More

    ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಆದ್ಯತೆ – ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಮತ

    ಬಳ್ಳಾರಿ: ಆತ್ಮನಿರ್ಭರ, ನವಭಾರತ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆ ತರಲಾಗುತ್ತಿದೆ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.

    ಇಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 10ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಸಬಲತೆ ಸಾಧಿಸಲು ಎನ್‌ಇಪಿ ಅಗತ್ಯ. ಮಾತೃಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಗುಣಮಟ್ಟ ಮತ್ತು ಉತ್ಕೃಷ್ಟತೆ ಕಾಪಾಡಿಕೊಳ್ಳಲು ಶಿಕ್ಷಣ ನೀತಿ ಸಹಕಾರಿ. ಇಂದಿನ ಆಧುನಿಕ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಮತ್ತೊಮ್ಮೆ ಮರು ಸ್ಥಾಪಿಸುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿ ಮಾಡಬೇಕಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ನಿರಂತರ ಶ್ರಮಿಸುತ್ತಿದ್ದಾರೆ. ಜ್ಞಾನ-ವಿಜ್ಞಾನವನ್ನು ಜಗತ್ತಿಗೆ ತಿಳಿಸಿಕೊಟ್ಟ ದೇಶ ನಮ್ಮದು ಎಂದು ಶ್ಲಾಘಿಸಿದರು.

    ವಿವಿ ಕುಲಪತಿ ಪ್ರೊ.ಸಿದ್ದು ಪಿ.ಆಲಗೂರ, ಶಾಸಕ ಜಿ.ಸೋಮಶೇಖರ್ ರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

    ಭಾರತವು ವಿಶ್ವದಲ್ಲಿ ಅತಿವೇಗವಾಗಿ ಆರ್ಥಿಕತೆಯಲ್ಲಿ ಬೆಳೆಯುತ್ತಿರುವ ರಾಷ್ಟ್ರಗಳ ಪೈಕಿ ಮುಂಚೂಣಿಯಲ್ಲಿದೆ. ಈಗಾಗಲೇ ಡಿಜಿಟಲ್ ತಂತ್ರಜ್ಞಾನ ಬೆಳವಣಿಗೆಗಳ ಅಳವಡಿಕೆಯಲ್ಲಿ ಭಾರತ ಪ್ರಮುಖ ದೇಶವಾಗಿದೆ. ಜ್ಞಾನ ಹಾಗೂ ಕೌಶಲ ಬಳಸಿ ಪ್ರತಿಯೊಬ್ಬರು ಲಭ್ಯವಿರುವ ಅದ್ಭುತವಾದ ಅವಕಾಶವನ್ನು ಸದುಪಯೋಗಿಸಿಕೊಳ್ಳಬೇಕು.
    | ಎ.ಎಸ್.ಕಿರಣಕುಮಾರ್, ಇಸ್ರೋ ಮಾಜಿ ಅಧ್ಯಕ್ಷ

    ಮೂವರಿಗೆ ಗೌಡಾ ಪ್ರದಾನ
    ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಪರಿಗಣಿಸಿ ಚಿತ್ರದುರ್ಗದ ಜಿಲ್ಲೆಯ ಬಿ.ಜಿ. ಕೆರೆ ನಿವಾಸಿ ಎಸ್.ಸಿ ವೀರಭದ್ರಪ್ಪ ಅವರಿಗೆ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ವಿಜಯನಗರ ಜಿಲ್ಲೆಯ ಡಾ. ಮಲ್ಲಿಕಾರ್ಜುನ ವಿ ಜಾಲಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಬಳ್ಳಾರಿ ಜಿಲ್ಲೆಯ ಬಹದ್ದೂರ್ ಎಸ್.ಶೇಷಗಿರಿರಾವ್ (ಮರಣೋತ್ತರ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಬಿ.ಎಸ್.ಶೇಷಗಿರಿರಾವ್ ಪರವಾಗಿ ಅವರ ಪುತ್ರ ಮುರಳೀಧರರಾವ್ ಪ್ರಶಸ್ತಿ ಸ್ವೀಕರಿಸಿದರು. ಈ ವೇಳೆ ಮಲ್ಲಿಕಾರ್ಜುನ ಜಾಲಿ ಅವರು ಗೈರಾಗಿದ್ದರು.

    ಅಕ್ಷಿತಾ ಕುಮಾರಿಗೆ ನಾಲ್ಕು ಚಿನ್ನ
    ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅಕ್ಷಿತಾ ಕುಮಾರಿ ಪಿ. ನಾಲ್ಕು ಚಿನ್ನದ ಪದಕ, ಉಳಿದಂತೆ ಖನಿಜ ಸಂಸ್ಕರಣದ ವಿದ್ಯಾರ್ಥಿ ಹೇಮಂತ ಟಿ.ಎಲ್, ಬಳ್ಳಾರಿಯ ವಿಎಸ್‌ಕೆ ವಿವಿ ಔದ್ಯೋಗಿಕ ರಸಾಯನ ಶಾಸ್ತ್ರದ ವಿದ್ಯಾರ್ಥಿನಿ ಪ್ರೀತಿ ಆರ್ ಇಬ್ಬರು ತಲಾ ಮೂರು ಪದಕ ಪಡೆದರು. ಹಫ್ಸಾ ನೂರೈನ್ (ಇಂಗ್ಲಿಷ್), ಶಮಾಪರ್ವಿನ್ ಹುಲಿಗಿ (ರಸಾಯನಶಾಸ್ತ್ರ), ಅರುಣ್ ಕುಮಾರ್ ಎಸ್.ಎಂ, (ಭೌತಶಾಸ್ತ್ರ), ಮೌಲಮ್ಮ (ಇತಿಹಾಸ) ಹಾಗೂ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಆರ್.ಸುಚಿತ್ರಾ (ಸಮಾಜಕಾರ್ಯ) ವಿಭಾಗದಲ್ಲಿ ತಲಾ ಎರಡು ಚಿನ್ನದ ಪದಕ ಸ್ವೀಕರಿಸಿದರು. ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 60 ಚಿನ್ನದ ಪದಕಗಳ ಪೈಕಿ ಒಟ್ಟು 48 ವಿದ್ಯಾರ್ಥಿಗಳು ಚಿನ್ನದ ಪದಕ ನೀಡಲಾಯಿತು. ವಿವಿಧ ವಿಭಾಗಗಳ ಒಟ್ಟು 17 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪಡೆದುಕೊಂಡರು. ಎಲ್ಲ ವಿಭಾಗಗಳ ಸ್ನಾತಕ ಪದವಿಯ 63 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 73 ಒಟ್ಟು 136 ವಿದ್ಯಾರ್ಥಿಗಳು ರ‌್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆದರು. ಒಟ್ಟು 11687 ಸ್ನಾತಕ ಪದವಿ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 1862 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts