More

    ಬೇಳೂರು-ಮಧು ಕೋಲ್ಡ್‌ವಾರ್!

    ಶಿವಮೊಗ್ಗ: ನಿಗಮ-ಮಂಡಳಿ ಅಧಿಕಾರ ಹಂಚಿಕೆ, ಸಚಿವ ಸ್ಥಾನದ ಬಗ್ಗೆ ರಾಜ್ಯ ಕಾಂಗ್ರೆಸ್‌ನಲ್ಲಿ ಪದೇಪದೆ ಭಿನ್ನರಾಗ ಕೇಳಿಬರುತ್ತಿದೆ. ಇದೀಗ ಅದು ಶಿವಮೊಗ್ಗಕ್ಕೂ ವಿಸ್ತರಣೆಯಾಗಿದೆ. ಶಾಸಕ ಬೇಳೂರು ಗೋಪಾಲಕೃಷ್ಣ ಬಹಿರಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ಕೆಂಪು ಬಾವುಟ ಹಾರಿಸಿದ್ದಾರೆ.

    ಸರ್ಕಾರ ರಚನೆಯಾಗಿ ಎರಡ್ಮೂರು ತಿಂಗಳು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಗೋಪಾಲಕೃಷ್ಣ ನಿರಂತರವಾಗಿ ಕಾಣಿಸಿಕೊಂಡಿದ್ದರು. ಆದರೆ ಐದನೇ ತಿಂಗಳಿಗೆ ಇಬ್ಬರ ನಡುವಿನ ಸಂಬಂಧ ಹಳಸಿದೆ. ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಮಕ್ಕಳಿಗೆ ಸಚಿವ ಸ್ಥಾನ, ಚುನಾವಣೆಗೆ ಟಿಕೆಟ್ ನೀಡಲಾಗುತ್ತಿದೆ ಎಂದು ಮಧು ಬಂಗಾರಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಉತ್ಸುಕನಾಗಿದ್ದೇನೆ ಎನ್ನುವ ಮೂಲಕ ಬಂಗಾರಪ್ಪ ಕುಟುಂಬಕ್ಕೆ ನೇರವಾಗಿ ಶಾಕ್ ನೀಡಿದ್ದಾರೆ.
    ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಧು ಬಂಗಾರಪ್ಪ ಸಹೋದರಿ ಗೀತಾ ಹಾಗೂ ಅವರ ಪತಿ, ನಟ ಶಿವರಾಜ್‌ಕುಮಾರ್ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದರು. ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಶಿವರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು, ಮಧು ಬಂಗಾರಪ್ಪ ಸಹಜವಾಗಿಯೇ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಕಾರಣವಾಯಿತು.
    ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸಹೋದರಿ ಗೀತಾಗೆ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಕೊಡಿಸುವಲ್ಲಿ ಮಧು ಪರೋಕ್ಷ ಪ್ರಯತ್ನ ನಡೆಸುತ್ತಿರುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಇದು ಸಹಜವಾಗಿಯೇ ಜಿಲ್ಲಾ ಕಾಂಗ್ರೆಸ್‌ನಲ್ಲಿ ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಇದರ ಮೊದಲ ಭಾಗವಾಗಿ ಬೇಳೂರು ಆಕ್ರೋಶ ಹೊರಬಿದ್ದಿದೆ.
    ಮೂರು ಬಾರಿ ಶಾಸಕರಾಗಿ, ಐದು ವರ್ಷ ಮೊದಲೇ ಕಾಂಗ್ರೆಸ್ ಸೇರಿ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದಾಗಲೂ ಸಂಘಟನೆಯಲ್ಲಿ ತೊಡಗಿದ್ದ ನನಗೆ, ನನಗಿಂತ ತಡವಾಗಿ ಪಕ್ಷಕ್ಕೆ ಬಂದು ಉನ್ನತ ಸ್ಥಾನ ಅಲಂಕರಿಸುವ ಜತೆಗೆ ಜಿಲ್ಲಾ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಮಧು ಮುಂದಾಗಿದ್ದಾರೆ ಎಂಬುದು ಬೇಳೂರು ಅಸಮಾಧಾನಕ್ಕೆ ಮತ್ತೊಂದು ಕಾರಣ.
    ವಾಸ್ತವದಲ್ಲಿ ಸಚಿವ ಸಂಪುಟ ರಚನೆ ಸಂದರ್ಭದಲ್ಲೇ ಶಿವಮೊಗ್ಗ ಜಿಲ್ಲೆಯಿಂದ ಬಿ.ಕೆ.ಸಂಗಮೇಶ್ವರ್ ಇಲ್ಲವೇ ತನಗೆ ಸಚಿವ ಸ್ಥಾನ ನೀಡಬೇಕೆಂದು ಬೇಳೂರು ಗೋಪಾಲಕೃಷ್ಣ ಕೆಪಿಸಿಸಿ ಹಂತದಲ್ಲಿ ಪ್ರಯತ್ನಿಸಿದ್ದರು. ಆದರೆ ಮಧು ಪ್ರಭಾವದ ಮುಂದೆ ಅದು ಫಲಿಸಲಿಲ್ಲ.
    ಆದರೂ ಹೇಗೋ ಹೊಂದಾಣಿಕೆ ಮಾಡಿಕೊಂಡು ಬೇಳೂರು ಸಾಗುತ್ತಿದ್ದರು. ಆದರೆ ಸರ್ಕಾರ ಬಂದ ಕೆಲವೇ ತಿಂಗಳಲ್ಲಿ ನನ್ನನ್ನು ಮೂಲೆಗುಂಪು ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಮಧು ಕೂಡ ಕಾರಣ. ಲೋಕಸಭೆ ಟಿಕೆಟ್ ಅವರ ಕುಟುಂಬದವರಿಗೇ ಸಿಕ್ಕರೆ ನಾನು ಈಡಿಗ ನಾಯಕನಾಗಿ ಹೊರಹೊಮ್ಮಲು ಸಾಧ್ಯವಿಲ್ಲ ಎಂಬ ವಾಸ್ತವ ಸಂಗತಿ ಗೋಪಾಲಕೃಷ್ಣ ಅರಿವಿಗೆ ಬರುತ್ತಿದ್ದಂತೆಯೇ ಅವರು ಬಹಿರಂಗವಾಗಿ ಗುಡುಗಿದ್ದಾರೆ. ಜಿಲ್ಲೆಯ ರಾಜಕೀಯದಲ್ಲಿ ಮುಂದೆ ಇನ್ನಷ್ಟು ರೋಚಕತೆ ನಿಶ್ಚಿತ.
    ಕೆಪಿಸಿಸಿಯಲ್ಲಿ ಕಡೆಗಣನೆ: ಇತ್ತೀಚೆಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷರೇ ಭಾಗವಹಿಸಿದ್ದ ಆ ಕಾರ್ಯಕ್ರಮಕ್ಕೆ ಬೇಳೂರು ಅವರಿಗೆ ಆಹ್ವಾನ ನೀಡಲಿಲ್ಲ. ಆದರೆ ಗೀತಾ ಶಿವರಾಜ್‌ಕುಮಾರ್ ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಮಧು ಬಂಗಾರಪ್ಪ ಕೂಡ ಇದ್ದರು. ಹೀಗೆ ಕೆಪಿಸಿಸಿ ಹಂತದಲ್ಲೇ ನನ್ನನ್ನು ಕಡೆಗಣಿಸಲು ಮಧು ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಬೇಳೂರು ಅಸಮಾಧಾನಕ್ಕೆ ಮತ್ತೊಂದು ಕಾರಣವಾಗಿದೆ.
    ಈಡಿಗ ನಾಯಕತ್ವಕ್ಕೆ ಪೈಪೋಟಿ: ಹಲವು ದಶಕಗಳ ಕಾಲ ಈಡಿಗ ಸಮಾಜದ ನಾಯಕತ್ವಕ್ಕಾಗಿ ಬಂಗಾರಪ್ಪ ಹಾಗೂ ಕಾಗೋಡು ತಿಮಪ್ಪ ನಡುವೆ ಪೈಪೋಟಿ ನಡೆದಿತ್ತು. ಅವರಿಬ್ಬರ ನಡುವಿನ ಶೀತಲ ಸಮರಕ್ಕೆ ಜಿಲ್ಲಾ ರಾಜಕಾರಣ ಸಾಕ್ಷಿಯಾಗಿತ್ತು. ಇದೀಗ ಬಂಗಾರಪ್ಪ ಪುತ್ರ ಮಧು ಹಾಗೂ ಬಂಗಾರಪ್ಪ ಶಿಷ್ಯ ಬೇಳೂರು ನಡುವೆ ಪೈಪೋಟಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಗೀತಾ ಶಿವರಾಜ್‌ಕುಮಾರ್ ಜಿಲ್ಲಾ ರಾಜಕೀಯಕ್ಕೆ ಮತ್ತೆ ಎಂಟ್ರಿ ಪಡೆದರೆ ಈಡಿಗ ಸಮಾಜದ ಮೇಲೆ ಮಧು ಸಂಪೂರ್ಣ ಹಿಡಿತ ಸಾಧಿಸಬಹುದು ಎಂಬ ದೂರಾಲೋಚನೆಯಿಂದ ಬೇಳೂರು ಸಣ್ಣದೊಂದು ಬಂಡಾಯದ ಕಿಡಿ ಹತ್ತಿಸಿದ್ದಾರೆ.
    ಬೇಳೂರು ಬಂಡಾಯ ಮೊದಲೇನಲ್ಲ:
    ಹಾಗೆ ನೋಡಿದರೆ ಬೇಳೂರು ಗೋಪಾಲಕೃಷ್ಣ ವರ್ಣರಂಜಿತ ರಾಜಕಾರಣಿ. ತಮ್ಮ ಅಸಮಾಧಾನಕ್ಕೆ ಬಂಡಾಯದ ರೂಪ ಕೊಡುವಲ್ಲಿ ಬೇಳೂರು ಎಂದೂ ಹಿಂದೆ ಬಿದ್ದವರಲ್ಲ. ಬಿಜೆಪಿ ಶಾಸಕರಾಗಿದ್ದಾಗಲೇ ವಿಧಾನಸೌಧಕ್ಕೆ ಸಮಾಜವಾದಿ ಪಕ್ಷದ ಟೋಪಿ ಧರಿಸಿ, ಆ ಪಕ್ಷದ ಸಂಕೇತ ಸೈಕಲ್ ಏರಿ ಬಂದಿದ್ದರು. ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ವಿರುದ್ಧ ಸಿಡಿದೆದ್ದು ಬಹಿರಂಗವಾಗಿ ಸಮರ ಸಾರಿದ್ದರು. ಈಗ ಕಾಂಗ್ರೆಸ್‌ನಲ್ಲಿ ಬೇಳೂರು ಬಂಡಾಯ ಆರಂಭವಾದಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts