More

    ಮಾದಕ ಔಷಧ ಮಾರಾಟ ಮಾಡುವಾಗ ಎಚ್ಚರವಿರಲಿ

    ಚಿಕ್ಕಮಗಳೂರು: ಮಾದಕ ಔಷಧಗಳನ್ನು ಪದೇಪದೆ ಕೇಳುವ ವ್ಯಕ್ತಿಗಳ ವಿರುದ್ಧ ಮಾರಾಟಗಾರರು ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಮೂಲಕ ಅವರಿಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಎಎಸ್ಪಿ ಕೃಷ್ಣಮೂರ್ತಿ ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಔಷಧ ವ್ಯಾಪಾರಿಗಳಿಗಾಗಿ ಏರ್ಪಡಿಸಿದ್ದ ಮಾದಕ ಔಷಧಗಳ ದುರುಪಯೋಗ ತಡೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮನುಷ್ಯನಿಗೆ ಮತ್ತೇರಿಸುವ ಔಷಧಗಳನ್ನು ವೈದ್ಯರ ಶಿಫಾರಸು ಇಲ್ಲದೆ ನೀಡಬಾರದು. ಮಾದಕ ಔಷಧ ಸೇವನೆ ಮಾಡಿದ ವ್ಯಕ್ತಿ ಯಾವುದೇ ರೀತಿ ಅಪರಾಧವೆಸಗಿದರೆ ಪೊಲೀಸರಿಗೆ ಮಾಹಿತಿ ನೀಡಿ ವಿಚಾರಣೆಯಲ್ಲಿ ಯಾವ ಅಂಗಡಿಯಲ್ಲಿ ಸಿಕ್ಕಿತು ಎಂದು ಒಪ್ಪಿಕೊಂಡರೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
    18 ವರ್ಷ ಕೆಳಗಿನವರು ಮಾದಕ ಔಷಧಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದು ಪತ್ತೆಯಾಗುತ್ತಿದೆ. ಪೊಲೀಸರು ಬಹಳಷ್ಟು ದೂರುಗಳನ್ನು ದಾಖಲಿಸಿದರೂ ತಿಳಿವಳಿಕೆ ಬಂದಂತಿಲ್ಲ. ಹೆಚ್ಚಾಗಿ ಅಲ್ಪಸಂಖ್ಯಾತ ಸಮಾಜಗಳ ಯುವಕರು ಮಾದಕ ಔಷಧ ತೆಗೆದುಕೊಳ್ಳುತ್ತಿರುವುದು ಪತ್ತೆಯಾಗುತ್ತಿದೆ. ಮಸೀದಿ, ಸಾರ್ವಜನಿಕ ಸಭೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದರೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಹೇಳಿದರು.
    2020ರಲ್ಲಿ 178 ಕೆ.ಜಿ ಗಂಜಾ ವಶಪಡಿಸಿಕೊಂಡು 50 ಪ್ರಕರಣ, 2021ರಲ್ಲಿ 212 ಕೆ.ಜಿ ಗಾಂಜಾ ವಶಪಡಿಸಿಕೊಂಡು 23 ಪ್ರಕರಣ, 22ರಲ್ಲಿ 15 ಕೆ.ಜಿ ಗಂಜಾ, 266 ಪ್ರಕರಣ, ಪ್ರಸಕ್ತ ಸಾಲಿನಲ್ಲಿ ಇದುವರೆಗೂ 16 ಕೆ.ಜಿ. ಜಪ್ತಿ ಮಾಡಿ 106 ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳ ಪೈಕಿ ಯುವಕರು ಗಾಂಜಾ ಸೇವನೆ ಮಾಡಿರುವುದು ಪತ್ತೆಯಾಗುತ್ತಿದೆ. ಇಷ್ಟು ಗಂಭೀರವಾದ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದರೂ ಆಗಾಗ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ ಎಂದು ಬೇಸರ ವ್ಯಕ್ತಪಡಿಸಿದರು.
    ಚಿಕ್ಕಮಗಳೂರು ಜಿಲ್ಲೆ ಪ್ರವಾಸಕ್ಕೆ ಉತ್ತಮ ತಾಣ. ವಾರಾಂತ್ಯದಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಲ್ಲಿಯೂ ಕೆಲವರು ಮಾದಕ ವಸ್ತುಗಳ ಸೇವನೆ ಮಾಡಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಅವರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಔಷಧ ನೀಡಿದ ಅಂಗಡಿ ತೋರಿಸಿದರೆ ಮಾಲೀಕನ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
    ಜಿಲ್ಲಾ ಡ್ರಗ್ ನಿಯಂತ್ರಣಾಧಿಕಾರಿ ಓಂಕಾರೇಶ್ವರ ಮಾತನಾಡಿ, ರೋಗಿಗೆ ಔಷಧ ವಿತರಣೆ ನೀಡುವ ಮೊದಲು ಅದರ ಬಗ್ಗೆ ಅರಿವು ಪಡೆದುಕೊಳ್ಳಬೇಕು. ಮಾದಕ ಔಷಧಗಳನ್ನು ಕೇಳಿದಾಗ ಎಚ್ಚರವಹಿಸಬೇಕು. ಯಾಕೆ ತೆಗೆದುಕೊಳ್ಳಬೇಕು ಎಂಬದರ ಬಗ್ಗೆ ಕೇಳಬೇಕು. ಗಂಭೀರ ಕಾಯಿಲೆ ಸಂಬಂಧ ವೈದ್ಯರ ಹೆಸರಿಲ್ಲದ ಚೀಟಿಗಳನ್ನು ತೋರಿಸುವುದು. ದಿನಾಂಕ ಮುಗಿದಿರುವ ಚೀಟಿಯನ್ನು ತೋರಿಸಿ ಖರೀದಿ ಮಾಡುತ್ತಾರೆ, ಔಷಧ ಮಾರಾಟಗಾರರು ಇದಕ್ಕೆ ಸಹಕಾರ ನೀಡಬಾರದು. ಸಾಮಾಜಿಕ ಜವಾಬ್ದಾರಿ ಆಧಾರ ಮೇಲೆ ಔಷಧಗಳನ್ನು ಮಾರಾಟ ಮಾಡಬೇಕು ಎಂದು ಹೇಳಿದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಔಷದ ವಿತರಕರ ಸಂಘದ ಅಧ್ಯಕ್ಷ ಶಿವಾನಂದ, ಕಾನುನು ಅಧೀಕ್ಷಕ ರಾಘವೇಂದ್ರ ಮತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts