More

    ಧರ್ಮ ರಕ್ಷಣೆ ಮಾಡುವಲ್ಲಿ ಕಾರ್ಯಪ್ರವೃತ್ತರಾಗಿ

    ತಿ.ನರಸೀಪುರ: ನಾವು ಧರ್ಮ ರಕ್ಷಣೆ ಮಾಡಿದಲ್ಲಿ ಅದು ಆಪತ್ಕಾಲದಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತದೆ. ಹಾಗಾಗಿ ನಾವೆಲ್ಲರೂ ಧರ್ಮ ರಕ್ಷಣೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಮುಡುಕುತೊರೆ ಕ್ಷೇತ್ರ ತೋಪಿನಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿ ಸಲಹೆ ನೀಡಿದರು.


    ವೀರಶೈವ ಸಮಾಜ ಸೇವಾ ಸಮಿತಿ ಆಶ್ರಯದಲ್ಲಿ ಪಟ್ಟಣದ ಚಿಕ್ಕಂಗಡಿ ಬೀದಿಯಲ್ಲಿರುವ ಶ್ರೀತ್ರೈಯಂಬಕೇಶ್ವರಮಠ ಮತ್ತು ರೇಣುಕಾ ಶತಮಾನೋತ್ಸವ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀಜಗದ್ಗುರು ಪಂಚಾಚಾರ್ಯರ ಯುಗ ಮಾನೋತ್ಸವ, ರೇಣುಕಾ ಸಭಾ ಭವನದ 20ನೇ ವಾರ್ಷಿಕೋತ್ಸವ ಮತ್ತು ಗೌರವ ಗುರುರಕ್ಷೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಧ್ಯ ವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.


    ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ, ನಾವೆಲ್ಲರೂ ಧರ್ಮ ರಕ್ಷಣೆಗೆ ಮುಂದಾಗಬೇಕು, ದೇವರು ಯಾವುದೇ ರೂಪದಲ್ಲಿಯಾದರೂ ಬರಬಹುದಾಗಿದೆ. ಅಸಹಾಯಕನಾಗಿ, ಭಿಕ್ಷುಕನ ರೂಪದಲ್ಲಿ ಬರಬಹುದು. ವ್ಯಕ್ತಿಯ ಬಗ್ಗೆ ಕೀಳರಿಮೆ ಮಾಡದೇ ನಿಮ್ಮ ಕೈಲಾದ ಸಹಾಯ ಮಾಡಿ, ಇಂದು ಯಾವುದೂ ಶಾಶ್ವತವಲ್ಲ, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ, ಅಹಂಕಾರ ಬೆಳೆಸಿಕೊಂಡು ನಾನು ಎನ್ನದೇ ನಾವು ಎಂದು ಮುಂದೆ ಸಾಗಬೇಕು, ಸಮಾಜದ ಕೆಲಸಗಳನ್ನು ಮಾಡುತ್ತಾ ಹೋಗಬೇಕು ಎಂದರು.


    ಮನುಷ್ಯನನ್ನು ಸಮಾಜಮುಖಿಯೆಡೆಗೆ ಕರೆದೊಯ್ಯಬೇಕಾದರೆ ಧಾರ್ಮಿಕ ಕಾರ್ಯಕ್ರಮಗಳ ಅವಶ್ಯಕತೆ ಬಹು ಮುಖ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶ್ರೀಗಳು, ಮನುಷ್ಯ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಸಂಸ್ಕಾರ ಇಲ್ಲದಿದ್ದರೆ ಶೂನ್ಯ ಎನಿಸಿಕೊಳ್ಳುತ್ತಾನೆ. ಅಧಿಕಾರ, ಹಣ ಮುಖ್ಯವಲ್ಲ ಸಂಸ್ಕಾರ ಮುಖ್ಯ, ಮಕ್ಕಳಿಗೆ ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಸಂಪ್ರದಾಯ ಕಲಿಸದಿದ್ದರೆ ಎಷ್ಟೇ ಆಸ್ತಿ ಸಂಪಾದಿಸಿದರೂ, ವಿದ್ಯಾವಂತರನ್ನಾಗಿ ಮಾಡಿಯೂ ಪ್ರಯೋಜನವಾಗುವುದಿಲ್ಲ. ಕೆಲವರು ತಾವು ವಿದ್ಯಾವಂತರಾಗಿದ್ದೇವೆಂದು ಅಹಂಕಾರ ಬೆಳೆಸಿಕೊಂಡಿರುತ್ತಾರೆ, ಇದು ಸಲ್ಲದು ಎಂದರು.


    ಬೇರೆ ಯಾವುದೇ ದೇಶ ಅವನತಿ ಹಾದಿ ಹಿಡಿದರೂ ಭಾರತ ಎಮದಿಗೂ ಅವನತಿ ಹೊಂದಲು ಸಾಧ್ಯವಿಲ್ಲ. ಎಷ್ಟೇ ದಾಳಿಗಳಾದರೂ ದೇಶವನ್ನು ಯಾರಿಂದಲೂ ಹಾಳು ಮಾಡಲು ಆಗಲಿಲ್ಲ, ಏಕೆಂದರೆ ಸನಾತನವಾದ ಹಿಂದು ಧರ್ಮದಲ್ಲಿ ಅನೇಕ ಋಷಿ ಮುನಿಗಳು ವಾಸ ಮಾಡಿ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಆದ್ದರಿಂದಲೇ ಮಣ್ಣಿನಲ್ಲೇ ಧರ್ಮದ ವಾಸನೆ ಇದೆ ಎಂದರು.


    ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಕ್ಷೇತ್ರ ಗುಮ್ಮಳಾಪುರ ಸಂಸ್ಥಾನ ಮಠದ ಡಾ.ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ, ಕೆಲವರಿಗೆ ರೇಣುಕಾ ಜಯಂತಿ ಗೊತ್ತೇ ಇಲ್ಲ, ಬಸವಣ್ಣ ಜಯಂತಿ ಆಚರಣೆ ಮಾಡುತ್ತಾರೆ. ಆದರೆ ರೇಣುಕಾದಿ ಪಂಚಾಚಾರ್ಯರ ಜಯಂತಿ ಆಚರಣೆಗೆ ಆಸಕ್ತಿ ತೋರುತ್ತಿಲ್ಲ, ಮಠಗಳು ಭಕ್ತರ ಆಸ್ತಿ, ಹೆಸರಿಗೆ ಸ್ವಾಮೀಜಿಗಳು ಮಠದಲ್ಲಿರುತ್ತಾರಷ್ಟೆ ಎಂದರು.


    ನಾವು ಸಂಸ್ಕಾರವಂತರಾಗಿ ಮಕ್ಕಳಿಗೂ ಸಂಸ್ಕಾರ ಕಲಿಸಬೇಕು. ಮನೆ, ಮಠ, ಸಂಸಾರ ನಮ್ಮ ಹಿಂದೆ ಬರಲ್ಲ, ಸಂಸ್ಕಾರ ಮಾತ್ರವೇ ಬರುತ್ತದೆ. ಸಂಸ್ಕಾರ ಕಲಿತು ಇಷ್ಟಲಿಂಗ ಪೂಜೆ ಮಾಡಬೇಕು, ಶರಣರ ಮಾತನ್ನು ಕೇಳಬೇಕು ಎಂದು ತಿಳಿಸಿದರು.


    ಇದೇ ವೇಳೆ ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಉತ್ತಮ ಸಾಧನೆ ತೋರಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
    ಮೈಸೂರು ಸಿಗ್ಮಾ ಆಸ್ಪತ್ರೆಯ ನಿರ್ದೇಶಕ ಎಸ್.ಜ್ಞಾನಶಂಕರ್, ಹಲಗೂರು ವೀರಶೈವ ಸಮಾಜದ ಅಧ್ಯಕ್ಷ ಎನ್.ಮಹದೇವಸ್ವಾಮಿ, ಕಸಬಾ ಪಿಎಸಿಸಿಎಸ್ ಅಧ್ಯಕ್ಷ ಡಣಾಯಕನಪುರ ಮಲ್ಲಣ್ಣ, ಕೆಪಿಟಿಸಿಎಲ್ ಲೆಕ್ಕಾಧಿಕಾರಿ ಜಿ.ಎಂ.ಜಗದೀಶ್, ಡಾ.ಎಂ.ಅರ್ಜುನ್, ಡಾ.ಸುಷ್ಮಾ, ಕು.ಇಂಚರಾ ಅವರನ್ನು ವೀರಶೈವ ಸಮಾಜ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.


    ಸಾನಿಧ್ಯವನ್ನು ತ್ರಯ್ಯಂಬಕೇಶ್ವರ ಮಠದ ವೀರೇಶ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
    ಮದ್ದೂರು ತಾಲೂಕು ಚಂದೂಪುರ ರೇಣುಕಾ ಆಶ್ರಮದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಎಸ್.ಶಾಂತರಾಜು, ಉಪಾಧ್ಯಕ್ಷ ಎಸ್.ಶಿವಪ್ರಸಾದ್, ಕಾರ್ಯದರ್ಶಿ ಸಿ.ವೀರೇಶ್, ಸಂಚಾಲಕ ಬಿ.ನಂದೀಶ್, ಖಜಾಂಚಿ ಆರ್.ಸಿದ್ದಲಿಂಗಸ್ವಾಮಿ, ಅಂಗಡಿ ನಾಗೇಶ್, ಫ್ಯಾನ್ಸಿ ಮೋಹನ್, ಶೇಖರ್, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ತೋಂಟೇಶ್, ಚಾಮರಾಜನಗರ ಮಂಜುನಾಥ್, ಪಾಲಾಕ್ಷ ಮತ್ತಿತರ ಮುಖಂಡರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts