More

    ಗರಿಗೆದರಿದ ರಾಜಕೀಯ ಚಟುವಟಿಕೆ; ಬೆಳಗಾವಿ ಲೋಕಸಭಾ ಕ್ಷೇತ್ರದ ಚಿತ್ರಣ..

    ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರ, ಬಿ.ನಾರಾಯಣರಾವ್ ಅಗಲಿಕೆಯಿಂದಾಗಿ ಬಸವಕಲ್ಯಾಣ ಹಾಗೂ ಪ್ರತಾಪಗೌಡ ಪಾಟೀಲ್ ರಾಜೀನಾಮೆಯಿಂದ ಖಾಲಿ ಇರುವ ಮಸ್ಕಿ ವಿಧಾನಸಭಾ ಕ್ಷೇತ್ರಗಳಿಗೆ ಯಾವುದೇ ಕ್ಷಣದಲ್ಲೂ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಬಹುದು. ಮೂರೂ ಕ್ಷೇತ್ರಗಳಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಟಿಕೆಟ್​ಗಾಗಿ ಅಭ್ಯರ್ಥಿಗಳ ಕಸರತ್ತು, ಕ್ಷೇತ್ರಗಳಲ್ಲಿನ ಸದ್ಯದ ಚಿತ್ರಣವನ್ನು ‘ವಿಜಯವಾಣಿ’ ನಿಮ್ಮ ಮುಂದಿಟ್ಟಿದೆ.

    ಬೆಳಗಾವಿಯಲ್ಲಿ ಬಿಜೆಪಿ ಬಲಿಷ್ಠ, ಕಾಂಗ್ರೆಸ್​ಗೆ ಕಷ್ಟ

    | ವಿಜಯವಾಣಿ ವಿಶೇಷ ಬೆಳಗಾವಿ

    ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ್ ಅಂಗಡಿ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಎದುರಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧತೆ ಆರಂಭಿಸಿವೆ. ಆದರೆ ಎರಡೂ ಪಕ್ಷಗಳು ಇನ್ನೂ ಅಭ್ಯರ್ಥಿ ಘೊಷಣೆ ಮಾಡಿಲ್ಲ.

    ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಈಗಾಗಲೇ ಜಿಲ್ಲೆಯ ಅರಬಾವಿ, ಗೋಕಾಕ, ಸವದತ್ತಿ, ರಾಮದುರ್ಗ, ಬೈಲಹೊಂಗಲ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೂತ್ ಮಟ್ಟದಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಮಹಿಳೆ ಮತ್ತು ಪುರುಷರು ಸೇರಿ ಒಟ್ಟು 16.18 ಲಕ್ಷ ಮತದಾರರಿದ್ದಾರೆ.

    ಟಿಕೆಟ್ ಯಾರಿಗೆಂಬ ಕುತೂಹಲ: ಕ್ಷೇತ್ರದಲ್ಲಿ ಬಿಜೆಪಿಗೆ ಬಲಿಷ್ಠ ಕಾರ್ಯಕರ್ತರ ಪಡೆ ಇದ್ದು, ಗೆಲುವಿನ ವಾತಾವರಣ ನಿರ್ಮಾಣ ಗೊಂಡಿದೆ. ದಿ.ಸುರೇಶ್ ಅಂಗಡಿ ಕುಟುಂಬ ಸದಸ್ಯರಿಗೇ ಟಿಕೆಟ್ ಹಾಗೂ ಅವರ ಕುಟುಂಬಕ್ಕೆ ಟಿಕೆಟ್ ಅನುಮಾನ ಎಂಬ ಎರಡೂ ಬಗೆಯ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ವೈದ್ಯರು, ವಕೀಲರು ಮತ್ತು ಮಾಜಿ ಶಾಸಕರು ಟಿಕೆಟ್​ಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಪಕ್ಷದ ನಾಯಕರು ಇಲ್ಲಿಯವರೆಗೆ ಅಭ್ಯರ್ಥಿ ಹೆಸರು ಅಂತಿಮಗೊಳಿಸಿಲ್ಲ. ಇತ್ತೀಚೆಗೆ ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ನೀಡಿದ್ದರಾದರೂ ಅಭ್ಯರ್ಥಿ ಕುರಿತು ಪ್ರಸ್ತಾಪ ಮಾಡಲಿಲ್ಲ. ಈ ಮಧ್ಯೆ ದಿ.ಸುರೇಶ್ ಅಂಗಡಿ ಪುತ್ರಿ ಹಾಗೂ ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ಕೆಎಲ್​ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

    ಒಗ್ಗಟ್ಟಾದರೆ ಕಾಂಗ್ರೆಸ್​ಗೆ ಗೆಲುವು: ಕ್ಷೇತ್ರದ ಕೆಲ ಭಾಗಗಳಲ್ಲಿ ಕಾಂಗ್ರೆಸ್ ಹಿಡಿತ ಹೊಂದಿದೆ. ಅಲ್ಲದೆ, ಅಹಿಂದ ವರ್ಗದ ಮತಗಳು ಬೆನ್ನಿಗಿವೆ. ಆದರೆ, ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ಕಿತ್ತಾಟ, ಹೊಂದಾಣಿಕೆ ರಾಜಕಾರಣದಿಂದಾಗಿ ಪಕ್ಷ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಉಪ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಇವರಲ್ಲಿ ಒಬ್ಬರು ಸ್ಪರ್ಧಿಸಿದರೆ ಗೆಲುವು ನಿರೀಕ್ಷಿಸಬಹುದು. ಕಾಂಗ್ರೆಸ್ ‘ಒಳ ಏಟಿನ ಮರ್ಮ’ ಅರಿತಿರುವ ಈ ಇಬ್ಬರೂ ನಾಯಕರು ಸ್ಪರ್ಧೆಗೆ ಹಿಂದೇಟು ಹಾಕಿದ್ದಾರೆ. ಇದು ಬಿಜೆಪಿ ಗೆಲುವಿನ ದಾರಿ ಸುಗಮಗೊಳಿಸಿದಂತಾಗಿದೆ.

    ಹಸ್ತ ಪಡೆಯಲ್ಲಿ 12 ಆಕಾಂಕ್ಷಿಗಳು: ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಮಾಜಿ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿ ಬೆಳಗಾವಿಯಲ್ಲಿ ಹಲವು ಬಾರಿ ಸಭೆ ನಡೆಸಿದೆ. ಪಕ್ಷದಿಂದ 15 ಆಕಾಂಕ್ಷಿಗಳ ಪಟ್ಟಿಯನ್ನು ಕೆಪಿಸಿಸಿ ಕಚೇರಿಗೆ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹಾಗೂ ಉದ್ಯಮಿ ಚನ್ನರಾಜ ಹಟ್ಟಿಹೋಳಿ ಹೆಸರನ್ನು ಹೈಕಮಾಂಡ್​ಗೆ ಕಳುಹಿಸಲಾಗಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

    ಭಾಜಪ ಬಿಗಿಹಿಡಿತ: ಕ್ಷೇತ್ರದ ವ್ಯಾಪ್ತಿಯಲ್ಲಿ ಅರಬಾವಿ, ಗೋಕಾಕ, ಸವದತ್ತಿ, ರಾಮದುರ್ಗ, ಬೈಲಹೊಂಗಲ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಅದರಲ್ಲಿ ಬಿಜೆಪಿಯ ಆರು, ಕಾಂಗ್ರೆಸ್​ನ ಇಬ್ಬರು ಶಾಸಕರಿದ್ದಾರೆ. ಹಾಗಾಗಿ ಸುರೇಶ್ ಅಂಗಡಿ ನಿಧನದಿಂದ ಸೃಷ್ಟಿಯಾಗಿರುವ ಅನುಕಂಪದ ಅಲೆ ಹಾಗೂ ಬಲಿಷ್ಠ ಕಾರ್ಯಕರ್ತರ ಪಡೆ ಹೊಂದಿರುವುದರಿಂದ ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಮಸ್ಕಿಯಲ್ಲಿ ಕದನ ಕೌತುಕ

    ಗರಿಗೆದರಿದ ರಾಜಕೀಯ ಚಟುವಟಿಕೆ; ಬೆಳಗಾವಿ ಲೋಕಸಭಾ ಕ್ಷೇತ್ರದ ಚಿತ್ರಣ..
    ಪ್ರತಾಪಗೌಡ ಪಾಟೀಲ್​, ಬಸನಗೌಡ

    | ಶಿವಮೂರ್ತಿ ಹಿರೇಮಠ ರಾಯಚೂರು

    ಮಸ್ಕಿ ವಿಧಾನಸಭಾ ಉಪಕದನ ಸ್ಥಳೀಯರಲ್ಲೂ ಕೌತುಕ ಹೆಚ್ಚಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ನಡೆಯಲಿದ್ದು, ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿಯುವ ಲಕ್ಷಣ ಗೋಚರಿಸಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಅಲ್ಪಮತ (213)ಗಳಿಂದ ಜಯಸಾಧಿಸಿದ್ದ ಪ್ರತಾಪಗೌಡ ಪಾಟೀಲ್ ಒಂದೂವರೆ ವರ್ಷದ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಸೇರಿದ್ದರು. ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಬಸನಗೌಡ ತುರವಿಹಾಳ, ಈಗ ಕಾಂಗ್ರೆಸ್ ಸೇರಿದ್ದಾರೆ. ಇವರಿಬ್ಬರೂ ಉಪ ಚುನಾವಣೆಯಲ್ಲಿ ನೇರಾನೇರ ಮುಖಾಮುಖಿಯಾಗಲಿದ್ದಾರೆ. ಇಬ್ಬರೂ ಕ್ಷೇತ್ರಾದ್ಯಂತ ಓಡಾಟ ನಡೆಸುತ್ತಿದ್ದಾರೆ. ಬಸನಗೌಡರ ಪಕ್ಷ ಸೇರ್ಪಡೆ ಕಾರ್ಯಕ್ರಮ ಭರ್ಜರಿಯಾಗಿ ನಡೆಸುವ ಮೂಲಕ ಕಾಂಗ್ರೆಸ್ ತನ್ನ ಬಲ ಪ್ರದರ್ಶನ ಮಾಡಿದೆ. ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿ ಪಕ್ಷದ ಘಟಾನುಘಟಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರತಾಪಗೌಡ ವಿರುದ್ಧ ವಾಗ್ದಾಳಿ ನಡೆಸಿದ್ದರು. ಶಾಸಕರಾಗಿದ್ದ ಅವಧಿಯಲ್ಲಿ ಜರುಗಿದ ಅಭಿವೃದ್ಧಿ ಕಾರ್ಯಗಳು ಹಾಗೂ ರಾಜೀನಾಮೆ ನೀಡಿದ ನಂತರವೂ ಸರ್ಕಾರದ ಮೇಲೆ ಒತ್ತಡ ಹೇರಿ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ತಂದಿರುವು ದನ್ನು ಮುಂದಿಟ್ಟು ಪ್ರತಾಪಗೌಡ ಪಾಟೀಲ್ ಜನರತ್ತ ಹೋಗುತ್ತಿದ್ದಾರೆ.

    ಪಾಟೀಲ್​ಗೆ ಬಿಜೆಪಿ ಬೆಂಬಲ: 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪ್ರಥಮ ಬಾರಿಗೆ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ್, ಬದಲಾದ ರಾಜಕೀಯ ಸನ್ನಿವೇಶದಲ್ಲಿ 2013ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಎರಡನೇ ಬಾರಿ ಶಾಸಕರಾಗಿದ್ದರು. 2018 ಪುನಃ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಬಿಜೆಪಿಯ ಬಸನಗೌಡ ತುರವಿಹಾಳ ವಿರುದ್ಧ 213 ಮತಗಳ ಅಂತರದಿಂದ ಜಯ ಗಳಿಸಿದ್ದರು. ಆಪರೇಷನ್ ಕಮಲಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದು ಪ್ರತಾಪಗೌಡಗೆ ಉಪ ಚುನಾವಣೆಯಲ್ಲಿ ಬಲ ನೀಡಲಿದೆ. ಜತೆಗೆ ವೈಯಕ್ತಿಕವಾಗಿ ಜನರೊಂದಿಗೆ ಬೆರೆಯುವ ಗುಣ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರದಲ್ಲೂ 200 ಕೋಟಿ ರೂ. ಅನುದಾನ ತಂದಿರುವುದು ಗೆಲುವಿಗೆ ಪೂರಕವಾಗಲಿದೆ.

    ತುರುವಿನಾಳ ಅನುಕಂಪದ ಯತ್ನ: ಕಳೆದ ಚುನಾವಣೆಯಲ್ಲಿ ಕೇವಲ 213 ಮತಗಳಿಂದ ಪರಾಭವಗೊಂಡ ಅನುಕಂಪವನ್ನು ಪಡೆಯಲು ಬಸನಗೌಡ ತುರವಿಹಾಳ ಪ್ರಯತ್ನ ನಡೆಸಿದ್ದಾರೆ. ಉಪ ಚುನಾವಣೆಯನ್ನು ಕಾಂಗ್ರೆಸ್ ನಾಯಕರು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಹಿರಿಯ ನಾಯಕರ ಬೆಂಬಲ ತುರುವಿನಾಳ ಬೆನ್ನ ಹಿಂದಿದೆ. ಆರ್ಥಿಕವಾಗಿ ಸಬಲರಲ್ಲ ಎನ್ನುವ ಮಾತುಗಳಿದ್ದರೂ ಪಕ್ಷದ ನಾಯಕರು ಕೈಹಿಡಿವ ಭರವಸೆ ನೀಡಿದ್ದಾರೆ.

    5ಎ ಕಾಲುವೆ ಜಟಾಪಟಿ: ಕ್ಷೇತ್ರದ 40ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಎನ್​ಆರ್​ಬಿಸಿ 5ಎ ಕಾಲುವೆ ನಿರ್ವಣಕ್ಕಾಗಿ ನಡೆಯುತ್ತಿರುವ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪ್ರತಾಪಗೌಡ ನಂದವಾಡಗಿ ಏತ ನೀರಾವರಿ ಯೋಜನೆ ಮೂಲಕ ಕ್ಷೇತ್ರದ ಹಳ್ಳಿಗಳಿಗೆ ನೀರು ಹರಿಸುವ ವಾಗ್ದಾನ ಮಾಡಿದ್ದರೆ, ಕಾಂಗ್ರೆಸ್ ನಾಯಕರು 5ಎ ಕಾಲುವೆ ಹೋರಾಟವನ್ನು ಬೆಂಬಲಿಸಿದ್ದಾರೆ.

    ರಂಗೇರಿದ ಬಸವಕಲ್ಯಾಣ ಕಣ; ಬಿಜೆಪಿ, ಕಾಂಗ್ರೆಸ್​ನಿಂದ ಅಭ್ಯರ್ಥಿಗಳ ಶೋಧ

    ಗರಿಗೆದರಿದ ರಾಜಕೀಯ ಚಟುವಟಿಕೆ; ಬೆಳಗಾವಿ ಲೋಕಸಭಾ ಕ್ಷೇತ್ರದ ಚಿತ್ರಣ..
    ಬಿ.ವೈ. ವಿಜಯೇಂದ್ರ

    | ಸ.ದಾ. ಜೋಶಿ ಬೀದರ್

    ಶಾಸಕ ಬಿ.ನಾರಾಯಣರಾವ್ ಅಗಲಿಕೆಯಿಂದಾಗಿ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕುಸ್ತಿಗೆ ಅಖಾಡ ಸಜ್ಜಾಗಿದೆ. ಎರಡೂ ಪಕ್ಷಗಳಿಂದ ಅಭ್ಯರ್ಥಿ ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಆದರೆ ಎರಡೂ ಪಕ್ಷಗಳ ಮುಖಂಡರು ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ. ರಾಜ್ಯ ನಾಯಕರ ದಂಡು ಈಗಾಗಲೆ ಒಂದು ಸುತ್ತು ಕ್ಷೇತ್ರದಲ್ಲಿ ಸಂಚರಿಸಿ ಕಣ ರಂಗೇರಿಸಿದ್ದಾರೆ. 1978ರ ನಂತರ ಕಳೆದ ಬಾರಿ ಬಿ.ನಾರಾಯಣರಾವ್ ಮೂಲಕ ಕಾಂಗ್ರೆಸ್ ಗೆದ್ದಿತ್ತು. ಹೀಗಾಗಿ ನಾಲ್ಕು ದಶಕ ಬಳಿಕ ಸಿಕ್ಕಿರುವ ಕ್ಷೇತ್ರವನ್ನು ಮತ್ತೆ ತನ್ನ ಹಿಡಿತದಲ್ಲಿಟ್ಟುಕೊಳ್ಳುವುದು ಕಾಂಗ್ರೆಸಿಗರಿಗೆ ಸವಾಲೆನಿಸಿದೆ. ಕ್ಷೇತ್ರದ ಇತಿಹಾಸದಲ್ಲಿ ಬಿಜೆಪಿ ಒಮ್ಮೆ ಮಾತ್ರ (2008ರಲ್ಲಿ) ಗೆದ್ದಿದೆ. ಈಗ ಪಕ್ಷ ಅಧಿಕಾರದಲ್ಲಿದ್ದು, ತನ್ನ ಶಕ್ತಿ-ಸಾಮರ್ಥ್ಯ ತೋರಿಸಿಕೊಳ್ಳಲು ಇಲ್ಲಿ ಜಯ ಸಾಧಿಸುವುದು ಪ್ರತಿಷ್ಠೆ ಎನಿಸಿದೆ.

    ಆಕಾಂಕ್ಷಿಗಳ ದಂಡು: ಕಾಂಗ್ರೆಸ್​ನಲ್ಲಿ 24 ಆಕಾಂಕ್ಷಿಗಳು ಟಿಕೆಟ್ ಕೇಳಿದರೆ, ಬಿಜೆಪಿಯಲ್ಲಿ ಈ ಸಂಖ್ಯೆ 13. ಜೆಡಿಎಸ್ ಪಾಳಯ ಮಂಕಾಗಿದೆ. ಕಾಂಗ್ರೆಸ್​ನಲ್ಲಿ ನಾರಾಯಣರಾವ್ ಪತ್ನಿ ಮಲ್ಲಮ್ಮ, ಮಾಜಿ ಸಿಎಂ ದಿ.ಧರ್ಮಸಿಂಗ್ ಪುತ್ರ, ವಿಧಾನಪರಿಷತ್ ಸದಸ್ಯ ವಿಜಯ ಸಿಂಗ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ. ಬಿಜೆಪಿಯಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಪ್ರಮುಖರಾದ ಸಂಜಯ್ ಪಟವಾರಿ, ಶರಣು ಸಲಗರ್ ಇತರರು ಪೈಪೋಟಿ ನಡೆಸುತ್ತಿದ್ದಾರೆ.

    ಜಾತಿ ಲೆಕ್ಕಾಚಾರ ನಿರ್ಣಾಯಕ: 1983ರಿಂದ 2014ರವರೆಗೆ ನಡೆದಿರುವ 8 ಚುನಾವಣೆಗಳಲ್ಲಿ ಕಾಂಗ್ರೆಸ್ ಸತತ ಸೋಲುಂಡಿದೆ. ಕಳೆದ ಸಲ ಅಹಿಂದ ಮತಗಳು ಕೈಹಿಡಿದಿದ್ದರಿಂದ ನಾರಾಯಣರಾವ್ ಗೆದ್ದಿದ್ದರು. ಆದರೆ ಈಗಿನ ಸ್ಥಿತಿ ಮೊದಲಿನಂತಿಲ್ಲ. ರಾಜ್ಯದಲ್ಲಿ ಸರ್ಕಾರ ಬದಲಾಗಿದೆ. ಅಹಿಂದ ಟೀಮ್ ಮುಂಚೆಯಷ್ಟು ಕ್ರಿಯಾಶೀಲವಾಗಿಲ್ಲ. ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮರಾಠಾ (ಒಟ್ಟು 1.10 ಲಕ್ಷ) ಮತದಾರರು ನಿರ್ಣಾಯಕರಿದ್ದಾರೆ. ಜತೆಗೆ ಇತರ ಸಮಾಜಗಳ ಒಂದಿಷ್ಟು ಮತಗಳಿಗೆ ಲಗ್ಗೆ ಹಾಕಿ ಜಯ ತಮ್ಮದಾಗಿಸಿಕೊಳ್ಳುವ ಲೆಕ್ಕಾಚಾರ ಬಿಜೆಪಿಯದ್ದು.

    ಜೆಡಿಎಸ್​ನಲ್ಲಿಲ್ಲ ಜೋಶ್: ಜನತಾ ಪರಿವಾರಕ್ಕೆ ನೆಲೆ ಒದಗಿಸಿದ ಕ್ಷೇತ್ರ ಬಸವಕಲ್ಯಾಣ. 1978ರಿಂದ 2018ರವರೆಗಿನ 10 ಚುನಾವಣೆಗಳಲ್ಲಿ 7 ಸಲ ಜನತಾ ಪರಿವಾರ ಗೆದ್ದಿದೆ. 1983, 1985ರಲ್ಲಿ ಜನತಾ ಪಕ್ಷ, 1989, 1994ರಲ್ಲಿ ಜನತಾ ದಳ, 1999, 2004 ಮತ್ತು 2013ರಲ್ಲಿ ಜೆಡಿಎಸ್ ಜಯ ಗಳಿಸಿದೆ. ಸ್ಥಿತಿ ಹೀಗಿದ್ದಾಗಲೂ ಮೊದಲ ಸಲ ಕ್ಷೇತ್ರಕ್ಕೆ ಎದುರಾದ ಉಪ ಚುನಾವಣೆಯಲ್ಲಿ ದಳಪತಿಗಳ ಟೀಮ್ ಮಂಕಾಗಿ ಕುಳಿತಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಭ್ಯರ್ಥಿ ನಿಲ್ಲಿಸುವುದೇ ವ್ಯರ್ಥ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಪಕ್ಷ ಪಾಳಯದ ಉತ್ಸಾಹ ಕುಗ್ಗಿಸಿದೆ.

    ಕಣ ಕಾವೇರಿಸಿದ ವಿಜಯೇಂದ್ರ: ಅಭ್ಯರ್ಥಿ ಆಯ್ಕೆ ಮುನ್ನವೇ ಹವಾ ಸೃಷ್ಟಿಸಲು ಬಿಜೆಪಿ ಯತ್ನಿಸುತ್ತಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ರಂಗಪ್ರವೇಶ ಸಂಚಲನ ಮೂಡಿಸಿದೆ. ವಿಜಯೇಂದ್ರ ಕಲ್ಯಾಣ ಭೇಟಿ ಬಳಿಕವೇ ಮರಾಠಾ ಹಾಗೂ ಲಿಂಗಾಯತ ಅಭಿವೃದ್ಧಿ ನಿಗಮಗಳ ಘೊಷಣೆಯಾಗಿದೆ. ನೂತನ ಅನುಭವ ಮಂಟಪಕ್ಕೆ ಅಡಿಗಲ್ಲು ನೆರವೇರಿರುವುದು ಮಹತ್ವದ ಸಂಗತಿ. ಮಂಗಳೂರಿನಲ್ಲಿ ನಡೆದ ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವ ನಿರ್ಣಯ ಕೈಗೊಳ್ಳಲಾಗಿದೆ. ಇದೆಲ್ಲದರ ನಡುವೆ ಬಹುತೇಕ ವಿಜಯೇಂದ್ರ ಹೆಸರು ಕೇಳಿಬರುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts