More

    ಮಠಾಧೀಶರಿಗೆ ಸಮಾಜವೇ ಕುಟುಂಬ, ಗುರಿ ತೋರುವ ಮಾರ್ಗ

    ಶಿವಮೊಗ್ಗ: ಮಠಾಧೀಶರಿಗೆ ಸಮಾಜವೇ ಕುಟುಂಬ, ತಂದೆ-ತಾಯಿ ಮತ್ತು ಗುರಿ ತೋರುವ ಮಾರ್ಗ ಎಂದು ಬೆಕ್ಕಿನಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
    ನಗರದ ಬೆಕ್ಕಿನಕಲ್ಮಠ ಸಭಾಭವನದಲ್ಲಿ ಸೋಮವಾರ ತಮ್ಮ ಜನ್ಮದಿನದ ನಿಮಿತ್ತ ವೀರಶೈವ ಸಮಾಜದ ಬಂಧುಗಳು ನೀಡಿದ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿ, ಅಭಿಮಾನ, ಕೃತಜ್ಞತೆ, ಗೌರವ ಸಮರ್ಪಣೆ ಮೂಲಕ ಮಠಾಧೀಶರ ಬದುಕಿಗೂ ವಿಶೇಷ ಅರ್ಥ ಬರುತ್ತದೆ ಎಂದರು.
    ಮಠಾಧೀಶರಾದ ಬಳಿಕ ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ವಿಚಾರಗಳು ಅರಿವಿಗೆ ಬರುತ್ತವೆ. ಮಾರ್ಗದರ್ಶನ ನೀಡುವವರು ಸನ್ಮಾರ್ನ ತೋರಿದಾಗ ಭಕ್ತರು ಕೂಡ ಅದೇ ಮಾರ್ಗದಲ್ಲಿ ನಡೆಯುತ್ತಾರೆ. ಮುರುಘಾಮಠದಲ್ಲಿ ಅಲ್ಲಮಪ್ರಭು ಅವರು ನೆಲೆಸಿದ್ದ ಕುರುಹುಗಳಿವೆ. ಹಾಗಾಗಿ ಆನಂದಪುರದ ಮಠ ಅಲ್ಲಮಪ್ರಭು ಸಂಸ್ಥಾನಮಠ ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ಬಸವಣ್ಣನ ಸಮಕಾಲೀನರಾಗಿದ್ದ ಅಲ್ಲಮಪ್ರಭು ಅವರಂತಹ ತತ್ವಜ್ಞಾನಿ ಜಗತ್ತಿನಲ್ಲಿ ಮತ್ತೊಬ್ಬರಿಲ್ಲ ಎಂದು ಹೇಳಿದರು.
    ಎಂಎಲ್ಸಿ ಆಯನೂರು ಮಂಜುನಾಥ ಮಾತನಾಡಿ, ಮುರುಘಾಮಠದ ಶ್ರೀಗಳು ಎಲ್ಲ ಜಾತಿ, ಜನಾಂಗದವರಿಗೆ ಗುರುಗಳಾಗಿದ್ದಾರೆ. ಅವರು ಕೇವಲ ಲಿಂಗಾಯತ, ವೀರಶೈವರ ಸ್ವಾಮೀಜಿಯಾಗಿ ಗುರುತಿಸಿಕೊಂಡಿಲ್ಲ. ನಮಗೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿರುವ ಗುರುಗಳನ್ನು ಅಭಿನಂದಿಸುವಂತಹ ಸೌಭಾಗ್ಯ ನಮ್ಮದಾಗಿದೆ. ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮದೇನು ಇಲ್ಲ ಎಂದು ಸಮಾಜಕ್ಕಾಗಿ ಬದುಕುವವರು ಬೇಕಾಗಿದ್ದಾರೆ. ನಾನು, ನನ್ನದು ಎಂದು ಬಡಿದಾಡಿಕೊಳ್ಳುತ್ತಿರುವವರ ನಡುವೆ ವ್ಯಾಮೋಹ ತ್ಯಜಿಸಿ ಬದುಕುವವರು ಬೇಕಾಗಿದ್ದಾರೆ. ಪ್ರಶ್ನಾತೀತವಾಗಿ, ಸಂಶಯತೀತರಾಗಿ ಎಲ್ಲರಿಗೂ ಜ್ಞಾನ ನೀಡುವ ಕೆಲಸ ಮಾಡುವುದು ಸುಲಭವಲ್ಲ. ಅಂತಹ ಕೆಲಸವನ್ನು ಮುರುಘಶ್ರೀಗಳು ಮಾಡುತ್ತಿದ್ದಾರೆ ಎಂದರು.
    ಗುರಿ ಮುಟ್ಟುವವರೆಗೂ ಮಾರ್ಗದರ್ಶನ: ಮುರುಘಶ್ರೀಗಳು ನೂರಲ್ಲ ನೂರಾರು ವರ್ಷ ಬದುಕಬೇಕು ಎಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ. ಗುರಿ ಮುಟ್ಟುವವರೆಗೂ ಮಾರ್ಗದರ್ಶನ ಮಾಡಿ ಬೆನ್ನುತಟ್ಟಿ ಪ್ರೋತ್ಸಾಹಿಸುವ ಶ್ರೀಗಳು, ಪ್ರತಿಭೆ, ಗುಣ ಮತ್ತು ನಡತೆ ಗುರುತಿಸಿ ಪ್ರೋತ್ಸಾಹಿಸುವ ಉದಾರ ಮನಸ್ಸನ್ನು ಹೊಂದಿದ್ದಾರೆ ಎಂದು ಆಶೀರ್ವಚನ ನೀಡಿದ ಬಸವಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು. ಮಾರ್ಗದರ್ಶನ ನೀಡುವ ಗುಣ ಬಂದರೆ ವ್ಯಕ್ತಿತ್ವ ರೂಪುಗೊಳ್ಳುತ್ತದೆ. 72ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಮುರುಘಶ್ರೀಗಳ ಅಮೃತ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದರು.
    ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರಮುಖರು, ಉದ್ಯಮಿಗಳು ಮತ್ತು ಭಕ್ತರು ಸ್ವಾಮೀಜಿಗೆ ಅವರಿಗೆ ಗುರುವಂದನೆ ಸಲ್ಲಿಸಿದರು. ಜಡೆ ಮಠದ ಶ್ರೀ ಮಹಾಂತೇಶ ಸ್ವಾಮೀಜಿ, ಹಾರನಹಳ್ಳಿ ಮಠದ ಶ್ರೀ ನೀಲಕಂಠ ಸ್ವಾಮೀಜಿ, ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
    ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಲ್ಸಿ ಎಸ್.ರುದ್ರೇಗೌಡ, ಯೋಗಗುರು ರುದ್ರಾರಾಧ್ಯ, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಬಸವೇಶ್ವರ ಸಮಾಜದ ಮುಖಂಡ ಎನ್.ಜೆ.ರಾಜಶೇಖರ್ ಉಪಸ್ಥಿತರಿದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts