More

    ಬೆಳ್ಳಾಯರು-ಉತ್ರಂಜೆಗಿಲ್ಲ ಸಂಪರ್ಕ ರಸ್ತೆ, ರೈಲ್ವೆ ಇಲಾಖೆ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ

    ಮೂಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಾಯರು-ಉತ್ರಂಜೆ ನಿವಾಸಿಗಳು ಹಲವಾರು ವರ್ಷಗಳಿಂದ ಸಂಪರ್ಕ ರಸ್ತೆಗೆ ಮನವಿ ಸಲ್ಲಿಸಿದ್ದು, ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜನರಿಗೆ ಸಮಸ್ಯೆಯಾಗಿದೆ.

    ಬೆಳ್ಳಾಯರು ಉತ್ರಂಜೆ ಪರಿಸರ ಕೃಷಿ ಪ್ರದೇಶವಾಗಿದ್ದು, ಕೊಂಕಣ ರೈಲ್ವೆ ಹಾದು ಹೋದ ಬಳಿಕ ಸೂಕ್ತ ರಸ್ತೆ ಇಲ್ಲದೆ ರಸ್ತೆ ಕಡಿತಗೊಂಡು ಕೃಷಿ ಅತಂತ್ರವಾಗಿರುವುದು ಮಾತ್ರವಲ್ಲದೆ ಹಳಿ ದಾಟಿ ಸಾಗಬೇಕಿದೆ. ರಸ್ತೆ ಸಂಪರ್ಕ ಇಲ್ಲದ ಕಾರಣ ವಾಹನಗಳು ಹಳಿ ದಾಟಲಾಗದೆ ವಯೋವೃದ್ಧರಿಗೆ ಹಾಗೂ ಕೃಷಿ ಸಾಮಗ್ರಿ, ಉತ್ಪನ್ನಗಳನ್ನು ಸಾಗಿಸಲು ಸಮಸ್ಯೆಯಾಗಿದೆ. ಇಲ್ಲಿನ ಜನತೆ ಈ ಪರಿಸ್ಥಿತಿ ಎದುರಿಸಲಾಗದೆ ಬೇರೆ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದು, ಉತ್ತಮ ಕೃಷಿ ಭೂಮಿ ಈಗ ಹಡಿಲು ಬಿಡುವ ಪರಿಸ್ಥಿತಿ ಬಂದಿದೆ.

    ರೈಲ್ವೆ ಹಳಿ ಮೇಲೆ ಸಂಚಾರ: ಈ ಪರಿಸರದಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಕೃಷಿ ಮಾಡಿಕೊಂಡಿದ್ದ ಹಿರಿಯ ಪ್ರಗತಿಪರ ಕೃಷಿಕ ಭುಜಂಗ ಶೆಟ್ಟಿ ಸಹಿತ ಅನೇಕ ಗ್ರಾಮಸ್ಥರ ಮನೆಗಳಿಗೆ ಕೊಂಕಣ ರೈಲ್ವೆ ಹಳಿಗಳನ್ನು ದಾಟಿ ನಡೆದುಕೊಂಡೇ ಹೋಗಬೇಕಾಗಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಪಡುಪಣಂಬೂರು ಕಲ್ಲಾಪು ಪ್ರದೇಶದಿಂದ ಮೂಲ್ಕಿ ರೈಲ್ವೆ ನಿಲ್ದಾಣಕ್ಕೆ ಹೋಗುವವರಿಗೆ, ಶಾಲಾ ಮಕ್ಕಳಿಗೆ ಸೂಕ್ತ ರಸ್ತೆ ವ್ಯವಸ್ಥೆಯಿಲ್ಲದೆ ರೈಲ್ವೆ ಹಳಿಯ ಮೇಲೆ ನಡೆದುಕೊಂಡು ಹೋಗುವ ಪರಿಸ್ಥಿತಿ ಇದೆ. ಈ ಬಗ್ಗೆ ಸಂಸದರು, ಶಾಸಕರು, ಸ್ಥಳೀಯಾಡಳಿತಕ್ಕೆ ಮನವಿ ಸಲ್ಲಿಸಿದ್ದು, ಕೂಡಲೇ ಸ್ಪಂದಿಸಬೇಕಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಕಲ್ಲಾಪು ರೈಲ್ವೆ ಕ್ರಾಸಿಂಗ್ ಬಳಿಯಿಂದ ಎಡಬದಿಯಲ್ಲಿ ಸೂಕ್ತ ಸರ್ವೀಸ್ ರಸ್ತೆ ಅಥವಾ ಉತ್ರಂಜೆ ಬಳಿ ಕೊಂಕಣ ರೈಲ್ವೆ ಹಳಿಗೆ ಅಂಡರ್‌ಪಾಸ್ ನಿರ್ಮಾಣದ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವಿದ್ದು, ಜನಪ್ರತಿನಿಧಿಗಳು ಗಮನ ಹರಿಸಬೇಕು.

    ಭುಜಂಗ ಶೆಟ್ಟಿ, ಹಿರಿಯ ಕೃಷಿಕ, ಉತ್ರಂಜೆ

    ಗ್ರಾಮೀಣ ಪ್ರದೇಶದಲ್ಲಿ ರೈಲ್ವೆ ಇಲಾಖೆಯ ಸಮಸ್ಯೆಗಳು ಹಲವಿದ್ದು, ಶೀಘ್ರ ನಿವಾರಣೆಗೆ ಪ್ರಯತ್ನಗಳು ನಡೆಯುತ್ತಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಸ್ಯೆ ನಿವಾರಣೆಗೆ ಪ್ರಯತ್ನ ಮಾಡಲಾಗುವುದು.

    ಉಮಾನಾಥ ಕೋಟ್ಯಾನ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts