More

    ರೈಲ್ವೆ ಮಾರ್ಗದ ಸರ್ವೆಗೆ ಬಂದರೆ ಹುಷಾರ್: ರಟ್ಟಿಹಳ್ಳಿ ರೈತರ ಎಚ್ಚರಿಕೆ

    ರಟ್ಟಿಹಳ್ಳಿ: ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರ ರೈಲ್ವೆ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದೊಂದಿಗೆ ತಾಲೂಕಿನ ರೈತರು ಸೋಮವಾರ ಧರಣಿ ನಡೆಸಿ, ಸರ್ವೆ ಕಾರ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮತ್ತು ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ರೈಲ್ವೆ ಯೋಜನೆಗೆ ಭೂಸ್ವಾಧಿನ ಮಾಡುವುದರಿಂದ ಪಟ್ಟಣದ ಅನೇಕ ಮನೆಗಳು ಮತ್ತು ಶಾಲೆಗಳಿಗೆ ತೊಂದರೆಯಾಗುತ್ತದೆ. ಈಗಾಗಲೇ ತುಂಗಾ ಮೇಲ್ದಂಡೆ ಯೋಜನೆಗೆ ಭೂಮಿ ಕಳೆದುಕೊಂಡ ತಾಲೂಕಿನ ರೈತರಿಗೆ ಇನ್ನೂತನಕ ಸಮರ್ಪಕ ಪರಿಹಾರ ದೊರಕಿಲ್ಲ. ವಸತಿ ಪ್ರದೇಶಗಳಿಗೆ ತೊಂದರೆಯಾಗದಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಬೇಕು. ರೈತರ ಸಮಸ್ಯೆಗಳಿಗೆ ಪರಿಹಾರ ದೊರಕದೆ, ಸರ್ವೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರೆ ಅವರನ್ನು ಜಮೀನಿನಲ್ಲಿಯೇ ಕಟ್ಟಿ ಹಾಕಲಾಗುವುದು ಎಂದು ಎಚ್ಚರಿಸಿದರು.

    ಹೋರಾಟ ಸಮಿತಿ ಮುಖಂಡ ಉಜಿನೆಪ್ಪ ಕೋಡಿಹಳ್ಳಿ ಮಾತನಾಡಿ, ಪಟ್ಟಣದ ಉತ್ತರ ಭಾಗದ ಶಿರಗಂಬಿ, ಹಿರೇಕೆರೂರು ಮತ್ತು ಯಡಚಿ ರಸ್ತೆ ಸುತ್ತಮುತ್ತ ಪ್ರದೇಶ ವಸತಿಗೆ ಅನುಕೂಲವಾಗಿದ್ದು, ಇದೇ ಪ್ರದೇಶದಲ್ಲಿ ರೈಲ್ವೆ ಯೋಜನೆಯ ಸರ್ವೆ ಕಾರ್ಯ ನಡೆಯುತ್ತಿದೆ. ಈ ಅಸಮರ್ಪಕ ಮತ್ತು ಅವೈಜ್ಞಾನಿಕ ರೈಲ್ವೆ ಯೋಜನೆಯ ಮಾರ್ಗವನ್ನು ಪಟ್ಟಣದಿಂದ ಹೊರಗಡೆ ಮಾಡಬೇಕು ಎಂದು ಒತ್ತಾಯಿಸಿದರು.

    ಶಂಕ್ರಗೌಡ ಶಿರಗಂಬಿ, ನಾಗನಗೌಡ ಕೋಣ್ತಿ, ಶಂಕರಗೌಡ ಚೆನ್ನಗೌಡ್ರ, ಜಟ್ಟೆಪ್ಪ ಮಳಗೊಂಡರ, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಪ್ಯಾಟಿ, ಗುಡ್ಡನಗೌಡ ಪ್ಯಾಟಿಗೌಡ್ರ, ಹನುಮಂತಪ್ಪ ಗಾಜೇರ, ಶಂಭಣ್ಣ ಗೂಳಪ್ಪನವರ, ರವಿ ಹದಡೇರ, ಎಸ್.ಜಿ. ಚೂರಿ, ಪ್ರಭು ಮುದಿವೀರಣ್ಣನವರ, ನಾಗನಗೌಡ ಪಾಟೀಲ, ಗಣೇಶ ಹಾದಿಮನಿ, ವಿಜಯ ನಾಯಕ, ಮಂಜಣ್ಣ ಬಾಗೋಡಿ, ಯಲ್ಲಪ್ಪ ಮರಾಠೆ, ಗಣೇಶ ಸಾಳುಂಕೆ, ಬಸನಗೌಡ ಗಂಟೆಪ್ಪಗೌಡ್ರ, ದೇವರಾಜ ಸೂರ್ಯವಂಶಿ, ಶೇಖರಪ್ಪ ಹಳ್ಳಿಯಾಳ, ಉಜ್ಜಪ್ಪ ದ್ಯಾವಕ್ಕಳವರ ಇತರರು ಇದ್ದರು.

    ಸ್ಥಳ ಪರಿಶೀಲನೆ ಇಂದು

    ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಜಿಲ್ಲಾ ಉಪವಿಭಾಗದಿಕಾರಿ ಎಚ್.ಬಿ. ಚೆನ್ನಪ್ಪನವರ, ಜ. 30ರಂದು ಬೆಳಗ್ಗೆ 8 ಗಂಟೆಗೆ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸುತ್ತೇವೆ. ಈ ಕುರಿತು ಶಾಸಕ ಯು.ಬಿ. ಬಣಕಾರ ಅವರೊಂದಿಗೆ ಮಾತನಾಡಲಾಗಿದೆ. ಶೀಘ್ರವೇ ಜಿಲ್ಲಾ ಕಚೇರಿಯಲ್ಲಿ ರೈತ ಮುಖಂಡರು, ಸ್ಥಳೀಯ ನಿವಾಸಿಗಳೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಮಾಡಲಾಗುವುದು. ಅಲ್ಲಿಯವರೆಗೆ ಸರ್ವೆ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳ ಭರವಸೆಯಿಂದ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts