More

    ಬೆಳಗಾವಿ ಪಾಲಿಕೆಗಿಲ್ಲ ಮೇಯರ್!

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ವಾರ್ಡ್ ಮೀಸಲಾತಿ ಕಗ್ಗಂಟು, ರಾಜಕೀಯ ಕಾರಣಗಳಿಂದ ವರ್ಷ ಕಳೆದರೂ ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿಲ್ಲ. ಚುನಾಯಿತ ಸದಸ್ಯರ ಅಧಿಕಾರದ ಅವಧಿ (ಐದು ವರ್ಷ) ಪೂರ್ಣಗೊಂಡು ಮಾರ್ಚ್ 10ಕ್ಕೆ ಒಂದು ವರ್ಷ ಕಳೆಯಲಿದೆ. ಅತ್ತ ಮೇಯರ್ ಇಲ್ಲದೆ ಆಡಳಿತಾತ್ಮಕ ಚಟುವಟಿಕೆಗಳಿಗೆ ಸಮಸ್ಯೆಯಾಗುತ್ತಿದೆ. ಇತ್ತ ವಾರ್ಡ್‌ಗಳಿಗೆ ಚುನಾಯಿತ ಸದಸ್ಯರಿಲ್ಲದೆ ಅನುದಾನದ ಸದ್ಬಳಕೆ ಆಗುತ್ತಿಲ್ಲ ಎನ್ನುವುದು ಮಾಜಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    2014ರ ಮಾರ್ಚ್ 10ರಂದು ಅಸ್ತಿತ್ವಕ್ಕೆ ಬಂದಿದ್ದ ಸದಸ್ಯರ ಅಧಿಕಾರದ ಅವಧಿ 2019ರ ಮಾರ್ಚ್ 10ಕ್ಕೆ ಪೂರ್ಣಗೊಂಡಿತ್ತು. ಇದೀಗ ಚುನಾಯಿತ ಸದಸ್ಯರಿಲ್ಲದ ಕಾರಣ ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ಅವರನ್ನು ಸರ್ಕಾರ ಪಾಲಿಕೆಗೆ ಆಡಳಿತಾಧಿಕಾರಿಯಾಗಿ ನೇಮಿಸಿದೆ.

    ಮೀಸಲಾತಿ ಕಗ್ಗಂಟು: 2014ರಲ್ಲಿ ಪಾಲಿಕೆಗೆ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ 58 ಸದಸ್ಯರಲ್ಲಿ 32 ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ಬೆಂಬಲಿತ ಸದಸ್ಯರು ಹಾಗೂ ಇತರ (ಕನ್ನಡ ಮತ್ತು ಉರ್ದು ಭಾಷಿಕರು) 26 ಸದಸ್ಯರು ಆಯ್ಕೆಯಾಗಿದ್ದರು. ಎಂಇಎಸ್ ಬೆಂಬಲಿತರೇ ನಾಲ್ಕು ಅವಧಿಗೆ ಮೇಯರ್ ಹಾಗೂ ಉಪ ಮೇಯರ್ ಆಗಿದ್ದರು. ಬಳಿಕ ಮೀಸಲಾತಿ ಬಲದಿಂದಾಗಿ ಕೊನೆಯ ಅವಧಿಯಲ್ಲಿ ಕನ್ನಡ ಭಾಷಿಕ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರಿಗೆ ಮೇಯರ್ ಪಟ್ಟ ಒಲಿದಿತ್ತು. ಆ ಬಳಿಕ ಚುನಾವಣೆ ನಡೆದಿಲ್ಲ. ಹೀಗಾಗಿ ಮಾಜಿಗಳು ಹಾಗೂ ಹೊಸ ಆಕಾಂಕ್ಷಿಗಳು ಚುನಾವಣೆಗಾಗಿ ಕಾಯುತ್ತಿದ್ದಾರೆ. ಸ್ಥಳೀಯವಾಗಿ ಸಿದ್ಧತೆಯಲ್ಲೂ ತೊಡಗಿದ್ದಾರೆ. ಯಾವ ವಾರ್ಡ್ ಯಾವ ವರ್ಗಕ್ಕೆ ಮೀಸಲಾಗಿದೆಯೋ ಎಂಬ ಚಿಂತೆ ಅವರಿಗೆ ಬಾಧಿಸುತ್ತಿದೆ.

    ಅಧಿಕಾರಿಗಳ ಕಾರುಬಾರು: ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ನಡೆಯುತ್ತಿರುವ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿ, ನೀರು ಪೂರೈಕೆ, ಬೀದಿ ದೀಪ ನಿರ್ವಹಣೆ ಮೊದಲಾದ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಚುನಾಯಿತ ಜನಪ್ರತಿನಿಧಿಗಳು ಜನರೊಂದಿಗೆ ನೇರ ಸಂಪರ್ಕ ಹೊಂದಿರುತ್ತಾರೆ. ಅವರು ಇಂತಹ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸುತ್ತಾರೆ. ಆದರೀಗ, ಜನರು ಎಲ್ಲದಕ್ಕೂ ಅಧಿಕಾರಿಗಳ ಬಳಿಗೇ ಹೋಗಬೇಕಾಗಿದೆ. 2019 ಸಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಸಂಭವಿಸಿದ ಬಳ್ಳಾರಿ ನಾಲಾ ಪ್ರವಾಹ ಮತ್ತು ಧಾರಾಕಾರ ಮಳೆಯಿಂದ ಕೋಟ್ಯಂತರ ರೂ. ಹಾನಿ ಉಂಟಾಗಿದ್ದರೂ ಸಂತ್ರಸ್ತರಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಮಹಾತ್ಮ ಗಾಂಧಿ ವಿಕಾಸ ಯೋಜನೆ, ನಗರೋತ್ಥಾನ ಯೋಜನೆ ಸೇರಿ ವಿವಿಧ ಯೋಜನೆಗಳಲ್ಲಿ ಸುಮಾರು 150 ಕೋಟಿ ರೂ. ಅನುದಾನ ಬಂದಿದೆ. ಆದರೆ, ಕ್ರಿಯಾ ಯೋಜನೆಗೆ ಅನುಮೋದನೆ ಸಿಗದೆ 6 ತಿಂಗಳಿಂದ ಕಾಮಗಾರಿ ಕೈಗೊಂಡಿಲ್ಲ ಎಂದು ಪಾಲಿಕೆ ಮಾಜಿ ಸದಸ್ಯರು ದೂರಿದ್ದಾರೆ.

    ಚುನಾವಣೆ ವಿಳಂಬಕ್ಕೆ ಶಾಸಕರು ಕಾರಣ?

    ಮಹಾನಗರ ಪಾಲಿಕೆಯ ವ್ಯಾಪ್ತಿಯ 58 ವಾರ್ಡ್‌ಗಳಿಗೆ ಮೂಲಸೌಕರ್ಯ ಕಲ್ಪಿಸುವ 120 ಕೋಟಿ ರೂ. ವೆಚ್ಚದ ಕಾಮಗಾರಿ ಹಾಗೂ ಜಲಮಂಡಳಿಯ ನೂರಾರು ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಹಾಗಾಗಿ ಈ ಕಾಮಗಾರಿಗಳಿಗೆ ಟೆಂಡರ್ ಪೂರ್ಣಗೊಳ್ಳುವವರೆಗೆ ಮತ್ತು ಇನ್ನಿತರ ಯೋಜನೆ ಅನುಮೋದನೆಗಾಗಿ ಶಾಸಕರು ಉದ್ದೇಶಪೂರ್ವಕವಾಗಿ ಪಾಲಿಕೆಗೆ ಚುನಾವಣೆ ಘೋಷಣೆಗೆ ವಿಳಂಬ ಮಾಡಿಸುತ್ತಿದ್ದಾರೆ. ಒಂದು ವೇಳೆ ಪಾಲಿಕೆಗೆ ಚುನಾಯಿತ ಸದಸ್ಯರು ಬಂದರೆ ನಮ್ಮ ಅಧಿಕಾರ ಮೊಟಕುಗೊಳ್ಳುತ್ತದೆ ಎಂಬ ಕಾರಣಕ್ಕೆ ಶಾಸಕರು ಪಾಲಿಕೆ ಆಡಳಿತಾಧಿಕಾರಿ ಮುಂದಿಟ್ಟುಕೊಂಡು ಕೆಲಸ ಮಾಡಿಸುತ್ತಿದ್ದಾರೆ ಎಂದು ಪಾಲಿಕೆ ಮಾಜಿ ಸದಸ್ಯರು ದೂರಿದ್ದಾರೆ.

    ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳ ಮೀಸಲಾತಿ ಸಮಸ್ಯೆ ಸರ್ಕಾರದ ಮಟ್ಟದಲ್ಲಿರುವ ಹಿನ್ನೆಲೆಯಲ್ಲಿ ಚುನಾವಣೆ ಘೋಷಣೆ ಬಗ್ಗೆ ಮಾಹಿತಿ ಇಲ್ಲ. ಸದ್ಯ ಮಹಾನಗರ ಪಾಲಿಕೆಯಿಂದ ನಗರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ.
    | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ ಮತ್ತು ಮಹಾನಗರ ಪಾಲಿಕೆ ಆಡಳಿತಾಧಿಕಾರಿ

    ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಿದರೆ ತಕ್ಷಣದಿಂದಲೇ ಪಾಲಿಕೆಗೆ ಚುನಾವಣೆ ಘೋಷಣೆ ಆಗುತ್ತದೆ. ಆದರೆ, ಯಾವ ಕಾರಣಕ್ಕೆ ಸರ್ಕಾರ ವಿಳಂಬ ಮಾಡುತ್ತಿದೆ ಎಂಬುದು ಗೊತ್ತಿಲ್ಲ. ವರ್ಷ ಕಳೆದರೂ ಪಾಲಿಕೆಗೆ ಚುನಾವಣೆ ಘೋಷಣೆ ಆಗಿಲ್ಲ.
    | ರಮೇಶ ಸೊಂಟಕ್ಕಿ ಮಾಜಿ ಸದಸ್ಯ, ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts