More

    ಹಾಳಾದ ರಸ್ತೆಗಳನ್ನು ದುರಸ್ತಿ ಮಾಡಿಸಲು ಬಳ್ಳಾರಿ ನಾಗರಿಕ ಹೋರಾಟ ಸಮಿತಿ ಆಗ್ರಹ

    ಬಳ್ಳಾರಿ: ನಗರದಾದ್ಯಂತ ಹಾಳಾಗಿರುವ ರಸ್ತೆಗಳನ್ನು ದುರಸ್ತಿಗೊಳಿಸಲು ಹಾಗೂ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಬಳ್ಳಾರಿ ನಾಗರಿಕ ಹೋರಾಟ ಸಮಿತಿ ನೇತೃತ್ವದಲ್ಲಿ ಸಾರ್ವಜನಿಕರು ಇಲ್ಲಿನ ಮಹಾನಗರ ಪಾಲಿಕೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಸಮಿತಿ ಸಂಚಾಲಕ ಆರ್.ಸೋಮಶೇಖರಗೌಡ ಮಾತನಾಡಿ, ಬಳ್ಳಾರಿ ಹೇಳಿಕೊಳ್ಳುವುದಕ್ಕೆ ಮಹಾನಗರಪಾಲಿಕೆಯಾಗಿದ್ದರೂ ಜನರಿಗೆ ಸೌಲಭ್ಯ ನೀಡುವ ವಿಚಾರದಲ್ಲಿ ಸಾಕಷ್ಟು ಹಿಂದುಳಿದಿರುವುದು ಅತ್ಯಂತ ನೋವಿನ ವಿಚಾರ. ನಗರದ ರಸ್ತೆಗಳ ಮೇಲೆ ಓಡಾಡುವುದೆಂದರೆ ಒಂದು ಸಾಹಸ ಯಾತ್ರೆ ಕೈಗೊಂಡ ಅನುಭವ ಜನರಲ್ಲಿ ಉಂಟಾಗುತ್ತಿದೆ. ಗುಂಡಿಗಳು ತುಂಬಿದ ರಸ್ತೆಗಳು, ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳಿಂದಾಗಿ ಅಪಘಾತ ಸಂಭವಿಸುವ ಭಯ ವಾಹನ ಸವಾರರನ್ನು ಕಾಡುತ್ತಿದೆ. ಈಗಾಗಲೆ ಸಾಕಷ್ಟು ಜನ ಗುಂಡಿಗಳಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಳ್ಳಾರಿಯಲ್ಲಿ ಧೂಳಿಲ್ಲದ ರಸ್ತೆಗಳು ತುಂಬಾ ಅಪರೂಪ. ಈ ಧೂಳಿನಿಂದಾಗಿ ಆಬಾಲ ವೃದ್ಧರು ಶ್ವಾಸಕೋಶದ ಸಮಸ್ಯೆ ಎದುರಿಸುವಂತಾಗಿದೆ. ಚರಂಡಿ ನೀರು ಕುಡಿಯುವ ನೀರಲ್ಲಿ ಮಿಶ್ರಣವಾಗುತ್ತಿದೆ. ಚರಂಡಿ ಪೈಪು ಒಡೆದು ರಸ್ತೆಗಳ ಮೇಲೆ ಕೊಳಚೆ ನೀರು ಹರಿಯುತ್ತಿದೆ. ಕೆಲವೆಡೆ ಮನೆಗಳಿಗೆ ನುಗ್ಗುತ್ತಿದೆ. ಮೇಲ್ಸೇತುವೆ ಇಲ್ಲದೆ ಸುಧಾಕ್ರಾಸ್ ರೈಲ್ವೆ ಗೇಟ್ ಬಳಿಯಲ್ಲಿ ಆಗುತ್ತಿರುವ ಟ್ರಾಫಿಕ್ ಜಾಮ್‌ನಿಂದ ದಿನನಿತ್ಯ ಜನ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

    ಸಮಿತಿ ಸದಸ್ಯ ಎ.ದೇವದಾಸ್ ಮಾತನಾಡಿ, ನಗರದಲ್ಲಿ ಭಾರಿ ವಾಹನಗಳು ಪ್ರವೇಶಿಸುತ್ತಿರುವುದರಿಂದ ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರ ವರೆಗೆ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಮಹಾನಗರಪಾಲಿಕೆ ಕೂಡಲೇ ಮುಂದಾಗಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts