More

    ವಿಜಯ ಸಂಕಲ್ಪ ಅಭಿಯಾನ 21ರಿಂದ- ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಹೇಳಿಕೆ

    ಬಳ್ಳಾರಿ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಬೂತ್‌ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಲು ವಿಜಯ ಸಂಕಲ್ಪ ಅಭಿಯಾನವನ್ನು ಜ.21ರಿಂದ 29ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗೋನಾಳ್ ಮುರಹರಗೌಡ ಹೇಳಿದರು.

    ಇದೊಂದು ಸರ್ವಸ್ವರ್ಶಿ ಕಾರ್ಯಕ್ರಮವಾಗಿದ್ದು ಬಿಜೆಪಿಯನ್ನು ಗೆಲುವಿನ ಉತ್ತುಂಗಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಲಿದೆ. 2 ಕೋಟಿ ಮತದಾರರನ್ನು ಈ ವಿಜಯ ಸಂಕಲ್ಪ ಅಭಿಯಾನದ ಮೂಲಕ ನಮ್ಮ ಕಾರ್ಯಕರ್ತರು ತಲುಪುತ್ತಾರೆ. 10 ವಿಭಾಗಗಳಲ್ಲಿ, 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ, 312 ಮಂಡಲಗಳಲ್ಲಿ ಕಾರ್ಯಕರ್ತರು ಬಿಜೆಪಿ ಸಾಧನೆಯನ್ನು ಮನೆಮನೆಗೆ ತಲುಪಿಸಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳ ಕುರಿತು ಕರಪತ್ರಗಳನ್ನು ಹಂಚಿಕೆ ಮಾಡಲಾಗುವುದು. 2 ಕೋಟಿಗಿಂತ ಹೆಚ್ಚು ಮತದಾರರ ಸಂಪರ್ಕ ಮಾಡಿ, ಅವರ ಮನೆಮನೆಗೆ ತೆರಳಿ ಕರಪತ್ರ ಹಂಚಲಿದ್ದೇವೆ. ಫಲಾನುಭವಿಗಳನ್ನು ಮಾತನಾಡಿಸಿ ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಲಿದ್ದೇವೆ ಎಂದರು.

    ಜ.21ರಿಂದ ಅಭಿಯಾನ ಆರಂಭ ಆಗಲಿದ್ದು, ಅದಕ್ಕಾಗಿ ಈಗಾಗಲೇ ವ್ಯವಸ್ಥಿತವಾಗಿ ಪೂರ್ವಭಾವಿ ಸಿದ್ಧತೆ ನಡೆದಿವೆ. ಜಿಲ್ಲಾ ಮತ್ತು ಮಂಡಲಗಳಲ್ಲಿ ಸಭೆಗಳು ನಡೆಸಿ ಭಾರತೀಯ ಜನತಾ ಪಕ್ಷ ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯವ ಗುರಿ ಹಾಕಿಕೊಂಡಿದೆ. ಅದಕ್ಕಾಗಿ ಪಕ್ಷವು ತಳಹಂತದಿಂದ ಪಕ್ಷದ ಸದೃಢೀಕರಣ ಸೇರಿ ವಿವಿಧ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಸರ್ಕಾರದ ಸಾಧನೆ ಹಾಗೂ ಜನ ಕಲ್ಯಾಣದೆಡೆಗೆ ಬಿಜೆಪಿಯ ಬದ್ಧತೆ ಸಾರಲು ಪ್ರತಿ ಬೂತ್‌ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆ ಸಾರುವ ಮತ್ತು ಯೋಜನೆಗಳ ಮಾಹಿತಿ ನೀಡುವ ಗೋಡೆ ಪೇಟಿಂಗ್‌ಗಳನ್ನು ಮಾಡಿಸಲಾಗುವುದು. ಫಲಾನುಭವಿಗಳನ್ನು ಗುರುತಿಸುವುದರ ಜತೆಗೆ ಅವರಿಗೆ ಫಲಾನುಭವಿ ಪತ್ರವನ್ನೂ ವಿತರಿಸಲಾಗುತ್ತದೆ. ಸಾಮಾಜಿಕ ಜಾಲಾತಾಣಗಳ ಮೂಲಕವೂ ನಮ್ಮ ಯೋಜನೆಗಳ ಯಶಸ್ಸನ್ನು ಸಾರಲಾಗುವುದು ಎಂದರು.

    ಸದಸ್ಯತ್ವ ಅಭಿಯಾನ ಸಂಪೂರ್ಣ ಆನ್‌ಲೈನ್ ಇರಲಿದ್ದು ಮಿಸ್ಡ್ ಕಾಲ್ ಮೂಲಕ ನೋಂದಣಿಯಾದ ಸದಸ್ಯರ ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನೇರವಾಗಿ ನೋಡಬಹುದು. ನೋಂದಣಿ ಪ್ರಕ್ರಿಯೆ ಬಗೆಗೂ ಕಾರ್ಯಕರ್ತರಿಗೆ ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.

    ವಿಜಯ ಸಂಕಲ್ಪ ಅಭಿಯಾನದ ಜಿಲ್ಲಾ ಸಂಚಾಲಕ ಓಬಳೇಶ್, ಸಹ ಸಂಚಾಲಕ ಅಡವಿಸ್ವಾಮಿ, ಎಚ್.ಹನುಮಂತಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಶಂಕರ್‌ರೆಡ್ಡಿ, ಮುಖಂಡರಾದ ತಿಮ್ಮಾರೆಡ್ಡಿ, ಶಿವಾರೆಡ್ಡಿ, ಜಿಲ್ಲಾ ಮಾಧ್ಯಮ ವಕ್ತಾರ ಬಿ.ಕೆ.ಸುಂದರ್, ಸಹ ವಕ್ತಾರ ದರೋಜಿ ರಮೇಶ್, ರಾಜೀವ್ ತೊಗರಿ, ಸುಗುಣಾ ಕೆ., ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts