More

    ಕಡಲ್ಕೊರೆತ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ

    ಬೈಂದೂರು: ಪಡುವರಿ ಗ್ರಾಮದ ದೊಂಬೆ ಬಳಿ ಕಡಲ್ಕೊರೆತ ಉಂಟಾಗುತ್ತಿರುವ ಸ್ಥಳಕ್ಕೆ ಶಿಲೆಕಲ್ಲಿನ ತಡೆಗೋಡೆ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ.
    ಮಳೆಗಾಲ ಮಾತ್ರವಲ್ಲದೆ ಬೇಸಿಗೆಯಲ್ಲೂ ಈ ಪ್ರದೇಶದಲ್ಲಿ ನಿರಂತರ ಕಡಲ್ಕೊರೆತ ಉಂಟಾಗುತ್ತಿತ್ತು. ಇತ್ತೀಚೆಗೆ ಸಂಭವಿಸಿದ ಕಡಲ್ಕೊರೆತದಿಂದ ಕಡಲ ಕಿನಾರೆಯ ಹತ್ತಾರು ತೆಂಗಿನ ಮರ ಹಾಗೂ ಚಿಕ್ಕ ಗುಡಿ ಸಮುದ್ರ ಪಾಲಾಗಿತ್ತು. ಇಲ್ಲಿನ ಸಮಸ್ಯೆ ಪರಿಹರಿಸುವಂತೆ ಕೋರಿ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದರು. ಆದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿರಲಿಲ್ಲ.
    ದೊಂಬೆಯಲ್ಲಿ ಸಂಭವಿಸುತ್ತಿರುವ ನಿರಂತರ ಕಡಲ್ಕೊರೆತ ಹಾಗೂ ಅದರಿಂದ ಜನರಿಗೆ ಆಗುತ್ತಿರುವ ಸಮಸ್ಯೆ ಬಗ್ಗೆ ವಿಜಯವಾಣಿ ವಿಸ್ತೃತ ವರದಿ ಪ್ರಕಟಿಸಿ ಅಧಿಕಾರಿಗಳನ್ನೂ, ಜನಪ್ರತಿನಿಧಿಗಳನ್ನು ಎಚ್ಚರಿಸಿತ್ತು. ವರದಿಗೆ ಸ್ಪಂದಿಸಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಡಲ್ಕೊರೆತ ಸ್ಥಳಕ್ಕೆ ಭೇಟಿ ಕೊಟ್ಟು ಶೀಘ್ರ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದ್ದರು. ಪ್ರಸ್ತುತ ಎರಡು ಕೋಟಿ ರೂಪಾಯಿ ಅನುದಾನ ನೀಡುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದರು.
    ಸದ್ಯ ಕಡಲ್ಕೊರೆತ ಸಂಭವಿಸುವ ಸ್ಥಳದಲ್ಲಿ ಶಿಲೆಕಲ್ಲುಗಳನ್ನು ಜೋಡಿಸಲಾಗುತ್ತಿದೆ. ಇದರಿಂದ ಸ್ಥಳೀಯರಲ್ಲಿ ಒಂದಷ್ಟು ನೆಮ್ಮದಿ, ಸಂತೃಪ್ತಿಯ ಭಾವ ಮೂಡಿದೆ. ಜನಪ್ರತಿನಿಧಿಗಳ ಸ್ಪಂದನೆಗೆ ಈ ಭಾಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪ್ರತಿವಾರವೂ ಬೃಹತ್ ಅಲೆಗಳ ಹೊಡೆತ
    ಪಡುವರಿ ಗ್ರಾಮದ ದೊಂಬೆ ಜಟ್ಟಿಗೇಶ್ವರ ದೇವಸ್ಥಾನ ಬಳಿ ಮಳೆಗಾಲದ ನಂತರವೂ ಕಡಲ್ಕೊರೆತ ಮುಂದುವರಿದ ಪರಿಣಾಮ ಈ ಭಾಗದಲ್ಲಿರುವ ಸುಮಾರು 40 ವರ್ಷದ ಹಳೆಯದಾದ ಮೀನು ತುಂಬಿಸುವ ಟ್ಯಾಂಕ್ ಸಮುದ್ರ ಪಾಲಾಗಿತ್ತು. ಪ್ರತಿವಾರವೂ ಕಡಲ್ಕೊರೆತದಿಂದ ಕಡಲತೀರದ ಕೆಲವು ಮನೆಗಳಿಗೆ ಹಾನಿಯಾಗಿದ್ದು, ತೆಂಗಿನ ಮರಗಳು ಸಮುದ್ರ ಪಾಲಾಗಿವೆ. ಪ್ರತಿವರ್ಷ ಮಳೆಗಾಲದಲ್ಲಿ ಬೃಹತ್ ಅಲೆಗಳ ಹೊಡೆತಕ್ಕೆ ಕಡಲ್ಕೊರೆತವಾಗುವುದು ಸಾಮಾನ್ಯ. ಅದಕ್ಕಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ದುರದೃಷ್ಟವಶಾತ್ ಈ ವಷ ಮಳೆಗಾಲದಲ್ಲಿ ಆರಂಭಗೊಂಡ ಕಡಲ್ಕೊರೆತ ಕಳೆದ ವಾರಗಳವರೆಗೆ ಮುಂದುವರಿದಿದ್ದು, ಇದರಿಂದ ಪರಿಸರದ ಜನ ಆತಂಕದಲ್ಲಿ ಕಾಲ ಕಳೆಯುವಂತಾಗಿತ್ತು. ಈ ಬಗ್ಗೆ ಸ್ಥಳೀಯರು ಅಂದಿನ ಬೈಂದೂರು ತಹಸೀಲ್ದಾರ ಬಿ.ಪಿ.ಪೂಜಾರ್, ಪಡುವರಿ ಗ್ರಾಮ ಲೆಕ್ಕಿಗರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳ ಪರಿಶೀಲನೆ ಮಾಡಿ ವರದಿ ತಯಾರಿಸಿದ್ದರು.

    ಈ ವರ್ಷ ದೊಂಬೆ ಕಡಲ ತೀರದಲ್ಲಿ ಮಳೆಗಾಲದ ನಂತರವೂ ಕಡಲ್ಕೊರೆತವಾಗುತ್ತಿದ್ದು, ಈ ಬಗ್ಗೆ ಸ್ಥಳೀಯರ ಬೇಡಿಕೆಯಂತೆ ಅಂದಿನ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರ ಕೋರಿಕೆ ಮೇರೆಗೆ ತಾತ್ಕಾಲಿಕ ತಡೆಗೋಡೆ ನಿರ್ಮಾಣಕ್ಕೆ 2 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅನುದಾನ ಇನ್ನೂ ಮಂಜೂರಾಗಿಲ್ಲವಾದರೂ ತುಂಬ ಅಪಾಯಕಾರಿ ಸ್ಥಿತಿಯಲ್ಲಿರುವ ಕೆಲವು ಮನೆಗಳಿಗೆ ತೊಂದರೆಯಾಗಬಾರದೆಂಬ ನೆಲೆಯಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಾಣವಾಗುತ್ತಿದೆ. ಹಣ ಮಂಜೂರಾದ ನಂತರ ಶಾಶ್ವತ ತಡೆಗೋಡೆ ನಿರ್ಮಿಸಲಾಗುವುದು.
    ಸುರೇಶ ಬಟ್ವಾಡಿ, ಜಿಲ್ಲಾ ಪಂಚಾಯಿತಿ ಸದಸ್ಯರು ಶಿರೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts