More

    ಬೇಡಿದ್ದು ಕರುಣಿಸುವ ಬೆಟ್ಟದ್ದ ಬೀರಪ್ಪ

    ಮಾಕವಳ್ಳಿ ಸಿ.ರವಿ ಕೆ.ಆರ್.ಪೇಟೆ
    ಜನರ ಕಷ್ಟ, ಕಾರ್ಪಣ್ಯಗಳನ್ನು ನಿವಾರಣೆ ಮಾಡಿ ಬೇಡಿ ಬಂದವರ ಬೇಡಿಕೆಗಳನ್ನು ಈಡೇರಿಸಿ ಬಾಳಿಗೆ ಬೆಳಕು ನೀಡುತ್ತಿರುವ ಬೆಟ್ಟದ ಬೀರಪ್ಪ ಭಕ್ತರ ಆರಾಧ್ಯ ದೈವನಾಗಿದ್ದಾನೆ.

    ತಾಲೂಕಿನ ಕಸಬಾ ಹೋಬಳಿಯ ಕರೋಟಿ ಗ್ರಾಮದ ಹೊರವಲಯದ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ನೆಲೆ ನಿಂತು ಜನರಿಗೆ ಬೇಡಿದ್ದನ್ನು ಕರುಣಿಸುವ ಶಕ್ತಿದೇವ. ಈ ದೇವರಲ್ಲಿ ಕೋರಿದರೆ ಆಗುವುದಿಲ್ಲ ಎಂಬ ಕಾರ್ಯವೇ ಇಲ್ಲ. ಈತನ ಕರುಣೆಯಿಂದ ಬಾಳಿ ಬದುಕಿದ ಅದೆಷ್ಟೋ ಜನರಿದ್ದಾರೆ. ಅರಣ್ಯ ಮಧ್ಯದಲ್ಲಿ ಪೂರ್ವಾಭಿಮುಖವಾಗಿ ನೆಲ ನಿಂತಿರುವ ದೇವರ ಶಕ್ತಿ ನಾಡಿನಾದ್ಯಂತ ಪಸರಿಸಿದೆ. ನಂಬಿದ ಭಕ್ತರ ಆಶಯಗಳನ್ನು ಈಡೇರಿಸುವ ತಂದೆ, ಅದರಲ್ಲೂ ಕಷ್ಟದಲ್ಲಿರುವವರ ಕೂಗಿಗೆ ಕೂಡಲೇ ಕರಗಿ ಪರಿಹಾರ ನೀಡುವ ಕರುಣಾಮೂರ್ತಿಯಾಗಿದ್ದಾನೆ.

    ಭಕ್ತರು ಮನದಲ್ಲಿ ತಮ್ಮ ಇಷ್ಟಾರ್ಥಗಳನ್ನು ಕರುಣಿಸಲು ಕೋರಿ ಹರಕೆ ಹೊತ್ತು ಬರುತ್ತಾರೆ. ಬೇಡಿದ್ದು, ನೆರವೇರಿದ ನಂತರ ದೇವರಿಗೆ ಹರಕೆ ಸೇವೆಯನ್ನು ಸಮರ್ಪಿಸಿ ಕೃತಘ್ನರಾಗುತ್ತಾರೆ. ಮದುವೆ, ಭೂಮಿ ವಿವಾದ, ಸಂತಾನಭಾಗ್ಯ ಕರುಣಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹರಕೆ ಹೊರುತ್ತಾರೆ. ಹೊಸ ವಾಹನ ಖರೀದಿಸಿದಾಗ ಭಕ್ತರು ಒಳಿತಿಗಾಗಿ ಇಲ್ಲಿ ಬಂದು ಪೂಜೆ ಸಲ್ಲಿಸುವುದು ವಾಡಿಕೆ.
    ದೇವರಿಗೆ ಪ್ರತಿ ಸೋಮವಾರ ವಿಶೇಷ ಪೂಜೆಗಳು ನೆರವೇರುತ್ತವೆ. ಸೋಮವಾರ ದೇವರಿಗೆ ವಿವಿಧ ಪುಷ್ಪಾಲಂಕಾರ, ಬೆಣ್ಣೆ, ಅರಿಶಿಣ, ಕುಂಕುಮ, ಭಸ್ಮ, ಶ್ರೀಗಂಧದಿಂದ ಅಲಂಕರಿಸಿ ಸಜ್ಜಿಗೆ, ಸಿಹಿ ಪೊಂಗಲ್ ನೈವೇದ್ಯವಿಟ್ಟು ಪೂಜೆ ನೆರವೇರಿಸಲಾಗುತ್ತದೆ.

    ದೇವರ ಐತಿಹ್ಯ
    ಅರಣ್ಯ ಪ್ರದೇಶದ ಬೆಟ್ಟದ ಮೇಲಿನ ಬೇವಿನ ಮರದಡಿ ಬೀರಪ್ಪ ನೆಲೆ ನಿಂತಿದ್ದನು. ಭಕ್ತರು ದೇವರಿಗೆ ಪೂಜೆ ಮಾಡುತ್ತಿದ್ದರು. ಈ ಸಂದರ್ಭ ಈ ಹಿಂದೆ ಅರಣ್ಯ ಇಲಾಖೆಯವರು ಬೇವಿನ ಮರ ಕಡಿಯಲು ಮುಂದಾಗಿದ್ದರು. ಭಕ್ತರು ಮರ ಕಡಿಯದಂತೆ ಮನವಿ ಮಾಡಿದರೂ ಅರಣ್ಯ ಸಿಬ್ಬಂದಿ ಕಡಿದರು. ನಂತರದಲ್ಲಿ ಅಧಿಕಾರಿ ಹಾಗೂ ಮರ ಕಡಿದ ಕಾರ್ಮಿಕ ಇಬ್ಬರು ಅಕಾಲಿಕ ಸಾವನ್ನಪ್ಪಿದರೆಂದು ಜನರು ಹೇಳುತ್ತಾರೆ. ನಂತರದಲ್ಲಿ ಭಕ್ತರಲ್ಲಿ ಬೀರಪ್ಪನಲ್ಲಿನ ನಂಬಿಕೆ ಇಮ್ಮಡಿಯಾಯಿತು. ಮತ್ತೆ ಬೇವಿನ ಮರ ಅಲ್ಲೇ ಚಿಗುರಿ ಹೆಮ್ಮರವಾಗಿದೆ. ಬಯಲಿನಲ್ಲಿದ್ದ ಬೀರಪ್ಪನ ನೆಲೆಗೆ ದೇವಾಲಯ ನಿರ್ಮಿಸಲು ಹತ್ತು ವರ್ಷದ ಹಿಂದೆ ಕರೋಟಿ ಗ್ರಾಮಸ್ಥರು ಯೋಜಿಸಿದ್ದರು. ಎರಡು ವರ್ಷದ ಹಿಂದೆ ದೇವಾಲಯ ನಿರ್ಮಾಣ ಪ್ರಾರಂಭವಾಗಿದೆ. ದೇವಾಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಗೋಪುರ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ದೇವಾಲಯ ನಿರ್ಮಿಸಲಾಗುತ್ತಿದೆ.

    ಭಕ್ತರೇ ಪೂಜಾರಿಗಳು
    ದೇವರ ಪೂಜಾ ಕಾರ್ಯಕ್ಕೆ ಅರ್ಚಕರಿಲ್ಲದಿರುವುದು ವಿಶೇಷ. ಭಕ್ತರೇ ತಮ್ಮ ಇಷ್ಠಾರ್ಥಗಳನ್ನು ಈಡೇರಿಸುವಂತೆ ಕೋರಿ ಪೂಜೆ ಸಲ್ಲಿಸುತ್ತಾರೆ. ಬೀರಪ್ಪ ಗೋ ರಕ್ಷಕನಾಗಿದ್ದು, ಗೋವುಗಳು ಅನಾರೋಗ್ಯಕ್ಕೆ ತುತ್ತಾದಾಗ ಭಕ್ತರು ಗೋವುಗಳ ಹಾಲಿನ ನೈವೇದ್ಯ ಮಾಡುವುದಾಗಿ ಹರಕೆ ಮಾಡಿಕೊಳ್ಳುವುದು ವಾಡಿಕೆ. ಗೋವು ಚೇತರಿಸಿಕೊಂಡ ನಂತರ ಗೋವಿನ ಹಾಲಿನಲ್ಲಿ ಸಿಹಿ ನೈವೇದ್ಯ ತಯಾರಿಸಿ ಪೂಜೆ ಸಲ್ಲಿಸುವ ಮೂಲಕ ಭಕ್ತರು ಹರಕೆ ತೀರಿಸುತ್ತಾರೆ. ಕಾರ್ತಿಕ ಮಾಸದ ಕಡೇ ಸೋಮವಾರ ಗ್ರಾಮಸ್ಥರು ಸಾಮೂಹಿಕವಾಗಿ ಪರ ಮಾಡಿ, ದೇವರಿಗೆ ವಿಶೇಷ ಪೂಜೆ ನೆರವೇರಿಸುತ್ತಾರೆ. ನಂತರ ಸಾಮೂಹಿಕ ಅನ್ನಸಂತರ್ಪಣೆ ನೆರವೇರಿಸಲಾಗುತ್ತದೆ.

    ದೇಗುಲಕ್ಕೆ ದಾರಿ
    ಮೈಸೂರು, ಮಂಡ್ಯ, ಹಾಸನ, ಚನ್ನರಾಯಪಟ್ಟಣದಿಂದ ಕೆ.ಆರ್.ಪೇಟೆಗೆ ಬಂದು ಪಟ್ಟಣದ ಗ್ರಾಮ ಭಾರತಿ ಸರ್ಕಲ್ ಮೂಲಕ ಹೇಮಗಿರಿ ರಸ್ತೆಯಲ್ಲಿ ಕರೋಟಿ ಗ್ರಾಮಕ್ಕೆ ಬಂದು ಅಲ್ಲಿಂದ ಅರಣ್ಯ ಪ್ರದೇಶದಲ್ಲಿರುವ ದೇವಸ್ಥಾನಕ್ಕೆ ತಲುಪಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts