More

    ದರೋಡೆ ನಾಟಕದಿಂದ ಹವಾಲ ಜಾಲ ಬಯಲಿಗೆ, ಐವರ ಬಂಧನ

    ಮಂಗಳೂರು: ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿ ಸ್ಕೂಟರ್ ತಡೆದು 16.20 ಲಕ್ಷ ರೂ. ದರೋಡೆ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ತನಿಖೆ ನಡೆಸಿದಾಗ ಬೃಹತ್ ಹವಾಲ ಜಾಲ ಬಯಲಿಗೆ ಬಂದಿದೆ. ದೂರುದಾರನೇ ಈ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕುಟುಂಬ ಸಮೇತ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.

    ಉಳ್ಳಾಲ ನಿವಾಸಿ, ಮೀನು ವ್ಯಾಪಾರಿ ಮುಹಮ್ಮದ್ ರಿಾತ್(27), ೈಸಲ್ ನಗರದ ಅಸ್ಪಾಖ್ ಯಾನೆ ಜುಟ್ಟು ಅಶ್ಫಕ್(24), ಬಿಸಿರೋಡು ನಿವಾಸಿ, ಮರಳು ವ್ಯವಹಾರ ನಡೆಸುತ್ತಿದ್ದ ಪರ್ಲಿಯಾದ ಜಾರ್ ಸಾದಿಕ್(22), ಬಿ.ಸಿ. ರೋಡು ಕೈಕಂಬದ ನಿವಾಸಿ, ಹಲವು ವರ್ಷ ದುಬೈಯಲ್ಲಿದ್ದು, ಹಿಂತಿರುಗಿದ್ದ ಮಹಮ್ಮದ್ ಇಸ್ಮಾಯಿಲ್(39) ಮತ್ತು ಪಡುಬಿದ್ರಿ ನಿವಾಸಿ, ಚಾಲಕನಾಗಿದ್ದ ಕೆ.ಎಚ್.ಮಯ್ಯದ್ದಿ(27) ಎಂಬವರನ್ನು ಬಂಧಿಸಲಾಗಿದೆ. ಇದೇ ವೇಳೆ 95,000 ರೂ. ನಗದು, ಬೈಕ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ರಿಫಾತ್ ವಿರುದ್ಧ ಬಂಟ್ವಾಳ ನಗರ, ಮಂಗಳೂರು ಗ್ರಾಮಾಂತರ, ಉಳ್ಳಾಲ, ಮಂಗಳೂರು ನಗರ ಠಾಣೆಗಳಲ್ಲಿ ಹಲವು ಪ್ರಕರಣಗಳು ಹಾಗೂ ಅಶ್ಫಕ್ ವಿರುದ್ಧ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ ಹಾಗೂ ಮಹಮ್ಮದ್ ಇಸ್ಮಾಯಿಲ್ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂರಲ್ಪಾಡಿಯ ಅಬ್ದುಲ್ ಸಲಾಂ ಹೆಣೆದ ದರೋಡೆ ಕಥೆ ಅತ್ಯಂತ ವ್ಯವಸ್ಥಿತ ನಾಟಕ. ಈ ಪ್ರಕರಣದ ಮೂಲಕ ಕೋಟ್ಯಂತರ ರೂ. ವ್ಯವಹಾರದ ಹವಾಲಾ ಜಾಲ ಪತ್ತೆಯಾಗಿದೆ ಎಂದರು.

    ಫೆ. 22ರಂದು ಘಟನೆ ನಡೆದಿದೆ. ಅಕ್ಕನ ಮಗಳ ಮದುವೆಗೆ ಚಿನ್ನ ಹಾಗೂ ಬಟ್ಟೆ ಖರೀದಿಸಲೆಂದು ನಗದಿನೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಮೂರು ಮಂದಿ ದಾರಿಯಲ್ಲಿ ಅಡ್ಡಗಟ್ಟಿ ಗಮನ ಬೇರೆಡೆ ಸೆಳೆದು ಹಣ ದೋಚಿ ಪರಾರಿಯಾಗಿದ್ದಾಗಿ ಸೂರಲ್ಪಾಡಿಯ ಅಬ್ದುಲ್ ಸಲಾಂ ಮಾ. 4ರಂದು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದ. ಅದರಂತೆ ತನಿಖೆ ಆರಂಭಗೊಂಡು ಸಿಸಿಟಿವಿ ಪರಿಶೀಲಿಸಿದಾಗ ನಾಲ್ಕೈದು ಮಂದಿಯ ತಂಡ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂತು ಎಂದು ಆಯುಕ್ತರು ತಿಳಿಸಿದರು.

    ಕೋಟ್ಯಂತರ ರೂ. ವರ್ಗಾವಣೆ ಶಂಕೆ: ರೋಪಿಗಳನ್ನು ಪತ್ತೆ ಹಚ್ಚಿ, ಹಣದ ಮೂಲ ಹುಡುಕಲು ಹೊರಟಾಗ ಹವಾಲ ವರ್ಗಾವಣೆಗಾಗಿ ವ್ಯಕ್ತಿಯೊಬ್ಬರಿಂದ ಈತ ಹಣ ಪಡೆದು ಬಂದಿದ್ದ. ದೂರುದಾತ ಸೇರಿದಂತೆ ಇತರ ಐದಾರು ಮಂದಿ ಹವಾಲ ವರ್ಗಾವಣೆ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು. ಈ ಏಜೆಂಟರು ಮಾಸಿಕ ತಲಾ 8000 ರೂ. ವೇತನ ಹಾಗೂ ಹಣ ವರ್ಗಾವಣೆ ಸಂದರ್ಭ ಕಮಿಷನ್ ರೂಪದ ಹಣ ಸೇರಿ ಒಟ್ಟು ತಿಂಗಳಿಗೆ ಸುಮಾರು 15000 ರೂ. ಸಂಪಾದಿಸುತ್ತಿದ್ದರು. ಆರೋಪಿಯಲ್ಲೊಬ್ಬ ಇಸ್ಮಾಯಿಲ್ ಈ ದರೋಡೆ ನಾಟಕದ ಪ್ರಮುಖ ಸೂತ್ರಧಾರ. ಆತನ ಯೋಜನೆಯಂತೆ ದೂರುದಾತ ಹಾಗೂ ಇತರ ನಾಲ್ವರನ್ನು ಸೇರಿಸಿಕೊಂಡು ದರೋಡೆ ನಾಟಕ ಮಾಡಲಾಗಿದೆ . ಹವಾಲ ವ್ಯವಹಾರದ ಮೂಲಕ ಕೋಟ್ಯಂತರ ರೂ. ವರ್ಗಾವಣೆಯಾಗಿರುವುದು ಸದ್ಯದ ತನಿಖೆಯಿಂದ ತಿಳಿದು ಬಂದಿದೆ. ಮಧ್ಯಪ್ರಾಚ್ಯ ರಾಷ್ಟ್ರದಿಂದಲೂ ಮಂಗಳೂರಿಗೆ ಹಣ ರವಾನೆಯಾಗಿ ಅದನ್ನು ವಿವಿಧೆಡೆ ಸಾಗಾಟ ಮಾಡಲು ವ್ಯವಸ್ಥಿತ ಜಾಲವನ್ನು ರಚಿಸಲಾಗಿರುವುದು ಗೊತ್ತಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

    ಗೋಷ್ಠಿಯಲ್ಲಿ ಡಿಸಿಪಿಗಳಾದ ವಿನಯ್ ಗಾಂವ್ಕರ್, ಹರಿರಾಂ ಶಂಕರ್ ಉಪಸ್ಥಿತರಿದ್ದರು.

    ದೂರುದಾರ ಮನೆ ಸದಸ್ಯರೊಂದಿಗೆ ಪರಾರಿ: ಆರಂಭದಲ್ಲಿ ಪೊಲೀಸರನ್ನು ದಾರಿ ತಪ್ಪಿಸುವ ಪ್ರಯತ್ನ ದೂರುದಾತ ಆರೋಪಿ ಹಾಗೂ ಇತರ ಬಂಧಿತ ಆರೋಪಿಗಳಿಂದ ನಡೆದಿದೆ. ತಾನೇ ಖುದ್ದು ಈ ಪ್ರಕರಣದ ಆಳಕ್ಕಿಳಿದಾಗ ಹವಾಲಾ ಜಾಲ ಬೆಳಕಿಗೆ ಬಂದಿದೆ. ಹವಾಲ ಹಣ ವರ್ಗಾವಣೆಗೆ ಇವರು ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಇದೊಂದು ವ್ಯವಸ್ಥಿತವಾಗಿ ನಡೆದ ಪ್ರಕರಣವಾಗಿದ್ದ ಕಾರಣ ಹಲವು ದಿನಗಳ ಕಾಲ ದೂರನ್ನೂ ನೀಡಿರಲಿಲ್ಲ. ಹಣ ಪಡೆಯಬೇಕಿದ್ದವರು ಹಾಗೂ ಹಣ ನೀಡಿದವರಿಂದ ಒತ್ತಡ ಬಂದಾಗ ದೂರು ನೀಡಲಾಗಿದೆ. ದೂರು ನೀಡಿದಾತ ಪೂರ್ಣ ಪ್ರಮಾಣದ ಹವಾಲ ಏಜೆಂಟ್ ಆಗಿದ್ದು, ಇದೀಗ ಮನೆಯವರೊಂದಿಗೆ ಪರಾರಿಯಾಗಿದ್ದಾನೆ. ಹುಡುಕುವ ಪ್ರಯತ್ನ ನಡೆದಿದೆ. ಈ ಪ್ರಕರಣದಲ್ಲಿ ಇನ್ನೂ ಹಲವು ಆರೋಪಿಗಳಿದ್ದು, ಅವರಲ್ಲಿ ಇಬ್ಬರು ದುಬೈಗೆ ಹೋಗಿರುವುದೂ ಬೆಳಕಿಗೆ ಬಂದಿದೆ. ಮಂಗಳೂರಿನಿಂದಲೇ ಕಾರ್ಯಾಚರಿಸುತ್ತಿರುವ ಹವಾಲ ಪ್ರಕರಣದ ಪ್ರಮುಖ ವ್ಯಕ್ತಿ ಹಾಗೂ ಹವಾಲ ಜಾಲ ಬೇಧಿಸುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಸಂಬಂಧಿಸಿದ ಇಲಾಖೆ ಸಹಾಯ ಪಡೆಯಲಾಗುವುದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts