More

    ಬೆಳಗಾವಿ ಜಿಲ್ಲೆಯಲ್ಲಿ ಸ್ವಂತ ಸೂರಿಲ್ಲದ 1652 ಅಂಗನವಾಡಿ!

    ಬೆಳಗಾವಿ: ಜಿಲ್ಲೆಯ ಸುಮಾರು 1,652 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರಿಲ್ಲದ ಕಾರಣ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹಲವು ವರ್ಷಗಳಿಂದ ಪ್ರತಿ ತಿಂಗಳು ಲಕ್ಷಾಂತರ ರೂ. ಬಾಡಿಗೆ ವ್ಯಯಿಸುತ್ತಿದೆ.

    ಜಿಲ್ಲೆಯಲ್ಲಿ 5,545 ಅಂಗನವಾಡಿ ಕೇಂದ್ರಗಳ ಪೈಕಿ 3,893 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ. 1,652 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇಲ್ಲಿ ಸರಿಯಾದ ಸವಲತ್ತುಗಳು ಇವೆಯೋ ಇಲ್ಲವೋ? ಆದರೆ, ಬಾಡಿಗೆ ಮಾತ್ರ ಪ್ರತಿ ತಿಂಗಳು ಸಂದಾಯವಾಗುತ್ತಿದೆ. ಬೆಳಗಾವಿ ನಗರ ಪ್ರದೇಶದಲ್ಲಷ್ಟೇ 323 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ಈ ಕಟ್ಟಡಗಳಿಗಷ್ಟೇ ಪ್ರತಿ ತಿಂಗಳು ಬಾಡಿಗೆಗಾಗಿ 20 ಲಕ್ಷಕ್ಕೂ ಅಧಿಕ ಹಣ ವ್ಯಯಿಸಲಾಗುತ್ತಿದೆ.

    ಗ್ರಾಮೀಣ ಪ್ರದೇಶದಲ್ಲಿ ಕೆಲವು ಕಟ್ಟಡಗಳು ಗ್ರಾಮ ಪಂಚಾಯಿತಿ, ಸಮುದಾಯ ಭವನ, ಯುವಕ ಮಂಡಳ ಹಾಗೂ ಶಾಲಾ ಆವಣರದಲ್ಲಿ ವಿನಂತಿ ಮೇರೆಗೆ ಬಾಡಿಗೆ ರಹಿತವಾಗಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಬಾಡಿಗೆ ದರಗಳು ಭಿನ್ನವಾಗಿವೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡಕ್ಕೆ 6 ಸಾವಿರ ರೂ. ದರವಿದೆ. ನಗರ ಪ್ರದೇಶದಲ್ಲಿ 4 ಸಾವಿರ ರೂ. ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಬೆಳಗಾವಿ ನಗರ ಪ್ರದೇಶದ 353 ಅಂಗನವಾಡಿ ಕೇಂದ್ರಗಳ ಪೈಕಿ 323 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ.

    ಈ ಕಟ್ಟಡಗಳಿಗೆ ತಾಪಂ ಮೂಲಕ ಪ್ರತಿ ತಿಂಗಳು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ತಲಾ 6 ಸಾವಿರ ರೂ. ನಂತೆ ಬಾಡಿಗೆ ಭರಿಸುತ್ತಿದ್ದಾರೆ.
    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸ್ವಂತ ಜಾಗದ ಕೊರತೆ ಇದೆ. ಸ್ವಂತ ಜಾಗವಿದ್ದರೆ ಕಟ್ಟಡ ಕಟ್ಟುವುದಕ್ಕೆ ಸರ್ಕಾರದಿಂದ ಅನುದಾನ ಬರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಸಿಕ್ಕರೂ ನಗರ ಪ್ರದೇಶದಲ್ಲಿ ಜಾಗ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಅಧಿಕಾರಿಗಳಿಗೆ ನಿವೇಶನ ಹುಡುಕುವುದೇ ಸಮಸ್ಯೆಯಾಗಿದೆ. ಅಧಿಕಾರಿಗಳು ಸರ್ಕಾರಿ ಜಾಗವನ್ನೇ ನೆಚ್ಚಿ ಕುಳಿತಿದ್ದರಿಂದ ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು ನಿರ್ಮಿಸಲಾಗುತ್ತಿಲ್ಲ. ಪ್ರತಿವರ್ಷ ಸ್ವಂತ ಕಟ್ಟಡಗಳನ್ನು ಹೊಂದುವ ಕನಸು ಕಾಣುತ್ತಾರೆ ಹೊರತು ಅದಕ್ಕೆ ಅಗತ್ಯವಾಗಿರುವ ನಿವೇಶನವನ್ನು ಮಾತ್ರ ಹುಡುಕುತ್ತಿಲ್ಲ. ಇತ್ತ ಬಾಡಿಗೆ ಕಟ್ಟುವುದೂ ನಿಲ್ಲುತ್ತಿಲ್ಲ.

    ಕೆಲವೆಡೆ ರೆಂಟ್ ರಹಿತ ತಾತ್ಕಾಲಿಕ ವ್ಯವಸ್ಥೆ

    ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಕಟ್ಟಡದಲ್ಲಿ ಬಾಡಿಗೆ ರಹಿತವಾಗಿ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಪೈಕಿ ಗ್ರಾಮ ಪಂಚಾಯಿತಿಗಳಲ್ಲಿ 137, ಸಮುದಾಯ ಭವನದಲ್ಲಿ 208, ಯುವಕ ಮಂಡಳದಲ್ಲಿ 7, ಮಹಿಳಾ ಮಂಡಳದಲ್ಲಿ 6 ಹಾಗೂ ಶಾಲಾ ಕಟ್ಟಡದಲ್ಲಿ 307 ಅಂಗನವಾಡಿ ಕೇಂದ್ರಗಳು ಅಧಿಕಾರಿಗಳ ವಿನಂತಿ ಮೇರೆಗೆ ಆಶ್ರಯ ಪಡೆದಿವೆ. ಇದು ತಾತ್ಕಾಲಿಕ ಮಾತ್ರ.

    ಜಿಲ್ಲೆಯಲ್ಲಿ 1200ಕ್ಕೂ ಅಧಿಕ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಲಕ್ಷ್ಮೀ ಹೆಬ್ಬಾಳ್ಕರ್ ಇಲಾಖೆಯ ಸಚಿವರಾದ ತಕ್ಷಣ ಅಂಗನವಾಡಿ ಕೇಂದ್ರಗಳಿಗೆ 650 ಕಡೆ ಜಾಗ ಕಲ್ಪಿಸಿಕೊಟ್ಟಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಸೂರು ಕಲ್ಪಿಸುವುದಕ್ಕೆ ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಅವರು ಸ್ವಂತ ಕಟ್ಟಡ ಕಲ್ಪಿಸುವುದಕ್ಕೆ ಕಾರ್ಯಪ್ರವೃತ್ತರಾಗಿದ್ದಾರೆ.
    | ನಾಗರಾಜ ಆರ್. ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts