More

    ಬಳ್ಳಾರಿ ಜಿಲ್ಲೆಯಲ್ಲಿ 2ನೇ ಅಲೆ ಎದುರಿಸಲು ಆರೋಗ್ಯ ಇಲಾಖೆ ಸಜ್ಜು: ತಾಲೂಕು ಆಸ್ಪತ್ರೆಗಳಲ್ಲಿ 20 ಬೆಡ್ ನಿಗದಿ

    ಬಳ್ಳಾರಿ: ಕರೊನಾ ಎರಡನೇ ಅಲೆ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸಜ್ಜಾಗಿದ್ದು, ಚಿಕಿತ್ಸೆಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಸಿದ್ಧತೆ ವಾಡಿಕೊಳ್ಳುತ್ತಿದೆ. ಮೊದಲ ಅವಧಿಯಲ್ಲಿ ಬಳಸಿದ್ದ ಎಲ್ಲ ಆಸ್ಪತ್ರೆಗಳನ್ನು ಮತ್ತೆ ಸಿದ್ಧ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಡಿಎಚ್‌ಒ ಜನಾರ್ದನ ಸೂಚನೆ ನೀಡಿದ್ದಾರೆ.

    ಅದರಲ್ಲೂ ಕೇಂದ್ರ ಆರೋಗ್ಯ ಇಲಾಖೆ ಹೊರಡಿಸಿದ ರಾಜ್ಯದ ಒಂಬತ್ತು ರಿಸ್ಕ್ ಜಿಲ್ಲೆಗಳ ಪಟ್ಟಿಯಲ್ಲಿ ಗಣಿ ನಾಡು ಬಳ್ಳಾರಿ ಕೂಡ ಇರುವ ಕಾರಣ ಸಾಕಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ನಡುವೆ ಆಶಾದಾಯಕ ಬೆಳವಣಿಗೆ ಎಂಬಂತೆ ಆಫ್ರಿಕಾ ವೈರಸ್ ಸೋಂಕಿತ ಸಂಪರ್ಕಿತರ 35 ಜನರ ಪೈಕಿ 34 ವರದಿ ನೆಗೆಟಿವ್ ಬಂದಿರುವುದರಿಂದ ಜಿಲ್ಲಾಡಳಿತ ನಿಟ್ಟುಸಿರು ಬಿಟ್ಟಿದೆ. ಇನ್ನೊಬ್ಬರ ವರದಿ ಬರಬೇಕಿದೆ.

    ಕಳೆದ ವರ್ಷ ಮಾರ್ಚ್ ಆರಂಭದಲ್ಲಿ ಹೊಸಪೇಟೆಯಲ್ಲಿ ಮೂವರಿಗೆ ಸೋಂಕು ಬರುವ ಮೂಲಕ ಖಾತೆ ತೆರೆದ ಕರೊನಾ, ಈವರೆಗೆ 40 ಸಾವಿರ ಗಡಿಯತ್ತ ಬಂದು ನಿಂತಿದೆ. ಈಚೆಗೆ ಇಂಗ್ಲೆಂಡ್ ಹಾಗೂ ಆಫ್ರಿಕಾ ಮಾದರಿ ಕರೊನಾ ವೈರಸ್ ಜಿಲ್ಲೆಯ ಮೂವರಲ್ಲಿ ಕಾಣಿಸಿದ್ದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತವು ಎರಡನೇ ಅಲೆ ತಡೆಗೆ ಜಾಗೃತಿ ವಹಿಸುತ್ತಿದೆ. ಈಗಾಗಲೇ ನಿರಂತರವಾಗಿ ಸಾರ್ವಜನಿಕರಲ್ಲಿ ರ‌್ಯಾಪಿಡ್ ಮತ್ತು ಆರ್‌ಟಿಪಿಸಿಆರ್ ಮೂಲಕ ಕರೊನಾ ಪರೀಕ್ಷೆ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿ, ಹಿರಿಯ ನಾಗರಿಕರ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ಕರೊನಾ ಲಸಿಕೆ ನೀಡಲಾಗುತ್ತಿದೆ.

    ಆದರೂ, ಎರಡನೇ ಅಲೆ ಅಪ್ಪಳಿಸಿದರೆ ಅದರ ತಡೆಗಾಗಿ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 20 ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ. ವಿಮ್ಸ್ ಟ್ರಾವಾಕೇರ್ ಸೆಂಟರ್‌ನಲ್ಲಿ 200 ಬೆಡ್ ಸಿದ್ಧವಾಗಿಟ್ಟುಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇನ್ನೂ ಹೆಚ್ಚಾದರೆ ವಿಮ್ಸ್‌ನ ಡೆಂಟಲ್ ಮತ್ತು ಹಳೆಯ ಡೆಂಟಲ್ ಆಸ್ಪತ್ರೆ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts