More

    ಬೆಳಗಾವಿಯಲ್ಲಿ ಅಚ್ಚರಿಯ ಫಲಿತಾಂಶ.! ಕುಂದಾ ಕುರದಂಟಿನ ನಾಡಿಮಿತ ಶನಿವಾರ ಬಹಿರಂಗ

    ರವಿ ಗೋಸಾವಿ ಬೆಳಗಾವಿ
    ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ರಚನೆ ಹಾಗೂ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಬೆಳಗಾವಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿನ ಸೋಲು-ಗೆಲುವಿನ ಲೆಕ್ಕಾಚಾರ ಇದೀಗ ಗಡಿ ಜಿಲ್ಲೆಗಷ್ಟೇ ಸೀಮಿತವಾಗಿಲ್ಲ. ಸಮೀಕ್ಷೆಗಳ ಅತಂತ್ರ ಫಲಿತಾಂಶದ ಛಾಯೆಯ ನಡುವೆಯೂ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ದೊಡ್ಡ ಅಂತರದ ಗೆಲುವು ಯಾವ ಪಕ್ಷಕ್ಕೂ ಸುಲಭವಿಲ್ಲ ಎಂಬ ಅಚ್ಚರಿ ಫಲಿತಾಂಶದ ನಿರೀಕ್ಷೆ ಮತ್ತಷ್ಟೂ ಕುತೂಹಲ ಮೂಡಿಸಿದೆ.
     ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಬಹುತೇಕರು ಗುರುವಾರ, ಶುಕ್ರವಾರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಂತೆ ಕಂಡರೂ, ಅಭ್ಯರ್ಥಿಗಳ ಮನದಲ್ಲಿ ಗೆಲುವಿನ ಲೆಕ್ಕಾಚಾರಗಳ ಮಂಥನವೇ ನಡೆದಿತ್ತು. ಕಾರ್ಯಕರ್ತರು ತಮ್ಮ ನಾಯಕನ ಗೆಲುವಿಗಾಗಿ ದೇವರ ಪ್ರಾರ್ಥನೆ ಮೊರಹೋಗಿದ್ದು, ಈ ಬಾರಿ ಹೆಚ್ಚು ಸದ್ದು ಮಾಡಿದ್ದ ಭಜರಂಗದಳ ನಿಷೇಧದ ಹೊಗೆ ಇನ್ನೂ ಆಡುತ್ತಿದ್ದು, ಮತ ಎಣಿಕೆ ನಡೆಯುವ ಶನಿವಾರ (ಬಜರಂಗಬಲಿ ವಾರ) ಯಾರಿಗೆ ವರವಾಗಲಿದೆ ಎಂದು ಚರ್ಚಿಸುತ್ತಿದ್ದಾರೆ. ಆದರೆ, ಮತಾಧಿಕಾರಿಗಳ ಮನದಾಳ ಮಾತ್ರ ಯಾರ ಊಹೆಗೂ ನಿಲುಕುತ್ತಿಲ್ಲ.
    ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರ ಮಾತ್ರವಲ್ಲ,  ಜಿಲ್ಲೆಯಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಲಿದೆ? ಪಕ್ಷಗಳ ಸಂಖ್ಯಾ ಬಲ ಏನಾಗಲಿದೆ? ಎಂಬ ಚರ್ಚೆಯ ಬಿಸಿ ಪಕ್ಷದ ಕಚೇರಿಗಳಲ್ಲಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕದ ಮನೆ ಮನೆಗೂ ತಟ್ಟಿದೆ. 2018ರ ಸಾರ್ವತ್ರಿಕ ವಿಧಾನ ಸಭೆ ಚುನಾವನೆಯಲ್ಲಿ ಬಿಜೆಪಿ 11 ಸ್ಥಾನ ಗೆದ್ದು ಪ್ರಾಬಲ್ಯ ಮೆರೆದರೆ, ಕಾಂಗ್ರೆಸ್ 7 ಸ್ಥಾನ ಗಳಿಸಿತ್ತು. ಕೆಲವೇ ತಿಂಗಳಲ್ಲಿ ಬದಲಾದ ರಾಜಕೀಯದಿಂದ 2019ರಲ್ಲಿ ಗೋಕಾಕ ಹಾಗೂ ಅಥಣಿ ಉಪಚುನಾವಣೆ ನಡೆದು, ಕಾಂಗ್ರೆಸ್ ಎರಡು ಸ್ಥಾನಗಳನ್ನು ಕಳೆದುಕೊಂಡು 5ಕ್ಕೆ ಕುಸಿದು, ಬಿಜೆಪಿ 13 ಸ್ಥಾನಕ್ಕೆ ಏರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಲ್ಲಿ ಪಾತ್ರವಹಿಸಿತ್ತು.  ಈ ಬಾರಿ ಜಿಲ್ಲೆಯಲ್ಲಿ ಯಾವ ಪಕ್ಷ ಪಾರಮ್ಯ ಸಾಧಿಸಲಿದೆ ಎನ್ನುವುದು ಸದ್ಯದ ಕುತೂಹಲ.
    ಹಿಂದೆಂದಿಗಿಂತಲೂ ಹೆಚ್ಚು ಜಿದ್ದಾಜಿದ್ದಿನಿಂದ ಕೂಡಿದ್ದ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಹೆಚ್ಚಿನ ಅಭ್ಯರ್ಥಿಗಳು ತಮ್ಮ ಗೆಲುವು ಖಚಿತ ಎಂದು ಹೇಳಿಕೊಳ್ಳಲು ಸಾಧ್ಯವಾಗದಷ್ಟು ಮತದಾರ ಗೌಪ್ಯತೆ ಕಾಪಾಡಿಕೊಂಡಿರುವುದು ಈ ಬಾರಿಯ ವಿಶೇಷವಾಗಿದೆ. ಆದರೆ, ಎಲ್ಲ ಅಭ್ಯರ್ಥಿಗಳು ‘ತಮ್ಮದೇ ಗೆಲುವು ಖಚಿತ, ಅಂತರ ಕಡಿಮೆಯಾಗಬಹುದು’ ಎಂದು ಸ್ವತಃ ಹೇಳುತ್ತಲೇ ಮತದಾನೋತ್ತರ ಸಮೀಕ್ಷೆಗಳ ವರದಿ ಹಾಗೂ ಬೆಂಬಲಿಗರು, ಕಾರ್ಯಕರ್ತರ ಬೂತ್‌ಮಟ್ಟದ ಮತಬೇಟೆಯ ಅಂದಾಜು ಅಂಕಿ-ಅಂಶಗಳ ಜತೆ ತಾಳೆ ಹಾಕಿ ತಾಳ್ಮೆಯಿಂದಲೇ ಫಲಿತಾಂಶ ಎದುರು ನೋಡುತ್ತಿದ್ದಾರೆ.
    —–
    ಗೆಲುವಿನ ದಡ ತಲುಪುವ ಚರ್ಚೆ:
    ಗ್ರಾಮೀಣ ಪ್ರದೇಶದ ಕಿರಾಣಿ ಅಂಗಡಿ, ಚಹಾ ಅಂಗಡಿ, ಪ್ರಮುಖ ಬೀದಿ, ದೇವಸ್ಥಾನಗಳ ಆವರಣದಲ್ಲಿ ಐದಾರು ಜನ ರಾಜಕೀಯಾಸಕ್ತರು ಸೇರಿದರೆ ಸಾಕು. ತಮ್ಮ ತಮ್ಮ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಬಹುದು, ಗೆಲುವಿನ ದಡ ಮುಟ್ಟಲು ಇರುವ ಸಾಧ್ಯತೆಗಳ ಬಗ್ಗೆಯೇ ಚರ್ಚೆ ನಡೆಸುತ್ತಿದ್ದಾರೆ. ತಮ್ಮ ಅಭ್ಯರ್ಥಿ ಇಷ್ಟು ಮತಗಳ ಅಂತರದಿಂದ ಗೆಲ್ಲುತ್ತಾನೆ. ‘ನಮಗೆ ಈ ಸಮುದಾಯದ ಬೆಂಬಲವಿತ್ತು. ಅವರಿಗೆ ಅದು ಮೈನಸ್ ಆಗಿದೆ’ ಎನ್ನುವ ಒಬ್ಬೊಬ್ಬರಿಂದಲೂ ಒಂದೊಂದು ವಿಶ್ಲೇಷಣೆ ಕೇಳಿಬರುತ್ತಿದೆ.

    ಬೆಳಗಾವಿಯಲ್ಲಿ ಅಚ್ಚರಿಯ ಫಲಿತಾಂಶ.! ಕುಂದಾ ಕುರದಂಟಿನ ನಾಡಿಮಿತ ಶನಿವಾರ ಬಹಿರಂಗ
    ಬೆಳಗಾವಿಯ ಆರ್.ಪಿ.ಡಿ ಮಹಾವಿದ್ಯಾಲಯದಲ್ಲಿನ ಮತ ಎಣಿಕೆ ಕೇಂದ್ರದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.

    ಬೆಳಗಾವಿಯ ಆರ್‌ಪಿಡಿ ಕಾಲೇಜಿನಲ್ಲಿ ಶನಿವಾರ ಬೆಳಗ್ಗೆಯಿಂದಲೇ ಮತ ಎಣಿಕೆ ಆರಂಭಗೊಳ್ಳಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಸುಮಾರು 20-23 ಸುತ್ತು ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ತಿಳಿಯಲಿದೆ. ಮತ ಎಣಿಕೆ ಪ್ರಕ್ರಿಯೆ ಮೇಲೆ ಕ್ಯಾಮರಾ ಕಣ್ಗಾವಲು ಇಡಲಾಗುತ್ತಿದ್ದು, ಎಲ್ಲವೂ ರೆಕಾರ್ಡ್ ಆಗಲಿದೆ.  

    ನಿತೇಶ ಪಾಟೀಲ, ಜಿಲ್ಲಾ ಚುನಾವಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts