More

  ಇನ್ಮುಂದೆ ಕ್ಯಾಷ್‌ಲೆಸ್ ಪ್ರಯಾಣ!; ಡಿಜಿಟಲ್ ಆಗುತ್ತಿದೆ ಕೆಕೆಆರ್‌ಟಿಸಿ

  | ಶೀಘ್ರವೇ ಕ್ಯೂ ಆರ್ ಕೋಡ್ ಅಳವಡಿಕೆ

  ಹೀರಾನಾಯ್ಕ ಟಿ.


  ಬಳ್ಳಾರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಸ್‌ಗಳಲ್ಲಿ ಶೀಘ್ರದಲ್ಲೇ ಕ್ಯಾಷ್‌ಲೆಸ್ ಪ್ರಯಾಣ ಮಾಡಬಹುದು..!


  ಕ್ಯೂ ಆರ್ ಕೋಡ್ ಬಳಸಿ, ಅದರ ಮೂಲಕ ಆನ್‌ಲೈನ್ ಪಾವತಿ ಮಾಡಿ ಪಯಣ ಮಾಡುವ ದಿನಗಳು ದೂರವಿಲ್ಲ. ಈ ಹೊಸ ಸೌಕರ್ಯವನ್ನು ಕೆಕೆಆರ್‌ಟಿಸಿ ತರಲಿದೆ. ನಿಲ್ದಾಣಗಳಲ್ಲಿ ಶೀಘ್ರವೇ ಟಿಕೆಟ್ ಕ್ಯೂಆರ್ ಕೋಡ್ ಸ್ಕಾೃನಿಂಗ್ ಮಷಿನ್‌ಗಳು ಬಂದಿಳಿಯಲಿವೆ.


  ಟಿಕೆಟ್ ಪಡೆಯುವವರು ಡಿಜಿಟಲ್ ಪಾವತಿ ಮಾಡುವ ಮೂಲಕ ಬಸ್‌ಗಳಲ್ಲಿ ಸಂಚರಿಸಬಹುದು. ಪ್ರಯಾಣಿಕರಿಗೆ ಸಾರಿಗೆ ಸೇವೆ ಮತ್ತಷ್ಟು ಹಿತಕರವಾಗುವ ರೀತಿಯಲ್ಲಿ ಡಿಜಿಟಲ್ ಅಳವಡಿಕೆ ಮೂಲಕ ಕೆಕೆಆರ್‌ಟಿಸಿ ಹೊಸ ಹೆಜ್ಜೆ ಇರಿಸಿದೆ. ಪ್ರಯಾಣಿಕರು ಇನ್ಮುಂದೆ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್/ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ವೋಲ್ವೊ ಸೇರಿದಂತೆ ಸಾಮಾನ್ಯ ಬಸ್‌ಗಳಲ್ಲೂ ನಿರ್ವಾಹಕರ ಬಳಿ ಇಟಿಎಂ ಮಷಿನ್ ಇರುತ್ತದೆ. ಅದರಲ್ಲಿರುವ ಕ್ಯೂ ಆರ್ ಕೋಡ್ ಬಳಸಿ (ಸ್ಕಾೃನ್) ಪ್ರಯಾಣ ಮಾಡಬಹುದು. ಪ್ರಯಾಣಿಕರಿಗೆ ಇದರಿಂದ ಸಾಕಷ್ಟು ಅನುಕೂಲಗಳಾಗಲಿವೆ.

  ಕೆಕೆಆರ್‌ಟಿಸಿ ವ್ಯಾಪ್ತಿಯಲ್ಲಿ ಕಲಬುರಗಿ ಜಿಲ್ಲೆಯ ಹಲವೆಡೆ ಕ್ಯೂ ಆರ್ ಕೋಡ್ ಪರಿಚಯಿಸಲಾಗಿದೆ. ಐದು ಡಿಪೋಗಳಲ್ಲಿ ಪ್ರಾಯೋಗಿಕವಾಗಿ ಡಿಜಿಟಲ್ ಪಾವತಿ ಸೌಲಭ್ಯ ನೀಡಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆಯೂ ದೊರಕುತ್ತಿದೆ. ಈ ಯೋಜನೆ ಮುಂದಿನ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ವಿಸ್ತರಣೆಗೊಳ್ಳಲಿದೆ. ಇದರಿಂದ ಪ್ರಯಾಣಿಸುವವರಿಗೆ ಮತ್ತು ಕಂಡಕ್ಟರ್‌ಗಳಿಗೆ ಚಿಲ್ಲರೆ ಸಮಸ್ಯೆ ತಪ್ಪಲಿದೆ. ಸಮಯವೂ ಇದರಿಂದ ಉಳಿತಾಯವಾಗಲಿದೆ. ಪ್ರಮುಖವಾಗಿ ಪಾರದರ್ಶಕ ವಹಿವಾಟಿಗೆ ಇದು ನಾಂದಿಯಾಗಲಿದೆ. ಕೆಲವರ ಬಳಿ ಸ್ಮಾರ್ಟ್‌ಫೋನ್‌ಗಳ ಲಭ್ಯತೆ ಇರದೆ ಇರುವವರು ಎಂದಿನಂತೆ ಹಣ ನೀಡಿ ಟಿಕೆಟ್ ಪಡೆಯಬಹುದು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

  ಬಳ್ಳಾರಿಗೆ ಬರಲಿವೆ 50 ಎಲೆಕ್ಟ್ರಿಕಲ್ ವೆಹಿಕಲ್ಸ್


  ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ಒದಗಿಸಲು ಸರ್ಕಾರದಿಂದ 50 ಎಲೆಕ್ಟ್ರಿಕಲ್ ಬಸ್‌ಗಳು ಬರಲಿವೆ. ಬಳ್ಳಾರಿ ನಗರ ವ್ಯಾಪ್ತಿ ಯಲ್ಲಿ ಇವು ಸಂಚರಿಸಲಿವೆ. ಒಮ್ಮೆ ಪೂರ್ತಿ ಚಾರ್ಜ್ ಆದರೆ ಪ್ರತಿ ದಿನ 300 ಕಿಮೀವರೆಗೆ ಸಂಚರಿಸಬಹುದು. ಅದರಲ್ಲಿ ಜಿಪಿಎಸ್, ಸಿಸಿ ಟಿವಿ ಕ್ಯಾಮರಾ, ಇತರ ಅತ್ಯಾಧುನಿಕ ತಂತ್ರಜ್ಞಾನಗಳು ಅಡಕವಾಗಿರುತ್ತವೆ. ಇಂಧನ ಬಳಕೆಯಿಂದ ಓಡಾಡುವ ಬಸ್‌ಗಳಿಗೆ ಪ್ರತಿ 300 ಕಿಮೀಗೆ ಆರು ಸಾವಿರ ರೂ. ಮೌಲ್ಯದ ಡೀಸೆಲ್ ಖರ್ಚು ಬರುತ್ತದೆ. ಅದೇ ಎಲೆಕ್ಟ್ರಿಕಲ್ ಬಸ್‌ಗೆ 500 ರೂ. ಮೌಲ್ಯದಷ್ಟೇ ವಿದ್ಯುತ್ ವ್ಯಯವಾಗುತ್ತದೆ. ಈ ಬಸ್‌ಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಬರಲಿವೆ.

  414 ಬಸ್‌ಗಳ ಕಾರ್ಯಾಚರಣೆ

  ಬಳ್ಳಾರಿ ಜಿಲ್ಲೆ ವ್ಯಾಪ್ತಿಯಲ್ಲಿ 414 ಸಾರಿಗೆ ಬಸ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರತಿ ದಿನವೂ 1.46 ಲಕ್ಷ ಕಿಮೀ ಸಂಚರಿಸುತ್ತವೆ. ಅಲ್ಲದೆ ಸರಾಸರಿ ಒಂದು ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ದಿನಕ್ಕೆ 2,141 ಟ್ರಿಪ್ ಓಡಾಡುತ್ತವೆ. ಒಂದು ದಿನಕ್ಕೆ ಅಂದಾಜು 55-60 ಲಕ್ಷ ರೂ. ಆದಾಯ ಹರಿದು ಬರುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ಸಾರಿಗೆ ಬೊಕ್ಕಸಕ್ಕೆ 8.7 ಕೋಟಿ ರೂ. ಆದಾಯ ಬಂದಿದೆ. ಕಳೆದ ವರ್ಷ ಇದೇ ಫೆಬ್ರವರಿಯಲ್ಲಿ ಹದಿನೈದು ದಿನಗಳಲ್ಲಿ 6.48 ಕೋಟಿ ರೂ. ಆದಾಯ ಬಂದಿತ್ತು. ಈಗ ಶಕ್ತಿಯೋಜನೆಯಡಿ ಪ್ರಯಾಣಿಕರ ಸಂಖ್ಯೆ ಶೇ.24 ಹೆಚ್ಚಾಗಿದೆ. ಬೆಂಗಳೂರು, ಕೋಲಾರ, ಮಂಡ್ಯ, ಧರ್ಮಸ್ಥಳ, ಮಂಗಳೂರು, ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್, ರಾಯಚೂರು ಸೇರಿದಂತೆ ಅಂತಾರಾಜ್ಯ ಮಹಾರಾಷ್ಟ್ರ, ಗೋವಾ, ತೆಲಂಗಾಣ, ಆಂಧ್ರಪ್ರದೇಶಗಳಿಗೂ ಇಲ್ಲಿನ ಬಸ್ ಸಂಚರಿಸುತ್ತಿವೆ. 1,275 ಡ್ರೈವರ್‌ಗಳಲ್ಲಿ 1,156 ಚಾಲಕರು ಕಾರ್ಯನಿರ್ವಹಿಸುತ್ತಿದ್ದು, 119 ಸಿಬ್ಬಂದಿ ಕೊರತೆ ಇದೆ. ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಹುದ್ದೆಗಳು ಭರ್ತಿ ನಂತರ ಸಂಚಾರ ವ್ಯವಸ್ಥೆ ಮತ್ತಷ್ಟು ವಿಸ್ತರಣೆಗೊಳ್ಳಲಿದೆ.

  ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುವವರು ಕ್ಯೂ ಆರ್ ಕೋಡ್ ಬಳಸಿ ಹಣ ಪಾವತಿಸಬಹುದು. ಶೀಘ್ರವೇ ಈ ವ್ಯವಸ್ಥೆ ಜಾರಿಗೊಳ್ಳಲಿದೆ. ಕಲಬುರಗಿಯಲ್ಲಿ ಈಗಾಗಲೇ ಟ್ರಯಲ್ ನಡೆದಿದೆ. ಇದರಿಂದ ಚಿಲ್ಲರೆ ಸಮಸ್ಯೆ ಕೂಡಾ ನಿವಾರಣೆಯಾಗಲಿದೆ.
  | ಇನಾಯತ್ ಬಾಗವಾನ್ ವಿಭಾಗೀಯ ನಿಯಂತ್ರಣಾಧಿಕಾರಿ, ಕೆಕೆಆರ್‌ಟಿಸಿ, ಬಳ್ಳಾರಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts