More

    ಡಯಾಲಿಸಿಸ್‌ಗೆ ಬೆಡ್ ಕೊರತೆ, ಕಾಯುತ್ತಿದ್ದಾರೆ 50 ರೋಗಿಗಳು

    ಗೋಪಾಲಕೃಷ್ಣ ಪಾದೂರು ಉಡುಪಿ

    ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಡ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರ ಸಂಜೀವಿನಿ. ಬೆಡ್‌ಗಳ ಕೊರತೆ ಹಾಗೂ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇರುವ ಕಾರಣ, ಅನೇಕ ಮಂದಿ ಈ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಉಡುಪಿ ಜಿಲ್ಲಾಸ್ಪತ್ರೆಯ 10 ಬೆಡ್‌ಗಳಲ್ಲಿ 4 ಗಂಟೆಗೆ ಒಬ್ಬರಂತೆ 90 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ, 50 ಮಂದಿ ಇನ್ನೂ ಅವಕಾಶಕ್ಕಾಗಿ ಕಾದು ಕುಳಿತಿದ್ದಾರೆ. ಹೀಗಾಗಿ ಹೆಚ್ಚುವರಿ ಬೆಡ್‌ಗಳಿಗೆ ಬೇಡಿಕೆ ಕೇಳಿಬರುತ್ತಿದೆ.

    ಪ್ರಸ್ತುತ ಜಿಲ್ಲಾಸ್ಪತ್ರೆ ಡಯಾಲಿಸಿಸ್ ಕೇಂದ್ರದಲ್ಲಿ 10 ಬೆಡ್, ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ 3 ಬೆಡ್, ಕಾರ್ಕಳ ತಾಲೂಕು ಆಸ್ಪತ್ರೆಯಲ್ಲಿ 2 ಬೆಡ್‌ಗಳಿವೆ. ಹೆಚ್ಚುವರಿ 5 ಬೆಡ್‌ಗಳನ್ನು ಜಿಲ್ಲೆಗೆ ನೀಡಲು ಆರೋಗ್ಯ ಇಲಾಖೆ ಒಪ್ಪಿಗೆ ಸೂಚಿಸಿದೆ. ಆದರೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಾಗದ ಕೊರತೆಯಿಂದ ಸದ್ಯ ಇರುವ ಕೇಂದ್ರವನ್ನು ವಿಸ್ತರಿಸಲು ಸಾಧ್ಯವಿಲ್ಲ. ಹೊಸದಾಗಿ ನಿರ್ಮಿಸಿದ ಬ್ರಹ್ಮಾವರ ತಾಲೂಕು ಆಸ್ಪತ್ರೆಯಲ್ಲಿ 5 ಬೆಡ್‌ಗಳ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಂಜೂರಾತಿ ದೊರೆಯದೆ ಬಡರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತಿಂಗಳಿಗೆ ಬೇಕು 24 ಸಾವಿರ ರೂ.: ಮೂತ್ರಪಿಂಡ ಸಮಸ್ಯೆ ಇರುವವರು ವಾರಕ್ಕೆ ಎರಡರಿಂದ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿ ಡಯಾಲಿಸಿಸ್‌ಗೆ 1,500ದಿಂದ 2 ಸಾವಿರ ರೂ. ವೆಚ್ಚವಾಗುತ್ತದೆ. ಬಡ ಕುಟುಂಬಗಳಿಗೆ ಇದು ಹೊರೆ. ಸರ್ಕಾರಿ ಆಸ್ಪತ್ರೆಯಲ್ಲಿ ಕ್ಲಪ್ತ ಸಮಯದಲ್ಲಿ ಸೌಲಭ್ಯ ದೊರೆಯದಿದ್ದರೆ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ರಾಜ್ಯ ಸರ್ಕಾರ ಪಿಪಿಪಿ ಮಾದರಿಯಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಿದೆ. ಜಿಲ್ಲೆಯಲ್ಲಿ 3 ವರ್ಷದಿಂದ ಡಯಾಲಿಸಿಸ್ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, 12 ಮಂದಿ ಹೊರಗುತ್ತಿಗೆ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ಡಯಾಲಿಸಿಸ್ ಮಾಡಲು 4 ಗಂಟೆ ಬೇಕಾಗುತ್ತದೆ. ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಘಟಕ ಕಾರ್ಯನಿರ್ವಹಿಸುತ್ತಿದೆ.

    ಆರೋಗ್ಯ ಕರ್ನಾಟಕ ತೊಡಕು
    ರಾಜ್ಯ ಸರ್ಕಾರ ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ್ ಒಂದುಗೂಡಿಸಿ ಹೊಸ ಆರೋಗ್ಯ ಯೋಜನೆ ಜಾರಿ ಮಾಡಿದ್ದು, ಫಲಾನುಭವಿಗಳು ಮೊದಲಿಗೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯವಿಲ್ಲದಿದ್ದರೆ ರೆಫರಲ್ ಲೆಟರ್ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ. ಈ ನಿಯಮ ಡಯಾಲಿಸಿಸ್ ರೋಗಿಗಳಿಗೆ ಕಂಟಕವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಕಾರ್ಯನಿರ್ವಹಿಸುತ್ತಿರುವ ಕಾರಣ, ಬೆಡ್ ಖಾಲಿ ಇಲ್ಲದಿದ್ದರೂ ವೈದ್ಯರು ಇಲ್ಲಿ ಸೌಲಭ್ಯವಿಲ್ಲ ಎಂದು ರೆಫರಲ್ ಲೆಟರ್ ಕೊಡುವಂತಿಲ್ಲ. ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆ ಪ್ರಕಾರ 2011ರ ಜನಗಣತಿಯಲ್ಲಿ ಗುರುತಿಸಿರುವ ಅರ್ಹ ಫಲಾನುಭವಿಗಳು ನೇರವಾಗಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬಹುದು. ಆದರೆ ಕರ್ನಾಟಕದ ರೋಗಿಗಳಿಗೆ ಈ ಭಾಗ್ಯವಿಲ್ಲ.

    ಜಿಲ್ಲಾಸ್ಪತ್ರೆ ಆವರಣದಲ್ಲಿ ಹೊಸ ಡಯಾಲಿಸಿಸ್ ಕೇಂದ್ರಕ್ಕೆ ಜಾಗದ ಕೊರತೆ ಇದೆ. ಜಿಲ್ಲಾಸ್ಪತ್ರೆಯಲ್ಲಿ 90 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 50 ಮಂದಿ ನಿರೀಕ್ಷಣಾ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಸುಸಜ್ಜಿತವಾಗಿ ನಿರ್ಮಾಣವಾಗಿರುವ ಬ್ರಹ್ಮಾವರ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 5 ಬೆಡ್‌ಗಳ ಘಟಕ ತೆರೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
    – ಡಾ. ಮಧುಸೂದನ ನಾಯಕ್, ಡಿಸ್ಟ್ರಿಕ್ಟ್ ಸರ್ಜನ್, ಜಿಲ್ಲಾಸ್ಪತ್ರೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts