್ರಮವಾಗಿ ಸ್ವಾದೀನಪಡಿಸಿಕೊಂಡಿರುವ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಂಡು ಗ್ರಾಪಂ ವಶಕ್ಕೆ ಕೊಳವೆ ಬಾವಿ ಪಡೆಯುವಂತೆ ಒತ್ತಾಯಿಸಿ ಪ್ರತಿಭಟಿಸುತ್ತಿರುವ ಗೆಂಡೇಹಳ್ಳಿ ಹಾಗೂ ಕಳ್ಳೇರಿ ಗ್ರಾಮಸ್ಥರು.

    ಅಕ್ರಮವಾಗಿ ಕೊಳವೆ ಬಾವಿ ಸ್ವಾದೀನಪಡಿಸಿಕೊಂಡಿರುವ ವ್ಯಕ್ತಿಗೆ ಎರಡು ನೊಟೀಸ್ ನೀಡಲಾಗಿತ್ತು. ಅವರು ಗ್ರಾಪಂ ವಿರುದ್ಧವೇ ಮೊಕದ್ದಮೆ ದಾಖಲಿಸಿದ್ದರು. ಅದು ವಜಾಗೊಂಡ ನಂತರ 3 ಸಭೆಯಲ್ಲಿ ಚರ್ಚಿಸಿ ಕೊಳವೆ ಬಾವಿ ಗ್ರಾಪಂ ವಶಕ್ಕೆ ನೀಡುವಂತೆ ನೋಟಿಸ್ ನೀಡಲಾಗಿದೆ. ಅವರಿಂದ ಸರಿಯಾದ ಸ್ಪಂದನೆ ಬಂದಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು.
    ಕುಮಾರ್, ಗ್ರಾಪಂ ಅಭಿವೃದ್ಧಿ ಅಧಿಕಾರಿ, ಕಳ್ಳೇರಿ, ಬೇಲೂರು ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts