More

    ಕೈಗಾರಿಕೆ ನಿರ್ಮಿಸದಿದ್ದಲ್ಲಿ ಭೂಮಿ ವಾಪಸ್- ಸಚಿವ ಬಿ.ಶ್ರೀರಾಮುಲು ಘೋಷಣೆ

    ಬಳ್ಳಾರಿ: ಜಿಲ್ಲೆಯಲ್ಲಿ ರೈತರಿಂದ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಕೈಗಾರಿಕೆ ನಿರ್ಮಿಸದಿದ್ದರೆ ಮರಳಿ ಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಘೋಷಿಸಿದ್ದಾರೆ.

    ಉತ್ತಮ ಗಾಲ್ವಾ, ಎನ್‌ಎಂಡಿಸಿ, ಮಿತ್ತಲ್ ಕಂಪನಿಗಳಿಗೆ ಕೈಗಾರಿಕೆ ಸ್ಥಾಪಿಸಲು ಒಂದು ವರ್ಷದ ಕಾಲಾವಧಿ ನೀಡಲಾಗಿದೆ. ಇಂಥದೆ ಕೈಗಾರಿಕೆ ಸ್ಥಾಪಿಸುವುದಾಗಿ ಭೂಮಿ ವಶಪಡಿಸಿಕೊಂಡ ಕಾರ್ಖಾನೆಗಳು ಅದನ್ನೇ ಶುರುಮಾಡಬೇಕು. ಇದು ಕೈಗೂಡದಿದ್ದರೆ ರೈತರಿಗೆ ಭೂಮಿ ವಾಪಾಸು ಕೊಡಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಸಮರ್ಪಕವಾಗಿ ಬಳಕೆಯಾಗದೆ ಉಳಿದಿದೆ. ಸಂಬಂಧಿತ ಅಧಿಕಾರಿಗಳಿಗೆ ಕಾಮಗಾರಿ ಕೈಗೆತ್ತಿಕೊಳ್ಳಲು ಹಾಗೂ ಕಕ ಭಾಗದ ಹುದ್ದೆಗಳ ಭರ್ತಿಗೆ ಸೂಚಿಸಲಾಗಿದೆ. ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಲ್ಲಿನ ನಷ್ಟ ಸರಿದೂಗಿಸಲು ಕ್ರಮ ಕೈಗೊಳ್ಳಲಾಗಿದೆ. ಚಾಲಕ, ನಿರ್ವಾಹಕ, ಸಿಬ್ಬಂದಿಗೆ ವೇತನ ಪಾವತಿಗೆ ಒಂದೆರಡು ತಿಂಗಳು ತಡವಾಗಿರುವುದು ಗಮನಕ್ಕೆ ಬಂದಿದ್ದು, ಮುಂದಿನ ತಿಂಗಳಿಂದ ಸಕಾಲಕ್ಕೆ ಪಾವತಿಸಲಾಗುವುದು. ಬಳ್ಳಾರಿ ತಾಲೂಕಿನ ಹಗರಿಯಲ್ಲಿ ಕೃಷಿ ಕಾಲೇಜು ಆರಂಭದ ಬಹುದಿನಗಳ ಬೇಡಿಕೆಯಿದ್ದು, ಈ ಬಗ್ಗೆ ಸಿಎಂ ಹಾಗೂ ಕೃಷಿ ಸಚಿವರಿಗೆ ಬಜೆಟ್‌ನಲ್ಲಿ ೋಷಣೆ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.

    ಉಸ್ತುವಾರಿಗೆ ಮಾಹಿತಿ ಕೊರತೆ: ಸುದ್ದಿಗೋಷ್ಠಿ ಆರಂಭದಲ್ಲಿ ಕೇಂದ್ರ ಬಜೆಟ್‌ನಿಂದ ದೇಶಕ್ಕೆ ಯಾವೆಲ್ಲ ಕೊಡುಗೆ ಸಿಕ್ಕಿದೆ ಎಂಬುದರ ಪ್ರಮುಖಾಂಶಗಳನ್ನು ನೋಟ್ ಮಾಡಿಕೊಂಡು ಬಂದ ಸಚಿವ, ಯಥಾವತ್ ಓದುತ್ತಿರುವುದಕ್ಕೆ ಪತ್ರಕರ್ತರಿಂದ ಆಕ್ಷೇಪ ವ್ಯಕ್ತವಾಯಿತು. ಇದರಿಂದ ಸಿಡಿಮಿಡಿಗೊಂಡ ಶ್ರೀರಾಮುಲು, ನಾನು ಮಾತನಾಡಿದ ನಂತರ ನೀವು ಪ್ರಶ್ನೆ ಕೇಳಿ ಎಂದರು. ಬಜೆಟ್‌ನಲ್ಲಿ ಏನಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಜಿಲ್ಲೆಗೆ, ರಾಜ್ಯಕ್ಕೆ ಏನು ಕೊಡುಗೆ ಸಿಕ್ಕಿದೆ ಎಂಬುದನ್ನು ತಿಳಿಸಿ ಎಂದಾಗ ಸಚಿವರು ಮತ್ತಷ್ಟು ಗರಂ ಆದರು. ನಾನು ಉಸ್ತುವಾರಿಯಿದ್ದೇನೆ. ಸಚಿವ ಸ್ಥಾನಕ್ಕೆ ಬೆಲೆ ನೀಡಿ ಎಂದರು. ಇದಾದ ನಂತರವೂ ಕೇಂದ್ರ ಬಜೆಟ್ ಪ್ರಮುಖಾಂಶ ಸಂಪೂರ್ಣ ಓದಿದ ನಂತರ ಪತ್ರಕರ್ತರು ಕೇಳಿದ ಜಿಲ್ಲೆಯ, ರಾಜ್ಯಮಟ್ಟದ ಹಲವು ಪ್ರಶ್ನೆಗಳಿಗೆ ಸಚಿವರಿಂದ ಸಮರ್ಪಕ ಉತ್ತರ ಬರಲಿಲ್ಲ. ಬಜೆಟ್‌ನಲ್ಲಿ ಐದು ನದಿ ಜೋಡಣೆ ಪ್ರಸ್ತಾಪ ಮಾಡಿದ್ದರೂ 53 ನದಿ ಜೋಡಣೆ ಹಾಗೂ 371ಜೆ ಅಭಿವೃದ್ಧಿ ವಿಚಾರದಲ್ಲಿನ ಅಂಕಿ ಸಂಖ್ಯೆಗಳನ್ನು ತಪ್ಪಾಗಿ ಹೇಳಿದ್ದು ಮುಜುಗರಕ್ಕೆ ಈಡಾಗುವಂತೆ ಮಾಡಿತು. ಈ ವೇಳೆ ಅನತಿ ದೂರದಲ್ಲಿದ್ದ ತಮ್ಮ ಪಿಎ ಬಳಿಯಿಂದ ಮಾಹಿತಿ ಪಡೆದು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರೂ ಅವರೊಂದು ಹೇಳಿದರೆ.. ಸಚಿವರು ಮತ್ತೊಂದು ಕೇಳಿಸಿಕೊಂಡು ಉತ್ತರಿಸಿದ್ದು ಗೋಚರಿಸಿತು.

    ಬೇಡಿಕೆ ಈಡೇರಿಸಲು ಬದ್ಧ: ನಗರದ ಎಪಿಎಂಸಿ ಆವರಣದಲ್ಲಿ 2.80 ಕೋಟಿ ರೂ.ವೆಚ್ಚದಲ್ಲಿ ಎಪಿಎಂಸಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಅರ್ಧ ಎಕರೆ ಪ್ರದೇಶದಲ್ಲಿ ಈ ಕಟ್ಟಡವನ್ನು 11 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿಯಿದೆ. ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ನಾಲ್ಕು ಕಡೆ ನೂತನ ಠಾಣೆ ನಿರ್ಮಿಸಲಾಗುವುದು. ಜಿಲ್ಲೆಯಲ್ಲಿ ಒಂದು ಲಕ್ಷ ಪಟ್ಟಾ ವಿತರಿಸಬೇಕಿದ್ದು, ಒಂದೆರಡು ತಿಂಗಳಲ್ಲಿ ಸಿಎಂ ಸಮ್ಮುಖದಲ್ಲಿ ವಿತರಿಸಲಾಗುವುದು. ಮುಂಡರಗಿ ಆಶ್ರಯ ವಸತಿ ಬಡಾವಣೆಯಲ್ಲಿ ಶೀಘ್ರ ಮನೆಗಳನ್ನು ಫಲಾನುಭವಿಗಳಿಗೆ ಒದಗಿಸಲಾಗುತ್ತದೆ ಎಂದರು.

    ಶಾಸಕರಾದ ಸೋಮಶೇಖರರೆಡ್ಡಿ, ಮಾಜಿ ಸಂಸದರಾದ ಸಣ್ಣಪಕ್ಕೀರಪ್ಪ, ಜೆ. ಶಾಂತಾ, ವಿಪ ಸದಸ್ಯ ವೈ.ಎನ್.ಸತೀಶ್, ಜಿಲ್ಲಾಧ್ಯಕ್ಷ ಗೋನಾಳ ಮುರಾರಹರಗೌಡ, ಮುಖಂಡರಾದ ಡಾ.ಮೈಥಾಲಿ, ಅನಿಲ್ ಮೋಕ, ಜಿಲ್ಲಾ ವಕ್ತಾರ ಡಾ.ಬಿ.ಕೆ.ಸುಂದರ್, ಜಿಲ್ಲಾ ಸಹ ವಕ್ತಾರ ದರೋಜಿ ರಮೇಶ್, ಜಿಲ್ಲಾ ಮಾಧ್ಯಮ ಪ್ರಮುಖ್ ಕೃಷ್ಣರೆಡ್ಡಿ, ಜಿಲ್ಲಾ ಮಾಧ್ಯಮ ಸಹಪ್ರಮುಖ್ ರಾಜೀವ್ ತೊಗರಿ ಇತರರಿದ್ದರು.

    ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲು ಕಲ್ಪಿಸುವಂತೆ ಧ್ವನಿ ಎತ್ತಿದವರಲ್ಲಿ ಮೊದಲಿಗನಿದ್ದೇನೆ. ಹಿಂದೆ ಸರಿವ ಮಾತಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಮೀಸಲು ಸಿಗಲಿದೆ. ಆದರೆ, ವಾಲ್ಮೀಕಿ ಪೀಠದ ಸ್ವಾಮೀಜಿ ಧರಣಿ ಪ್ರಾರಂಭಿಸುತ್ತೇನೆ ಎಂದಿರುವುದು ಮುಜುಗರಕ್ಕೆ ಕಾರಣವಾಗಿದೆ. ಸ್ವಾಮೀಜಿಗಳು ಧರಣಿ ಹಿಂಪಡೆಯಬೇಕು.
    | ಬಿ.ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts