More

    ಬಳ್ಳಾರಿ ಉತ್ಸವಕ್ಕೆ ಗಾಳಿಪಟ ಮೆರುಗು- ಶಾಸಕ ಬಿ.ನಾಗೇಂದ್ರ ಚಾಲನೆ

    ಬಳ್ಳಾರಿ: ಇದೇ ಮೊದಲ ಬಾರಿಗೆ ಗಣಿನಾಡು ಬಳ್ಳಾರಿ ಉತ್ಸವವನ್ನು ಜ.21 ಹಾಗೂ 22ರಂದು ಆಯೋಜಿಸಲಾಗಿದ್ದು, ಅದರ ಅಂಗವಾಗಿ ಬುಧವಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಶಾಸಕ ಬಿ.ನಾಗೇಂದ್ರ ಚಾಲನೆ ನೀಡಿದರು.

    ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವ ನಮಗೆಲ್ಲ ಹಬ್ಬದ ವಾತಾವರಣ ಸೃಷ್ಟಿಸಿದೆ. ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಸ್ಪರ್ಧೆಯು ಮಕ್ಕಳ ಮನರಂಜನೆಗೆ ಪೂರಕವಾಗಿದ್ದು, ಗಾಳಿಪಟ ಹಾರಿಸುವಾಗ ನಾವೇ ಆಕಾಶದಲ್ಲಿ ಹಾರಾಡುತ್ತಿದ್ದೇವೆನ್ನುವ ರೀತಿ ಸಂತೋಷ ಎನಿಸುತ್ತಿದೆ. ನಮ್ಮೆಲ್ಲರ ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಈ ಸ್ಪರ್ಧೆ ಆಯೋಜಿಸಿದ ಜಿಲ್ಲಾಡಳಿತ ಕಾರ್ಯವನ್ನು ಶ್ಲಾಘಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಬಳ್ಳಾರಿ ಉತ್ಸವದ ಅಂಗವಾಗಿ ಆಯೋಜಿಸಲಾದ ಗಾಳಿಪಟ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ವಿಕೆ ರೋ ಕೈಟ್ಸ್ , ದೊಡ್ಡಬಳ್ಳಾಪುರ ಕೈಟ್ಸ್, ಬೆಂಗಳೂರಿನ ನೋಪಾಸನ್ ಕೈಟ್ಸ್, ಹೈದರಾಬಾದ್‌ನ ಶ್ರೀನಿವಾಸ್ ಕೈಟ್ಸ್ ಅವರಿಂದ ಒಟ್ಟು 140 ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸಲು ಕರೆಸಲಾಗಿದೆ. ಇದರಿಂದ ಉತ್ಸವದ ಮೆರುಗು ಇನ್ನಷ್ಟು ಹೆಚ್ಚಲಿದ್ದು, ಈ ಪ್ರದರ್ಶನ ದಿನಪೂರ್ತಿ ನಡೆಯಲಿದೆ. ಶಾಲಾ-ಕಾಲೇಜು ಮಕ್ಕಳಿಗೆ ಗಾಳಿಪಟಗಳನ್ನು ವಿತರಿಸಲಾಗುವುದು. ಮಕ್ಕಳು ಕೂಡ ಹಾರಿಸುವ ಮೂಲಕ ಸಂಭ್ರಮಿಸಬಹುದು ಎಂದರು.

    ಮೇಯರ್ ಎಂ.ರಾಜೇಶ್ವರಿ, ಉಪ ಮೇಯರ್ ಮಾಲನ್ ಬಿ., ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಹರಿಸಿಂಗ್ ರಾಥೋಡ್, ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಶಕೀಬ್ ಸೇರಿ ಮಹಾನಗರ ಪಾಲಿಕೆ ಸದಸ್ಯರು, ಪೊಲೀಸ್ ಇಲಾಖೆ ಅಧಿಕಾರಿಗಳಿದ್ದರು. ನಂತರ ಶಾಲಾ ಕಾಲೇಜು ಮಕ್ಕಳೆಲ್ಲರೂ ಸೇರಿ ಗಾಳಿಪಟ ಹಾರಿಸುವ ಮೂಲಕ ಸಂಭ್ರಮಿಸಿದರು.

    ಗಾಳಿಪಟ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರದ ಗಾಳಿಪಟ, ಸ್ಪೈಡರ್‌ಮನ್ ಗಾಳಿಪಟ, ವಿಶ್ವೇಶ್ವರಯ್ಯ ಭಾವಚಿತ್ರದ ಗಾಳಿಪಟ, ಪ್ಯಾರಾಚೂಟ್‌ಗಾಳಿಪಟ, ರಾಕೆಟ್ ಗಾಳಿಪಟ ಸೇರಿದಂತೆ 140ಕ್ಕೂ ಹೆಚ್ಚು ಗಾಳಿಪಟ ಹಾರಿಸಿದ್ದು ವಿಶೇಷವಾಗಿತ್ತು.

    ಸಿರಿಧಾನ್ಯ ನಡಿಗೆಗೆ ಚಾಲನೆ
    ಬಳ್ಳಾರಿ ಉತ್ಸವದ ಅಂಗವಾಗಿ ಕೃಷಿ ಇಲಾಖೆಯಿಂದ ‘ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ’ ಎಂಬ ಧ್ಯೇಯ ವಾಕ್ಯದೊಂದಿಗೆ ಮಾನವನ ಆರೋಗ್ಯಕ್ಕೆ ಸಿರಿಧಾನ್ಯಗಳ ಮಹತ್ವ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಚಾಲನೆ ನೀಡಲಾಯಿತು. ಶಾಸಕ ಸೋಮಶೇಖರ ರೆಡ್ಡಿ, ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಡಿಸಿ ಪವನಕುಮಾರ ಮಾಲಪಾಟಿ, ಎಡಿಸಿ ಪಿ.ಎಸ್.ಮಂಜುನಾಥ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗಹಿಸಿದ್ದರು.

    ಈ ಜಾಥಾವು ಮಾನವನ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆಯ ಕುರಿತು ಮಾಹಿತಿ ಫಲಕಗಳ ಮೂಲಕ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಆರಂಭವಾಗಿ ಮೋತಿ ವೃತ್ತದಿಂದ ಎಸ್ಪಿ ಸರ್ಕಲ್ ಮೂಲಕ ದುರುಗಮ್ಮ ದೇವಸ್ಥಾನ ಮಾರ್ಗವಾಗಿ ಗಡಿಗಿ ಚೆನ್ನಪ್ಪ ವೃತ್ತದಿಂದ ಪುನಃ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮುಕ್ತಾಯವಾಯಿತು.

    ಗಮನ ಸೆಳೆದ ಮ್ಯಾರಥಾನ್ ಓಟ
    ಬಳ್ಳಾರಿ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮ್ಯಾರಥಾನ್ ಓಟಕ್ಕೆ ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಬುಧವಾರ ಚಾಲನೆ ನೀಡಲಾಯಿತು. ಶಾಸಕ ಸೋಮಶೇಖರ ರೆಡ್ಡಿ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್ ರಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts