More

    ಭಿಕ್ಷಾಟನೆಗೆ ಶಿಶು ದಂಧೆ; ಪಾಳಿಯಲ್ಲಿ ಬಾಡಿಗೆಗೆ ಲಭ್ಯ, ಗಣಿ ಜಿಲ್ಲೆಯಲ್ಲಿ ಅಮಾನವೀಯ ಚಿತ್ರಣ

    ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಬೇಕಾದ ಕಂದಮ್ಮಗಳನ್ನು ನೂರು ಇನ್ನೂರು ರೂ.ಗೆ ಬಾಡಿಗೆಗೆ ತಂದು ಸುಡುವ ಬಿಸಿಲು, ಕೊರೆವ ಚಳಿ, ಭೋರ್ಗರೆವ ಮಳೆಯಲ್ಲಿ ತೋಯಿಸುತ್ತ, ನಿದ್ರೆ ಮಾತ್ರೆ ಹಾಕಿ ಹಸಿವನ್ನು ಮರೆಸಿ, ಬೀದಿ, ಬೀದಿ ಸುತ್ತಿ ಭಿಕ್ಷೆ ಬೇಡುವ ಜಾಲ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರ ಪ್ರದೇಶಗಳಲ್ಲಿ ಸಕ್ರಿಯವಾಗಿದೆ. ಹೆತ್ತವರ ಬಡತನವನ್ನೇ ಬಂಡವಾಳ ಮಾಡಿಕೊಂಡು ಗಂಟು ಮಾಡಿಕೊಳ್ಳುವ ಈ ದಂಧೆಕೋರರು ಗಣಿ ಜಿಲ್ಲೆ ಬಳ್ಳಾರಿಯಲ್ಲೂ ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ವಿಜಯವಾಣಿ ತನಿಖಾ ವರದಿ ಈ ಜಾಲದ ಕರಾಳತೆಯನ್ನು ತೆರೆದಿಟ್ಟಿದೆ.

    | ಶ್ರೀಕಾಂತ ಅಕ್ಕಿ ಬಳ್ಳಾರಿ

    ಹಾಲುಗಲ್ಲದ ಕಂದಮ್ಮಗಳನ್ನು ಭಿಕ್ಷಾಟನೆಯ ಸರಕಾಗಿ ಬಳಸುತ್ತಿರುವ ಅಮಾನವೀಯ ಜಾಲವನ್ನು ವಿಜಯವಾಣಿ ಗಣಿನಾಡಿನಲ್ಲಿ ಬಯಲಿಗೆಳೆದಿದೆ. 100 -200 ರೂ. ಗೆ ಮಕ್ಕಳನ್ನು ದಿನದ ಬಾಡಿಗೆ ಪಡೆದು ಭಿಕ್ಷಾಟನೆಗೆ ಇಳಿಯುವ ಯುವತಿಯರು, ಮಹಿಳೆಯರು ಹಸುಗೂಸುಗಳಿಗೆ ನಿದ್ರೆ ಮಾತ್ರೆ ಅಥವಾ ಇಂಜೆಕ್ಷನ್ ನೀಡಿ ಮಲಗಿಸಿ ಕಂಕುಳಲ್ಲಿ ಹೊತ್ತು ಹಣ ಮಾಡುತ್ತಾರೆ.

    ಬೆಳಗ್ಗೆ ಒಂದಿಷ್ಟು ಹಾಲು ಕೊಟ್ಟು ಮಕ್ಕಳನ್ನು ಭಿಕ್ಷೆ ಬೇಡುವವರ ಮಡಿಲಿಗೆ ಹಾಕುವ ತಾಯಂದಿರು ಹೊಟ್ಟೆಪಾಡಿಗಾಗಿ ತಲೆಕೂದಲು, ಪಿನ್ನು ಮಾರಾಟಕ್ಕೆ ತೆರಳುತ್ತಾರೆ. ಅವರು ವಾಪಸ್ ಬರುವವರೆಗೆ ಕಂದಮ್ಮಗಳು ಯಾರದ್ದೋ ಸೊಂಟದಲ್ಲಿ ಜೋತುಬಿದ್ದು ನಿದ್ರೆಗೆ ಶರಣಾಗಿರುತ್ತವೆ. ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕು ಸಿರಿಗೇರಿ ಕ್ರಾಸ್ ಬಳಿ ಇಂಥ ವಿದ್ಯಮಾನ ನಡೆಯುತ್ತಿದೆ.

    ಯಾರಿವರು: ವಾಸ್ತವದಲ್ಲಿ ಇವರ ಮೂಲ ವೃತ್ತಿಯೇ ಭಿಕ್ಷಾಟನೆ. 30 ವರ್ಷಗಳಿಂದ ಸಿರಿಗೇರಿ ಬಳಿ ವಾಸಿಸುತ್ತಿರುವ ಕೆಲ ಭಿಕ್ಷುಕರು ಭಿಕ್ಷಾಟನೆ ಜತೆಗೆ ಕೂದಲು, ಪಿನ್ನು, ಕೊಡಪಾನ ಮಾರಾಟ ಮಾಡಲು ಹಳ್ಳಿಹಳ್ಳಿಗೆ ಹೋಗುತ್ತಾರೆ. ಇದಲ್ಲದೆ ತೆಕ್ಕಲಕೋಟೆ ಹತ್ತಿರದ ಬಲಕುಂದಿ ರಸ್ತೆ ಬಳಿ, ಸಿರಗುಪ್ಪದ ಹೊರವಲಯದ ಸಿದ್ದಪ್ಪ ನಗರದಲ್ಲಿ ಇದೇ ರೀತಿ ಜನರು ವಾಸವಾಗಿದ್ದಾರೆ.ಆದರೆ, ಸಿರಿಗೇರಿಯಲ್ಲಿ ವಾಸವಾಗಿರುವವರ ಪೈಕಿ ಯಥೇಚ್ಛವಾಗಿ ಭಿಕ್ಷೆ ಬೇಡುವ ಮಹಿಳೆಯರು ತಮಗೆ ಮಕ್ಕಳಿರದಿದ್ದಲ್ಲಿ ಪಕ್ಕದ ಮನೆಯ ಮಗುವನ್ನು ಬಾಡಿಗೆ ಪಡೆದು ಭಿಕ್ಷೆಗೆ ತೆರಳುತ್ತಾರೆ. ದಿನನಿತ್ಯ ಒಂದು ಮಗುವಿಗೆ 100 ರಿಂದ 200 ರೂ. ವರೆಗೆ ಕೊಡಲಾಗುತ್ತದೆ. ಮಕ್ಕಳನ್ನು ಬಾಡಿಗೆ ಕೊಡಿಸುವುದಕ್ಕೂ ಇಲ್ಲಿ ಮಧ್ಯವರ್ತಿಗಳಿದ್ದಾರೆ.

    ಆರೋಗ್ಯದ ಮೇಲೆ ಪರಿಣಾಮ: ಮಕ್ಕಳಿಗೆ ನಿದ್ರೆ ಬರಿಸಲು ಮಾತ್ರೆ ಇಲ್ಲವೇ ಕೆಮ್ಮಿನ ಔಷಧ ನೀಡುತ್ತಿರುವ ಸಂಶಯವೂ ಇದೆ.

    ಶಿಫ್ಟ್​ವೈಸ್ ಬಾಡಿಗೆ: ಭಿಕ್ಷಾಟನೆ ಸಂದರ್ಭ ಹಸುಗೂಸು ಗಳನ್ನು ಪಾಳಿ ಮೇಲೆ ಬದಲಾವಣೆ ಮಾಡಲಾಗುತ್ತಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಒಂದು ಮಗುವನ್ನು ಬಾಡಿಗೆ ಪಡೆದರೆ, ಮಧ್ಯಾಹ್ನದಿಂದ ಸಂಜೆವರೆಗೆ ಮತ್ತೊಂದು ಮಗುವನ್ನು ಬಾಡಿಗೆ ಪಡೆದು ಕೊಂಕಳಲ್ಲಿಟ್ಟುಕೊಂಡು ಭಿಕ್ಷೆ ಬೇಡಲಾಗುತ್ತದೆ.

    ಮಗುವೊಂದಕ್ಕೆ ದಿನಕ್ಕೆ 200 ರೂ.: ಸಿರಿಗೇರಿ ಕ್ರಾಸ್​ನಲ್ಲಿ ನಡೆಯುವ ಕುರಿ ಸಂತೆಗೆ ವ್ಯಾಪಾರ ಮಾಡುವ ಸೋಗಿನಲ್ಲಿ ತೆರಳಿದ ವಿಜಯವಾಣಿ ಪ್ರತಿನಿಧಿ, ಅಲ್ಲಿದ್ದ ಭಿಕ್ಷುಕಿಗೆ ಬಿಸ್ಕತ್ ಮತ್ತು ಒಂದಿಷ್ಟು ಹಣ ನೀಡಿ, ಮಾತನಾಡಿಸಿದಾಗ ಬಾಡಿಗೆಗೆ ಕಂದಮ್ಮಗಳನ್ನು ಪಡೆದು ಭಿಕ್ಷೆ ಬೇಡುತ್ತಿರುವ ಜಾಲ ಪತ್ತೆಯಾಗಿದೆ.

    ಅವರೊಂದಿಗೆ ನಡೆಸಿದ ಸಂಭಾಷಣೆ ಹೀಗಿದೆ:

    ಭಿಕ್ಷಾಟನೆಗೆ ಶಿಶು ದಂಧೆ; ಪಾಳಿಯಲ್ಲಿ ಬಾಡಿಗೆಗೆ ಲಭ್ಯ, ಗಣಿ ಜಿಲ್ಲೆಯಲ್ಲಿ ಅಮಾನವೀಯ ಚಿತ್ರಣ

    ಆರೋಗ್ಯವಂತರಿಗೆ ಈ ರೀತಿ ಔಷಧ ನೀಡಿದರೆ ಭವಿಷ್ಯದಲ್ಲಿ ಅವುಗಳ ಆರೋಗ್ಯದ ಗತಿಯೇನೋ ? ಇದರ ಜತೆಗೆ ಬಾಡಿಗೆ ಪಡೆಯುವವರು ಮಕ್ಕಳನ್ನು ಮಾರಾಟ ಮಾಡಿದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಕಾಡುತ್ತಿದೆ. ಜಿಲ್ಲಾ ಮಹಿಳಾ ಮತ್ತು ಮಕ್ಕಳ ರಕ್ಷಣಾಧಿಕಾರಿಗಳು ದಾಳಿ ನಡೆಸಿ, ವಿಚಾರಣೆ ನಡೆಸಿದರೆ ಮತ್ತಷ್ಟು ಸತ್ಯಾಂಶ ಬಯಲಿಗೆ ಬರಲಿದೆ.

    ನಾವು ಕೆಲಸ, ಗಿಲಸ ಮಾಡಂಗಿಲ್ಲ, ದಿನಾ ಭಿಕ್ಷೆ ಬೇಡೋದೇ ನಮ್ಮ ಕಾಯಕ. ದಿನಾ 300 ರಿಂದ 500 ರೂ.ವರೆಗೆ ಕಲೆಕ್ಷನ್ ಆಗುತ್ತೆ. ಇದರಲ್ಲಿಯೇ ಈ ಪಾಪು ಮನೆಯವರಿಗೆ 100 ರಿಂದ 200 ರೂ.ವರೆಗೆ ಕೊಡ್ತಿವಿ.

    | ಭಿಕ್ಷುಕಿ ಸಿರಿಗೇರಿ (ಬಳ್ಳಾರಿ ಜಿಲ್ಲೆ)

    ನಾಪತ್ತೆಯಾದವರ ಬಳಕೆ?: ರಾಜ್ಯದಲ್ಲಿ 2021ರ ಜನವರಿಯಿಂದ ಸೆಪ್ಟೆಂಬರ್ ಅಂತ್ಯದವರೆಗೆ 420 ಬಾಲಕರು ಮತ್ತು 1,263 ಬಾಲಕಿಯರು ನಾಪತ್ತೆ ಆಗಿರುವ ಬಗ್ಗೆ ರಾಜ್ಯ ಅಪರಾಧ ದಾಖಲಾತಿ ವಿಭಾಗ (ಎಸ್​ಸಿಆರ್​ಬಿ) ಮಾಹಿತಿ ದಾಖಲಿಸಿದೆ.ಈ ಪೈಕಿ ಭಿಕ್ಷಾಟನೆಗೆ ಮಕ್ಕಳನ್ನು ಬಳಕೆ ಮಾಡಿರುವ ಬಗ್ಗೆ ದೂರುಗಳು ದಾಖಲಾಗಿಲ್ಲ. ಪೊಲೀಸ್ ತನಿಖೆ ವೈಫಲ್ಯವೋ ಅಥವಾ ತನಿಖೆ ವೇಳೆ ಸತ್ಯಾಂಶ ಬಾಯ್ಬಿಟ್ಟಿಲ್ಲವೋ ತಿಳಿಯಬೇಕಿದೆ.

    ರಾಜಧಾನಿಯಲ್ಲಿ ಅವ್ಯಾಹತ: ರಾಜಧಾನಿ ಬೆಂಗಳೂರಿನಲ್ಲೂ ಟ್ರಾಫಿಕ್ ಸಿಗ್ನಲ್, ದೇವಸ್ಥಾನ ಮತ್ತು ರೈಲು, ಬಸ್ ನಿಲ್ದಾಣಗಳಲ್ಲಿ ರಸ್ತೆಗಳಲ್ಲಿ ಮಕ್ಕಳನ್ನು ಸರಗಿನಲ್ಲಿ ಬಚ್ಚಿಟ್ಟುಕೊಂಡು ಭಿಕ್ಷೆ ಬೇಡುವರ ಸಂಖ್ಯೆ ಹೆಚ್ಚಾಗಿಯೇ ಇದೆ. ಇತ್ತೀಚೆಗೆ ಪಶ್ಚಿಮ ವಿಭಾಗ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 57 ಭಿಕ್ಷಕರನ್ನು ರಕ್ಷಣೆ ಮಾಡಿ ಭಿಕ್ಷುಕರ ಪುನರ್ ವಸತಿ ಕೇಂದ್ರಗಳಿಗೆ ಬಿಟ್ಟಿದ್ದಾರೆ. ಅನುಮಾನ ಬಂದಿರುವ ಭಿಕ್ಷುಕರ ಪೂರ್ವಾಪರದ ಬಗ್ಗೆ ತನಿಖೆಯನ್ನು ಮುಂದುವರಿಸಿದ್ದಾರೆ.

    2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನಕ್ಕೆ ಹೋಗುತ್ತಾ ಭಾರತ ತಂಡ? ಕ್ರೀಡಾ ಸಚಿವರ ಸ್ಪಷ್ಟನೆ ಏನು?

    ತಲೆಮರೆಸಿಕೊಂಡಿದ್ದ ‘ಕುರಾನ್ ಸರ್ಕಲ್‌’ನ ಶಂಕಿತ ಉಗ್ರ ಎನ್‌ಐಎ ಬಲೆಗೆ, ‘ಭವಿಷ್ಯದ ಐಸಿಸ್’ ಕುರಿತು ಬೆಂಗಳೂರಿನಲ್ಲಿ ಪ್ಲ್ಯಾನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts