More

    ಬೇಡರ ವೇಷಕ್ಕೆ 2 ದಿನ ಅವಕಾಶ

    ಶಿರಸಿ: ಶಿರಸಿಯ ಸಾಂಪ್ರದಾಯಿಕ ಕಲೆಯಾದ ಬೇಡರ ವೇಷ ಪ್ರದರ್ಶನಕ್ಕೆ 4 ದಿನಗಳ ಬದಲಾಗಿ 2 ದಿನ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಬೇಡರ ವೇಷ ಸಮಿತಿ ಪ್ರಮುಖರು ಪ್ರತಿಭಟಿಸಿದ ಘಟನೆ ಮಂಗಳವಾರ ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆಯಿತು.

    ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಉಪವಿಭಾಗಧಿಕಾರಿ ಆಕೃತಿ ಬನ್ಸಾಲ್ ಮಾತನಾಡಿ, ಕರೊನಾ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ವಾರದಲ್ಲಿ 4 ಪ್ರಕರಣ ದಾಖಲಾಗಿದೆ. ಆದರೂ ಬೇಡರ ವೇಷಧಾರಿಗಳು ಸಾಕಷ್ಟು ದಿನಗಳಿಂದ ತಯಾರಿ ನಡೆಸಿದ ಕಾರಣ ಅವಕಾಶ ನೀಡಲು ಕೆಲ ವಿನಾಯಿತಿ ನೀಡಲಾಗಿದೆ. ಈ ಕಾರಣ ಸರ್ಕಾರದ ನಿರ್ದೇಶನದಂತೆ 4 ದಿನಗಳ ಬದಲು 2 ದಿನಗಳು ಮಾತ್ರ ಬೇಡರ ವೇಷ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಇಂಥ ನಿರ್ಣಯ ಅನಿವಾರ್ಯ ಎಂದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ ಮಾತನಾಡಿ, ದಿನ ನಿತ್ಯ ಜ್ವರದ ಪ್ರಕರಣ ಹೆಚ್ಚುತ್ತಿದೆ. ಉಸಿರಾಟದ ಸಮಸ್ಯೆ ಇರುವವರ ಸಂಖ್ಯೆ ಹೆಚ್ಚಿದೆ. ಬೇಡರವೇಷದ ಕಾರಣದಿಂದ ಕರೊನಾ ಹೆಚ್ಚಬಾರದು ಎಂಬ ಉದ್ದೇಶದಿಂದ ಈ ಕ್ರಮ ಸ್ವಾಗತಾರ್ಹ ಎಂದರು.

    ಡಿಎಸ್ಪಿ ರವಿ ನಾಯ್ಕ ಮಾತನಾಡಿ, ಜಿಲ್ಲಾಡಳಿತದಿಂದ ಒಂದೇ ದಿನ ಅವಕಾಶ ನೀಡುವಂತೆ ಸೂಚಿಸಲಾಗಿದೆ. ಆದರೆ ಸ್ಥಳೀಯ ಬೇಡರ ವೇಷ ಕಲಾವಿದರಿಗೆ ಅವಕಾಶ ನೀಡುವ ಉದ್ದೇಶದಿಂದ ಉಪವಿಭಾಗಾಧಿಕಾರಿಗಳು ಸ್ವತಃ 2 ದಿನದ ಅವಕಾಶ ನೀಡಲು ಮುಂದಾಗಿದ್ದಾರೆ. ಸಾರ್ವಜನಿಕರು ಸಹಕರಿಸಬೇಕು ಎಂದರು.

    ಇದಕ್ಕೆ ಬೇಡರ ವೇಷದ ಸಮಿತಿ ಪ್ರಮುಖರು, ಹೋಳಿ ಉತ್ಸವ ಸಮಿತಿ ಪ್ರಮುಖರು ಆಕ್ಷೇಪಿಸಿದ ಕಾರಣ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಅವರು 2 ದಿನಗಳ ಅವಕಾಶ ನೀಡಿ ಆದೇಶ ಹೊರಡಿಸುವುದಾಗಿ ಹೇಳಿ ಸಭೆ ಮುಕ್ತಾಯಗೊಳಿಸಿದರು.

    ನಂತರ ಬೇಡರ ವೇಷದ ಸಮಿತಿ ಪ್ರಮುಖರು, ಹೋಳಿ ಉತ್ಸವ ಸಮಿತಿ ಪ್ರಮುಖರು ಆಕೃತಿ ಬನ್ಸಾಲ್ ವಿರುದ್ಧ ಘೊಷಣೆ ಕೂಗಿದ್ದಲ್ಲದೆ, ಮಿನಿ ವಿಧಾನಸೌಧದ ಬಳಿ ಕುಳಿತು ಪ್ರತಿಭಟಿಸಿದರು. ನಾಲ್ಕು ದಿನಗಳ ಅವಕಾಶ ನೀಡುವಂತೆ ಒತ್ತಾಯಿಸಿದರು. ಡಿಎಸ್ಪಿ ರಾಜಿ ಸಂಧಾನದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

    ಮೂರು ದಿನಗಳನ್ನಾದರೂ ನೀಡಲಿ: ಬೇಡರ ವೇಷ ಆಚರಣೆ ಸಂಬಂಧ ಉಪವಿಭಾಗಾಧಿಕಾರಿ ಸೂಚನೆ ನಂತರ ನಗರದ ರಾಘವೇಂದ್ರ ಮಠದಲ್ಲಿ ಬೇಡರ ವೇಷ ಸಮಿತಿ ಹಾಗೂ ಹೋಳಿ ಉತ್ಸವ ಸಮಿತಿ ಪ್ರಮುಖರು ಸಭೆ ನಡೆಸಿದರು. ಕನಿಷ್ಠ 3 ದಿನಗಳ ಅವಕಾಶವನ್ನಾದರೂ ನೀಡುವಂತೆ ಒತ್ತಾಯಿಸಲು ನಿರ್ಣಯಿಸಲಾಯಿತು. ಈ ವೇಳೆ ಪ್ರಮುಖರಾದ ಉಪೇಂದ್ರ ಪೈ, ಗಣಪತಿ ನಾಯ್ಕ, ಎಂ.ಎಂ.ಭಟ್ಟ, ಪ್ರದೀಪ ಯಲ್ಲನ್ಕರ್, ರಘು ಕಾನಡೆ, ಜಗದೀಶ ಗೌಡ ಇತರರಿದ್ದರು.

    ಮೌಖಿಕ ಆದೇಶ ?: ಬೇಡರವೇಷಕ್ಕೆ 4 ದಿನಗಳ ಅವಕಾಶ ನೀಡಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮೌಖಿಕ ಆದೇಶ ನೀಡಿದ್ದಾರೆ. ಅಧಿಕೃತ ಆದೇಶ ಬರುವುದು ಬಾಕಿಯಿದೆ ಎಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಹೇಳಿದರು. ನಗರದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಸಾಂಪ್ರದಾಯಿಕ ಕಲೆಯಾದ ಬೇಡರವೇಷ ಆಚರಣೆಗೆ 2 ದಿನದ ಚೌಕಟ್ಟು ವಿಧಿಸಲಾಗಿತ್ತು. ಆದರೆ, ಇದಕ್ಕೆ ವಿಧಾನಸಭಾಧ್ಯಕ್ಷರು ಆಕ್ಷೇಪಿಸಿದ್ದು, 4 ದಿನ ಅವಕಾಶ ನೀಡಿ ಆದೇಶಿಸಿದ್ದಾರೆ. ಇದು ಹೋಳಿಯ ಉತ್ಸಾಹ ಇಮ್ಮಡಿಗೊಳಿಸಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts