More

    ಎಸ್ಸೆಸ್ಸೆಲ್ಸಿ ಪರೀಕ್ಷೆಗಿರಲಿ ಅಗತ್ಯ ಸಿದ್ಧತೆ; ಬಳ್ಳಾರಿ ಡಿಸಿ ಪವನ್‌ಕುಮಾರ್ ಮಾಲಪಾಟಿ ಸೂಚನೆ

    ಬಳ್ಳಾರಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ಮಾ.31ರಿಂದ ಏ.15ರವರೆಗೆ ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಿಗೆ ಬೇಕಾದ ಅಗತ್ಯ ಮೂಲ ಸೌಲಭ್ಯಗಳ ವ್ಯವಸ್ಥೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಸೂಚನೆ ನೀಡಿದರು.

    ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ ಅನಧಿಕೃತ ವ್ಯಕ್ತಿಗಳ ಓಡಾಟ, ವಿಧಾನಸಭಾ ಚುನಾವಣಾ ಪ್ರಚಾರ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ಜಿಲ್ಲಾಡಳಿತ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

    ಜಿಲ್ಲೆಯಲ್ಲಿನ ಒಟ್ಟು 302 ಪ್ರೌಢಶಾಲೆಗಳ 11,634 ಬಾಲಕರು, 11,810 ಬಾಲಕಿಯರು 10ನೇ ತರಗತಿ ರೀಕ್ಷೆ ಬರೆಯಲಿದ್ದಾರೆ. 71 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಪೈಕಿ 4 ಸೂಕ್ಷ್ಮ ಮತ್ತು ಅತಿಸೂಕ್ಷ್ಮಕೇಂದ್ರಗಳನ್ನಾಗಿ ಗುರುತಿಸಲಾಗಿದೆ. 1048 ಪರೀಕ್ಷಾ ಕೊಠಡಿಗಳನ್ನು ಪಡೆಯಲಾಗಿದ್ದು, 6 ಅಡಿ ಅಂತರದಲ್ಲಿ ಒಟ್ಟು 11,772 ಡೆಸ್ಕ್‌ಗಳಲ್ಲಿ ಆಸನ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಆಸನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

    ಸಾಮಾಗ್ರಿಗಳ ಸಂರಕ್ಷಣೆಗಾಗಿ, ಪರೀಕ್ಷಾ ಪಾವಿತ್ರೃತೆ ಹಾಗೂ ಶಾಂತಿಯುತ ವಾತಾವರಣಕ್ಕಾಗಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಉತ್ತರ ಪತ್ರಿಕೆಗಳನ್ನು ತಾಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಮತ್ತು ಮೌಲ್ಯಮಾಪನ ಕೇಂದ್ರಕ್ಕೆ ಸಾಗಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಯಿತು. ಪರೀಕ್ಷಾ ಕೇಂದ್ರಗಳಲ್ಲಿ ಬೆಳಕಿನ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ, ಇತರ ವ್ಯವಸ್ಥೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್, ಸಾರ್ವಜಜಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಂದಾನಪ್ಪ ವಡಗೇರಿ ಸೇರಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಎಲ್ಲ ಶಾಲೆ ಮುಖ್ಯಶಿಕ್ಷಕರು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts