More

    ತಂಬಾಕಿನಿಂದ ದೇಹದ ಪ್ರತಿ ಅಂಗಕ್ಕೂ ದುಷ್ಪರಿಣಾಮ; ಡಿಎಚ್‌ಒ ಡಾ.ಜನಾರ್ದನ್ ಹೇಳಿಕೆ

    ಬಳ್ಳಾರಿಯಲ್ಲಿ ಜನಜಾಗೃತಿ ಅಭಿಯಾನ

    ಬಳ್ಳಾರಿ: ತಂಬಾಕು ಅಥವಾ ನಿಕೋಟಿನ್ ಬಳಕೆ ದೇಹದ ಪ್ರತಿ ಅಂಗದ ಮೇಲೂ ಪರಿಣಾಮ ಬೀರುತ್ತದೆ ಎಂದು ಡಿಎಚ್‌ಒ ಡಾ. ಜನಾರ್ದನ್ ಹೇಳಿದರು.

    ಜಿಲ್ಲಾ ಆಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ತಂಬಾಕು ನಿಯಂತ್ರಣ ಕೋಶದಿಂದ ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಜನಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

    ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿ ಇತ್ಯಾದಿ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಸಿಗರೇಟ್, ಬೀಡಿ ಇತ್ಯಾದಿ ವಸ್ತುಗಳಲ್ಲಿ 7000 ರಾಸಾಯನಿಕ ಮಿಶ್ರಣವಿದ್ದು, ಶೇ.69ರಷ್ಟು ಕ್ಯಾನ್ಸರ್‌ಕಾರಕ ವಸ್ತುಗಳಿರುತ್ತವೆ. ಧೂಮರಹಿತ (ಜಿಗಿಯುವ ತಂಬಾಕು) ಉತ್ಪನ್ನಗಳಲ್ಲಿ 3095 ರಾಸಾಯನಿಕಗಳಿದ್ದು, ಶೇ.28ರಷ್ಟು ಕ್ಯಾನ್ಸರ್‌ಕಾರಕ ವಸ್ತುಗಳಿವೆ ಎಂದು ತಿಳಿಸಿದರು.

    ಧೂಮಪಾನಿಗಳ ಆಯುಷ್ಯವು ಧೂಮಪಾನ ರಹಿತರಿಗಿಂತ 15 ವರ್ಷ ಕಡಿಮೆಯಾಗುತ್ತೆ ಎಂದು ಅಂದಾಜಿಸಲಾಗಿದೆ. ಬೀಡಿ, ನಶ್ಯ ಇತರ ಹೊಗೆ ರಹಿತ ತಂಬಾಕು ಪದಾರ್ಥಗಳು ಸಿಗರೇಟಿಗಿಂತ ಸುರಕ್ಷಿತ ಎಂಬ ನಂಬಿಕಿಯಿದೆ. ಆದರಿದು ಸತ್ಯವಲ್ಲ. ಇವುಗಳನ್ನು ಸೇವಿಸುವ ವ್ಯಕ್ತಿ ಮಾತ್ರವಲ್ಲದೆ ಆತನ ಸುತ್ತಲಿರುವವರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತವೆ ಎಂದರು.

    ನಗರದ ಪ್ರಮುಖ ರಸ್ತೆಗಳಲ್ಲಿ ಧ್ವನಿವರ್ಧಕದ ಮೂಲಕ ತಂಬಾಕಿನಿಂದಾಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು.

    ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ದುರುಗೇಶ ಮಾಚನೂರು, ಜಿಲ್ಲಾ ಕಾರ್ಯಕ್ರಮ ಸಂಯೋಜಕರಾದ ಡಾ. ಜಬೀನ್ ತಾಜ್, ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಂಯೋಜಕ ಗುರುರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ತಂಬಾಕು ವ್ಯಸನ ಮುಕ್ತ ಕೇಂದ್ರದ ಮಲ್ಲೇಶಪ್ಪ, ಡಾ. ಗುರುಪ್ರಸಾದ್ ಪುರೋಹಿತ್, ಶರತ್ ಬಾಬು ಹಾಗೂ ಜಿಲ್ಲಾ ಸರ್ವೇಕ್ಷಣಾ ಘಟಕ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts